ಏಶ್ಯ ಕಪ್ | ಭಾರತ-ಪಾಕಿಸ್ತಾನದ ಹೆಡ್-ಟು-ಹೆಡ್ ದಾಖಲೆ

PC : thehindu.com
ಮುಂಬೈ, ಆ. 18: ಮುಂಬರುವ 2025ರ ಆವೃತ್ತಿಯ ಏಶ್ಯ ಕಪ್ ಪಂದ್ಯಾವಳಿಯನ್ನು ಟಿ20 ಮಾದರಿಯಲ್ಲಿ ಆಡಲಾಗುತ್ತದೆ. ಪಂದ್ಯಾವಳಿಯು ಯುಎಇಯಲ್ಲಿ ಸೆಪ್ಟಂಬರ್ 9ರಿಂದ 28ರವರೆಗೆ ನಡೆಯಲಿದೆ. ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಪಂದ್ಯವು ಸೆಪ್ಟಂಬರ್14ರಂದು ದುಬೈಯಲ್ಲಿ ನಡೆಯಲಿದೆ.
ಏಶ್ಯ ಕಪ್ ಪಂದ್ಯಾವಳಿಯ ಪಂದ್ಯಗಳು 2026ರ ಟಿ20 ವಿಶ್ವಕಪ್ಗೆ ಮುನ್ನ ಭಾರತ ಮತ್ತು ಪಾಕಿಸ್ತಾನ ತಂಡಗಳಿಗೆ ಮಹತ್ವದ ಅಭ್ಯಾಸ ಪಂದ್ಯಗಳಾಗಿ ಕೆಲಸ ಮಾಡಲಿವೆ.
ಭಾರತ-ಪಾಕಿಸ್ತಾನ ಪಂದ್ಯಗಳು ಕ್ರಿಕೆಟ್ ನ ಅತ್ಯಂತ ದೊಡ್ಡ ಮುಖಾಮುಖಿಯಾಗಿವೆ. ಇತ್ತೀಚಿನ ವರ್ಷಗಳಲ್ಲಿ ಈ ಪಂದ್ಯಗಳು ನಿರೀಕ್ಷಿತ ರೋಮಾಂಚನವನ್ನು ಒದಗಿಸದಿದ್ದರೂ, ಆ ರೋಮಾಂಚಕತೆ ಮಾಸಿಲ್ಲ. ಈ ಎರಡು ತಂಡಗಳು ಏಶ್ಯಕಪ್ ಪಂದ್ಯಾವಳಿಯಲ್ಲಿ ಆಳವಾಗಿ ಮುಂದುವರಿದರೆ, ಫೈನಲ್ ಸೇರಿದಂತೆ ಮೂರು ಬಾರಿ ಎದುರಾಗುವ ಸಾಧ್ಯತೆಗಳಿವೆ.
ಏಶ್ಯ ಕಪ್ ಇತಿಹಾಸದಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ವಿವಿಧ ಮಾದರಿಗಳಲ್ಲಿ 18 ಬಾರಿ ಮುಖಾಮುಖಿಯಾಗಿವೆ. ಭಾರತ 10 ಬಾರಿ ಗೆದ್ದರೆ, ಪಾಕಿಸ್ತಾನ ಆರು ಪಂದ್ಯಗಳಲ್ಲಿ ಜಯ ಗಳಿಸಿವೆ. ಎರಡು ಪಂದ್ಯಗಳಲ್ಲಿ ಫಲಿತಾಂಶ ಬಂದಿಲ್ಲ. ಏಶ್ಯ ಕಪ್ನ ಟಿ20 ಮಾದರಿಯಲ್ಲಿ, ಈ ತಂಡಗಳು ಮೂರು ಬಾರಿ ಎದುರು-ಬದುರಾಗಿವೆ. ಭಾರತ ಎರಡು ಬಾರಿ ಗೆದ್ದರೆ, ಪಾಕಿಸ್ತಾನ ಒಮ್ಮೆ ಜಯ ಗಳಿಸಿದೆ. ಏಕದಿನ ಮಾದರಿಯಲ್ಲಿ ಅವುಗಳ ನಡುವೆ 15 ಪಂದ್ಯಗಳು ನಡೆದಿವೆ. ಈ ಪೈಕಿ ಎಂಟರಲ್ಲಿ ಭಾರತ ಗೆದ್ದರೆ, ಐದು ಪಂದ್ಯಗಳನ್ನು ಪಾಕಿಸ್ತಾನ ಗೆದ್ದಿದೆ. ಎರಡು ಪಂದ್ಯಗಳಲ್ಲಿ ಫಲಿತಾಂಶ ಬಂದಿಲ್ಲ.
ಈವರೆಗಿನ ಮುಖಾಮುಖಿಗಳಲ್ಲಿ ಭಾರತ ಮೇಲುಗೈ ಪಡೆದಿದೆ. ಮತ್ತೊಮ್ಮೆ ತನ್ನ ಪ್ರಾಬಲ್ಯವನ್ನು ಮುಂದುವರಿಸುವುದನ್ನು ಎದುರು ನೋಡುತ್ತಿದೆ.







