ಏಶ್ಯ ಕಪ್ | ಮೈದಾನದಲ್ಲಿ ಆಟಗಾರರಿಂದ ಅನುಚಿತ ವರ್ತನೆ : ಐಸಿಸಿಗೆ ದೂರು ಸಲ್ಲಿಸಿದ ಬಿಸಿಸಿಐ, ಪಿಸಿಬಿ

ಹೊಸದಿಲ್ಲಿ, ಸೆ.25: ಏಶ್ಯ ಕಪ್‌ನಲ್ಲಿ ಈಗಾಗಲೇ ಆವರಿಸಿರುವ ಉದ್ವಿಗ್ನ ವಾತಾವರಣವು ಬೌಂಡರಿ ಗೆರೆಯನ್ನು ದಾಟಿದ್ದು, ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ) ಹಾಗೂ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಇತ್ತೀಚೆಗಿನ ಪಂದ್ಯಗಳಲ್ಲಿ ಆಟಗಾರರ ವರ್ತನೆಯ ಕುರಿತು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಗೆ(ಐಸಿಸಿ) ದೂರು ಸಲ್ಲಿಸಿವೆ.
ಭಾರತದ ನಾಯಕ ಸೂರ್ಯಕುಮಾರ್ ಸೆ.14 ಹಾಗೂ 21ರಂದು ಭಾರತ-ಪಾಕಿಸ್ತಾನ ನಡುವಿನ ಪಂದ್ಯದ ನಂತರ ನೀಡಿರುವ ಹೇಳಿಕೆಯ ಬಗ್ಗೆ ಪಿಸಿಬಿ ಅಧಿಕೃತವಾಗಿ ದೂರು ಸಲ್ಲಿಸಿದೆ.
ಸೆ.14ರಂದು ಪಂದ್ಯದ ನಂತರ ಭಾರತ ತಂಡದ ಗೆಲುವನ್ನು ಪಹಲ್ಗಾಮ್ ಉಗ್ರರ ದಾಳಿಯ ಸಂತ್ರಸ್ತರಿಗೆ ಸಮರ್ಪಿಸಿದ್ದಲ್ಲದೆ, ಆಪರೇಶನ್ ಸಿಂಧೂರದಲ್ಲಿ ಭಾಗಿಯಾಗಿದ್ದ ಭಾರತೀಯ ಸಶಸ್ತ್ರ ಪಡೆಗಳನ್ನು ಸೂರ್ಯಕುಮಾರ್ ಶ್ಲಾಘಿಸಿದ್ದರು.
ಸೆ.21ರಂದು ಸೂಪರ್-4 ಹಂತದ ಪಂದ್ಯದ ನಂತರ ಪಾಕಿಸ್ತಾನ ಆಟಗಾರರಾದ ಫರ್ಹಾನ್ ಹಾಗೂ ಹಾರಿಸ್ ರವೂಫ್ ಅವರ ಅನುಚಿತ ವರ್ತನೆಯ ವಿರುದ್ಧ ಐಸಿಸಿ ಹಾಗೂ ಮ್ಯಾಚ್ ರೆಫರಿ ಆ್ಯಂಡಿ ಪೈಕ್ರಾಫ್ಟ್ ಅವರಿಗೆ ಬಿಸಿಸಿಐ ಅಧಿಕೃತವಾಗಿ ದೂರು ಸಲ್ಲಿಸಿದೆ.
ಫರ್ಹಾನ್ ಅವರು ಅರ್ಧಶತಕ ಗಳಿಸಿದ ನಂತರ ತನ್ನ ಬ್ಯಾಟನ್ನು ಗನ್ ರೀತಿ ಹಿಡಿದು ಸಂಭ್ರಮಾಚರಣೆ ನಡೆಸಿರುವ ಕುರಿತು ದೂರಿನಲ್ಲಿ ವಿಶೇಷವಾಗಿ ಉಲ್ಲೇಖಿಸಲಾಗಿದೆ. ಈ ಸನ್ನೆಯು ಪ್ರಚೋದನಾಕಾರಿಯಾಗಿ ಕಂಡುಬಂದಿತ್ತು.
ಸಂಜು ಸ್ಯಾಮ್ಸನ್ ವಿಕೆಟ್ ಪಡೆದ ನಂತರ ಭಾರತೀಯ ಪ್ರೇಕ್ಷಕರತ್ತ ಆರು ಬೆರಳನ್ನು ತೋರಿಸಿದ ಹಾರಿಸ್ ರವೂಫ್ ವರ್ತನೆಯು ವಿವಾದಕ್ಕೆ ಕಾರಣವಾಗಿತ್ತು. ಮೇ ತಿಂಗಳಲ್ಲಿ ಭಾರತದ ಆಪರೇಶನ್ ಸಿಂಧೂರ ಕಾರ್ಯಾಚರಣೆಯ ನಂತರ ಆರು ಭಾರತೀಯ ಫೈಟರ್ ಜೆಟ್‌ಗಳನ್ನು ಹೊಡೆದುರುಳಿಸಿರುವುದನ್ನು ಉಲ್ಲೇಖಿಸಿ ರವೂಫ್ ಈ ರೀತಿ ವರ್ತಿಸಿದ್ದರು ಎಂದು ವರದಿಯಾಗಿದೆ.
ಐಸಿಸಿ ಶೀಘ್ರವೇ ಈ ಕುರಿತು ವಿಚಾರಣೆ ನಡೆಸಲಿದೆ ಎಂದು ವರದಿಯಾಗಿದೆ.







