ಏಶ್ಯಕಪ್: ಚಾಂಪಿಯನ್ ಗಳ ಸಂಪೂರ್ಣ ಪಟ್ಟಿ, ಫಲಿತಾಂಶಗಳತ್ತ ಒಂದು ನೋಟ

Photo: X | Asia Cup
ಹೊಸದಿಲ್ಲಿ, ಆ.16: ಏಶ್ಯಕಪ್ ಉಪಖಂಡದ ಪ್ರಮುಖ ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯಾವಳಿಯಾಗಿದ್ದು, 1984ರಲ್ಲಿ ಏಶ್ಯನ್ ಕ್ರಿಕೆಟ ಕೌನ್ಸಿಲ್(ಎಸಿಸಿ)ಬ್ಯಾನರ್ ನಡಿ ಮೊದಲ ಬಾರಿ ನಡೆದಿತ್ತು. ಮುಂಬರುವ ಐಸಿಸಿ ಜಾಗತಿಕ ಟೂರ್ನಿಯನ್ನು ಆಧರಿಸಿ 2016ರಿಂದ 50 ಓವರ್ ಹಾಗೂ 20 ಓವರ್ಗಳ ಮಾದರಿಯಲ್ಲಿ ಏಶ್ಯಕಪ್ ಟೂರ್ನಿಯನ್ನು ನಡೆಸಲಾಗುತ್ತಿದೆ.
ಮೂರು ದಶಕಗಳಿಂದ ಉಪಖಂಡದ ಅಗ್ರ ಕ್ರಿಕೆಟ್ ದೇಶಗಳು ಮಾತ್ರ ಸ್ಪರ್ಧಾವಳಿಯಲ್ಲಿ ಭಾಗವಹಿಸುತ್ತಿವೆ.
ಭಾರತ, ಶ್ರೀಲಂಕಾ ಹಾಗೂ ಪಾಕಿಸ್ತಾನ ತಂಡಗಳು ಈ ಪಂದ್ಯಾವಳಿಯಲ್ಲಿ ಪ್ರಾಬಲ್ಯ ಸಾಧಿಸುತ್ತಾ ಬಂದಿವೆ. ಈ ಮೂರು ತಂಡಗಳು ಈ ತನಕದ ಪ್ರಶಸ್ತಿಗಳನ್ನು ತಮ್ಮೊಳಗೆ ಹಂಚಿಕೊಂಡಿವೆ. ಭಾರತ ತಂಡವು 8 ಬಾರಿ ಏಶ್ಯಕಪ್ ಪ್ರಶಸ್ತಿಯನ್ನು ಜಯಿಸಿ ಚಾಂಪಿಯನ್ ಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದರೆ, ಶ್ರೀಲಂಕಾ ತಂಡ ಆರು ಹಾಗೂ ಪಾಕಿಸ್ತಾನ ತಂಡವು 2 ಬಾರಿ ಏಶ್ಯಕಪ್ ಗೆದ್ದುಕೊಂಡಿದೆ. ಬಾಂಗ್ಲಾದೇಶ ತಂಡವು ಹಲವು ಬಾರಿ ಫೈನಲ್ ಗೆ ತಲುಪಿದ್ದರೂ ಈ ತನಕ ಪ್ರಶಸ್ತಿ ಗೆದ್ದಿಲ್ಲ.
ಈ ಪಂದ್ಯಾವಳಿಯು ಭಾರತ, ಪಾಕಿಸ್ತಾನ ಹಾಗೂ ಶ್ರೀಲಂಕಾ ತಂಡಗಳ ನಡುವಿನ ತೀವ್ರ ಹಣಾಹಣಿ ಹಾಗೂ ಸ್ಪರ್ಧೆಗೆ ವೇದಿಕೆ ಒದಗಿಸಿದೆ. ವಿಶೇಷವೆಂದರೆ ಶ್ರೀಲಂಕಾ ತಂಡ ಮಾತ್ರ ಪ್ರತೀ ಆವೃತ್ತಿಯಲ್ಲೂ ಆಡಿದೆ.
2025ರ ಆವೃತ್ತಿಯ ಸ್ಪರ್ಧಾವಳಿಯಲ್ಲಿ 8 ತಂಡಗಳು ಭಾಗವಹಿಸಲಿದ್ದು, ಸೆಪ್ಟಂಬರ್ 9ರಂದು ನಡೆಯಲಿರುವ ಆರಂಭಿಕ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡವು ಹಾಂಕಾಂಗ್ ತಂಡವನ್ನು ಎದುರಿಸಲಿದೆ. ತಂಡಗಳನ್ನು ಎರಡು ಗುಂಪುಗಳಾಗಿ ವಿಭಜಿಸಲಾಗಿದ್ದು, ಪ್ರತೀ ಗುಂಪಿನಲ್ಲಿ ನಾಲ್ಕು ತಂಡಗಳಿವೆ. ಪ್ರತೀ ತಂಡಗಳು ಮೂರು ಪಂದ್ಯಗಳನ್ನು ಆಡಲಿವೆ.
ಹಾಲಿ ಚಾಂಪಿಯನ್ ಭಾರತ ತಂಡವು ಸೆಪ್ಟಂಬರ್ 10ರಂದು ಯುಎಇ ತಂಡವನ್ನು ಎದುರಿಸುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ.
ಏಶ್ಯಕಪ್ ಫೈನಲ್ ನ ಸಂಪೂರ್ಣ ಪಟ್ಟಿ ಇಂತಿದೆ
ವರ್ಷ ವಿನ್ನರ್ ಫಲಿತಾಂಶ ಆತಿಥೇಯ ದೇಶ
1984 ಭಾರತ ರೌಂಡ್-ರಾಬಿನ್ ನಲ್ಲಿ ಭಾರತಕ್ಕೆ ಅಗ್ರ ಸ್ಥಾನ ಯುಎಇ
1986 ಶ್ರೀಲಂಕಾ ಪಾಕಿಸ್ತಾನದ ವಿರುದ್ಧ 5 ವಿಕೆಟ್ ಜಯ ಶ್ರೀಲಂಕಾ
1988 ಭಾರತ ಶ್ರೀಲಂಕಾ ವಿರುದ್ಧ 6 ವಿಕೆಟ್ ಜಯ ಬಾಂಗ್ಲಾದೇಶ
1990 ಭಾರತ ಶ್ರೀಲಂಕಾ ವಿರುದ್ಧ 7 ವಿಕೆಟ್ ಗೆಲುವು ಭಾರತ
1995 ಭಾರತ ಶ್ರೀಲಂಕಾ ವಿರುದ್ಧ 8 ವಿಕೆಟ್ ಗೆಲುವು ಯುಎಇ
1997 ಶ್ರೀಲಂಕಾ ಭಾರತದ ವಿರುದ್ಧ 8 ವಿಕೆಟ್ ಗೆಲುವು ಶ್ರೀಲಂಕಾ
2000 ಪಾಕಿಸ್ತಾನ ಶ್ರೀಲಂಕಾ ಎದುರು 39 ರನ್ ಜಯ ಬಾಂಗ್ಲಾದೇಶ
2004 ಶ್ರೀಲಂಕಾ ಭಾರತದ ವಿರುದ್ಧ 25 ರನ್ ಗೆಲುವು ಶ್ರೀಲಂಕಾ
2008 ಶ್ರೀಲಂಕಾ ಭಾರತ ವಿರುದ್ಧ 100 ರನ್ ಗೆಲುವು ಪಾಕಿಸ್ತಾನ
2010 ಭಾರತ ಶ್ರೀಲಂಕಾ ವಿರುದ್ಧ 81 ರನ್ ಜಯ ಶ್ರೀಲಂಕಾ
2012 ಪಾಕಿಸ್ತಾನ ಬಾಂಗ್ಲಾದೇಶ ವಿರುದ್ಧ 2 ರನ್ ಜಯ ಬಾಂಗ್ಲಾದೇಶ
2014 ಶ್ರೀಲಂಕಾ ಪಾಕಿಸ್ತಾನದ ವಿರುದ್ಧ 5 ವಿಕೆಟ್ ಜಯ ಬಾಂಗ್ಲಾದೇಶ
2016 ಭಾರತ ಬಾಂಗ್ಲಾದೇಶ ವಿರುದ್ಧ 8 ವಿಕೆಟ್ ಗೆಲುವು ಬಾಂಗ್ಲಾದೇಶ
2018 ಭಾರತ ಬಾಂಗ್ಲಾದೇಶ ವಿರುದ್ಧ 3 ವಿಕೆಟ್ ಜಯ ಯುಎಇ
2022 ಶ್ರೀಲಂಕಾ ಪಾಕಿಸ್ತಾನ ವಿರುದ್ಧ 23 ರನ್ ಗೆಲುವು ಯುಎಇ
2023 ಭಾರತ ಶ್ರೀಲಂಕಾ ವಿರುದ್ಧ 10 ವಿಕೆಟ್ ಜಯ ಪಾಕಿಸ್ತಾನ/ಶ್ರೀಲಂಕಾ
2025 ----- ------------------- ಯುಎಇ







