2025ರ ಏಶ್ಯಕಪ್ ಟೂರ್ನಿ ಸೆಪ್ಟಂಬರ್ ನಲ್ಲಿ ಯುಎಇನಲ್ಲಿ ಆರಂಭ

PC : NDTV
ದುಬೈ, ಜು.26: 2025ರ ಆವೃತ್ತಿಯ ಪುರುಷರ ಏಶ್ಯಕಪ್ ಟೂರ್ನಿಯು ಯುಎಇನಲ್ಲಿ ಸೆಪ್ಟಂಬರ್ 9ರಿಂದ 28ರ ತನಕ ನಡೆಯಲಿದೆ ಎಂದು ಎಸಿಸಿ ಅಧ್ಯಕ್ಷ ಹಾಗೂ ಪಿಸಿಬಿ ಅಧ್ಯಕ್ಷ ಮುಹ್ಸಿನ್ ನಖ್ವಿ ಸಾಮಾಜಿಕ ಮಾಧ್ಯಮದಲ್ಲಿ ಶನಿವಾರ ದೃಢಪಡಿಸಿದ್ದಾರೆ.
‘‘ಯುಎಇನಲ್ಲಿ ನಡೆಯಲಿರುವ ಎಸಿಸಿ ಪುರುಷರ ಏಶ್ಯಕಪ್-2025ರ ದಿನಾಂಕವನ್ನು ಖಚಿತಪಡಿಸಲು ನನಗೆ ಸಂತೋಷವಾಗುತ್ತಿದೆ. ಪ್ರತಿಷ್ಠಿತ ಪಂದ್ಯಾವಳಿಯು ಸೆಪ್ಟಂಬರ್ 9ರಿಂದ 28ರ ತನಕ ನಡೆಯಲಿದೆ. ಕ್ರಿಕೆಟ್ ನ ಆಕರ್ಷಕ ಪ್ರದರ್ಶನವನ್ನು ಎದುರು ನೋಡುತ್ತಿದ್ದೇವೆ. ವಿವರವಾದ ವೇಳಾಪಟ್ಟಿಯನ್ನು ಶೀಘ್ರವೇ ಪ್ರಕಟಿಸಲಾಗುವುದು’’ ಎಂದು ಮುಹ್ಸಿನ್ ನಖ್ವಿ ಎಕ್ಸ್ನಲ್ಲಿ ಶುಕ್ರವರ ಬರೆದಿದ್ದಾರೆ.
ಈ ಟೂರ್ನಿಯನ್ನು ಟಿ20 ಮಾದರಿಯಲ್ಲಿ ಆಡಲಾಗುತ್ತದೆ. ಒಟ್ಟು 8 ತಂಡಗಳಾದ ಭಾರತ, ಪಾಕಿಸ್ತಾನ, ಶ್ರೀಲಂಕಾ, ಅಫ್ಘಾನಿಸ್ತಾನ, ಬಾಂಗ್ಲಾದೇಶ, ಯುಎಇ, ಒಮಾನ್ ಹಾಗೂ ಹಾಂಕಾಂಗ್ ತಂಡಗಳು ಭಾಗವಹಿಸಲಿವೆ.
ಭಾರತ ಹಾಗೂ ಪಾಕಿಸ್ತಾನ ತಂಡಗಳು ಒಂದೇ ಗುಂಪಿನಲ್ಲಿರುವ ಸಾಧ್ಯತೆಯಿದೆ ಎಂದು ಆಂಗ್ಲಪತ್ರಿಕೆ ಈ ಹಿಂದೆ ವರದಿ ಮಾಡಿದೆ. ಎಎಪ್ರಿಲ್ ನಲ್ಲಿ ಪಹಲ್ಗಾಮ್ ಉಗ್ರರ ದಾಳಿಯ ನಂತರ ಸಾಂಪ್ರದಾಯಿಕ ಎದುರಾಳಿಗಳು ಮೊದಲ ಬಾರಿ ಮುಖಾಮುಖಿಯಾಗಲು ಸಜ್ಜಾಗಿವೆ.
ಭಾರತ ತಂಡವು ಹಾಲಿ ಏಶ್ಯಕಪ್ ಚಾಂಪಿಯನ್ ಆಗಿದ್ದು, 2023ರ ಏಶ್ಯಕಪ್ ಫೈನಲ್ ನಲ್ಲಿ ಶ್ರೀಲಂಕಾ ತಂಡವನ್ನು ಮಣಿಸಿ ಚಾಂಪಿಯನ್ ಆಗಿತ್ತು. ಈ ಹಿಂದಿನ ಟಿ20 ಆವೃತ್ತಿಯ ಏಶ್ಯಕಪ್ ಟೂರ್ನಿಯು 2022ರಲ್ಲಿ ನಡೆದಿದ್ದು, ಶ್ರೀಲಂಕಾ ಚಾಂಪಿಯನ್ ಆಗಿತ್ತು.
ಪ್ರಸಕ್ತ ಏಶ್ಯಕಪ್ ಟೂರ್ನಿಯು 2026ರ ಫೆಬ್ರವರಿಯಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಪೂರ್ವತಯಾರಿ ಪಂದ್ಯಾವಳಿಯಾಗಿದೆ. ಈ ಟೂರ್ನಿಯನ್ನು ಭಾರತ ಹಾಗೂ ಶ್ರೀಲಂಕಾ ಜಂಟಿಯಾಗಿ ಆಯೋಜಿಸಲಿವೆ.
ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯ ಸೇರಿದಂತೆ ವಿವರವಾದ ವೇಳಾಪಟ್ಟಿ ಶೀಘ್ರವೇ ಪ್ರಕಟಿಸಲಾಗುತ್ತದೆ ಎಂದು ವರದಿಯಾಗಿದೆ.







