ಆ್ಯಶಸ್ ಸರಣಿಯಲ್ಲಿ ಕಮಿನ್ಸ್ ಉತ್ತಮ ಪ್ರದರ್ಶನ ನೀಡಲಿದ್ದಾರೆ : ಮಿಚೆಲ್ ಸ್ಟಾರ್ಕ್

Photo Credi : NDTV
ಹೊಸದಿಲ್ಲಿ,ಅ.9: ಆಸ್ಟ್ರೇಲಿಯದ ಕ್ರಿಕೆಟ್ ನಾಯಕ ಪ್ಯಾಟ್ ಕಮಿನ್ಸ್ ಸದ್ಯ ಬೆನ್ನು ನೋವಿನಿಂದ ಚೇತರಿಸಿಕೊಳ್ಳುತ್ತಿದ್ದು, ಈ ತನಕ ಬೌಲಿಂಗ್ ಅಭ್ಯಾಸ ಆರಂಭಿಸದಿದ್ದರೂ ಮುಂಬರುವ ಆ್ಯಶಸ್ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡುವ ಆಶಾವಾದದಲ್ಲಿದ್ದಾರೆ ಎಂದು ಸಹ ಆಟಗಾರ ಮಿಚೆಲ್ ಸ್ಟಾರ್ಕ್ ಹೇಳಿದ್ದಾರೆ.
ಪರ್ತ್ನಲ್ಲಿ ನವೆಂಬರ್ 21ರಂದು ಆರಂಭವಾಗಲಿರುವ ಸರಣಿಯ ಮೊದಲ ಪಂದ್ಯದಲ್ಲಿ ಕಮಿನ್ಸ್ ಆಡದೇ ಇರುವ ಸಾಧ್ಯತೆಯಿದೆ. ತನ್ನ ಫಿಟ್ನೆಸ್ ಕಾಯ್ದುಕೊಳ್ಳಲು ಗಮನ ಹರಿಸಿರುವ ಕಮಿನ್ಸ್ ಇತ್ತೀಚೆಗೆ ಸಿಡ್ನಿಯಲ್ಲಿ ತರಬೇತಿ ಶಿಬಿರದಲ್ಲಿ ಭಾಗವಹಿಸಿದ್ದರು.
ಪರ್ತ್ ಟೆಸ್ಟ್ನಿಂದ ಕಮಿನ್ಸ್ ಹೊರಗುಳಿದರೆ, ಸ್ಕಾಟ್ ಬೋಲ್ಯಾಂಡ್ ಅವರು ಮಿಚೆಲ್ ಸ್ಟಾರ್ಕ್, ಜೋಶ್ ಹೇಝಲ್ವುಡ್ ಹಾಗೂ ನಾಥನ್ ಲಿಯೊನ್ ಅವರನ್ನೊಳಗೊಂಡ ಅನುಭವಿ ಬೌಲಿಂಗ್ ಸರದಿಗೆ ಸೇರ್ಪಡೆಯಾಗಲಿದ್ದಾರೆ.
‘‘ಈಗ ಎಲ್ಲರ ಕಣ್ಣು ಪ್ಯಾಟ್ ಕಮಿನ್ಸ್ ವಾಪಸಾತಿಯ ಮೇಲೆ ನೆಟ್ಟಿದೆ. ಅವರು ಯಾವಾಗಲೂ ಸಕಾರಾತ್ಮಕವಾಗಿ ಯೋಚಿಸುತ್ತಾರೆ. ಪರ್ತ್ ಟೆಸ್ಟ್ ತಯಾರಿಗೆ ಇನ್ನೂ ಕೆಲವು ವಾರಗಳಿವೆ. ಕಮಿನ್ಸ್ಗೆ ತನ್ನ ಫಾರ್ಮ್ಗೆ ಬೇಗನೆ ಮರಳುವ ಸಾಮರ್ಥ್ಯವಿದೆ’’ ಎಂದು ‘ಫೋಕ್ಸ್ ಕ್ರಿಕೆಟ್’ಗೆ ಸ್ಟಾರ್ಕ್ ಹೇಳಿದ್ದಾರೆ.







