ಏಶ್ಯಕಪ್: ಭಾರತ ತಂಡದಿಂದ ಹೊರಗುಳಿದ ಪ್ರಮುಖ ಐವರು ಆಟಗಾರರು ಯಾರ್ಯಾರು?

PC : NDTV
ಮುಂಬೈ: ಏಶ್ಯಕಪ್ ಪಂದ್ಯಾವಳಿಗಾಗಿ 15 ಸದಸ್ಯರ ತಂಡವನ್ನು ಬಿಸಿಸಿಐ ಮಂಗಳವಾರ ಪ್ರಕಟಿಸಿದೆ. ಸೂರ್ಯಕುಮಾರ್ ಯಾದವ್ ನಾಯಕನಾಗಿದ್ದರೆ, ಶುಭಮನ್ ಗಿಲ್ರನ್ನು ಭಾರತದ ಟಿ-20 ತಂಡಕ್ಕೆ ಸೇರಿಸಿಕೊಂಡಿದ್ದಲ್ಲದೆ, ಉಪ ನಾಯಕನ ಪಟ್ಟವನ್ನೂ ನೀಡಲಾಗಿದೆ. ಅಚ್ಚರಿಯೆಂಬಂತೆ ಯಶಸ್ವಿ ಜೈಸ್ವಾಲ್ ಹಾಗೂ ಶ್ರೇಯಸ್ ಅಯ್ಯರ್ ತಂಡದಲ್ಲಿ ಸ್ಥಾನ ಪಡೆದಿಲ್ಲ.
ತಂಡದಿಂದ ಹೊರಗುಳಿದ ಪ್ರಮುಖ ಐವರು ಆಟಗಾರರು:
1. ಶ್ರೇಯಸ್ ಅಯ್ಯರ್ ಅವರು 2023ರಲ್ಲಿ ಆಸ್ಟ್ರೇಲಿಯದ ವಿರುದ್ಧ ಭಾರತದ ಪರ ಕೊನೆಯ ಬಾರಿ ಟಿ-20 ಪಂದ್ಯವನ್ನು ಆಡಿದ್ದರು. ಈ ವರ್ಷದ ಐಪಿಎಲ್ನಲ್ಲಿ ಅಯ್ಯರ್ ನೀಡಿದ್ದ ಪ್ರದರ್ಶನವು ಹಲವರಲ್ಲಿ ಮರಳಿ ತಂಡಕ್ಕೆ ಸೇರುವ ನಿರೀಕ್ಷೆ ಮೂಡಿಸಿತ್ತು. ಅವರು 50.33ರ ಸರಾಸರಿಯಲ್ಲಿ ಒಟ್ಟು 604 ರನ್ ಗಳಿಸಿ ಪಂಜಾಬ್ ಫ್ರಾಂಚೈಸಿ ಫೈನಲ್ಗೆ ತಲುಪುವಲ್ಲಿ ತನ್ನದೇ ಆದ ಕೊಡುಗೆ ನೀಡಿದ್ದರು.
2. ಯಶಸ್ವಿ ಜೈಸ್ವಾಲ್ ಭಾರತ ತಂಡದಿಂದ ಹೊರಗುಳಿದ ಇನ್ನೋರ್ವ ಪ್ರಮುಖ ಆಟಗಾರನಾಗಿದ್ದಾರೆ. ಆರಂಭಿಕ ಸ್ಥಾನಕ್ಕಾಗಿ ಪ್ರಬಲ ಸ್ಪರ್ಧಿಯಾಗಿ ಕಂಡುಬಂದಿದ್ದರು. ಭಾರತವು 2024ರಲ್ಲಿ ಟಿ-20 ವಿಶ್ವಕಪ್ ಗೆದ್ದಾಗ ಮೀಸಲು ಆರಂಭಿಕ ಆಟಗಾರನಾಗಿದ್ದರು. ಈ ವರ್ಷದ ಐಪಿಎಲ್ನಲ್ಲಿ ರಾಜಸ್ಥಾನ ರಾಯಲ್ಸ್ ಪರ 43ರ ಸರಾಸರಿಯಲ್ಲಿ ಒಟ್ಟು 559 ರನ್ ಕಲೆ ಹಾಕಿ ಗಮನ ಸೆಳೆದಿದ್ದರು.
3. ವಾಶಿಂಗ್ಟನ್ ಸುಂದರ್ ತನ್ನ ಆಫ್ ಸ್ಪಿನ್ ಬೌಲಿಂಗ್ ಮೂಲಕ ಆಲ್ರೌಂಡ್ ಪ್ರದರ್ಶನ ನೀಡುತ್ತಾ ಬಂದಿದ್ದು, ಇವರು ಕೂಡ ತಂಡದಿಂದ ಹೊರಗುಳಿದಿದ್ದಾರೆ. ಇತ್ತೀಚೆಗೆ ಕೊನೆಗೊಂಡಿರುವ ಇಂಗ್ಲೆಂಡ್ ತಂಡದ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದು, ಅವರನ್ನು ಏಶ್ಯಕಪ್ನಿಂದ ಹೊರಗಿಟ್ಟಿರುವುದು ಅಚ್ಚರಿ ತಂದಿದೆ.
4. ಪ್ರಸಿದ್ಧ ಕೃಷ್ಣ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಆಡಿದ್ದರು. ಈ ವರ್ಷದ ಐಪಿಎಲ್ ಟೂರ್ನಿಯಲ್ಲಿ 15 ಪಂದ್ಯಗಳಲ್ಲಿ ಒಟ್ಟು 25 ವಿಕೆಟ್ಗಳನ್ನು ಉರುಳಿಸಿ ‘ಪರ್ಪಲ್ ಕ್ಯಾಪ್’ ಗಿಟ್ಟಿಸಿಕೊಂಡಿದ್ದರು. ಕನ್ನಡಿಗ ಕೃಷ್ಣ ಏಶ್ಯಕಪ್ ತಂಡದಲ್ಲಿ ಸ್ಥಾನ ಪಡೆಯದಿರುವುದು ಅಚ್ಚರಿಗೆ ಕಾರಣವಾಗಿದೆ.
5. ಮುಹಮ್ಮದ್ ಸಿರಾಜ್ ಇಂಗ್ಲೆಂಡ್ ವಿರುದ್ಧ ಭಾರತ ತಂಡವು ಟೆಸ್ಟ್ ಸರಣಿಯನ್ನು ಸಮಬಲಗೊಳಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಮುಹಮ್ಮದ್ ಸಿರಾಜ್ ಹೆಸರು ಏಶ್ಯಕಪ್ ತಂಡದಲ್ಲಿ ಕಂಡುಬಂದಿಲ್ಲ. ಟೆಸ್ಟ್ ಸರಣಿಯ 5ನೇ ಹಾಗೂ ಕೊನೆಯ ಪಂದ್ಯದಲ್ಲಿ ಭಾರತದ ಗೆಲುವಿನಲ್ಲಿ ಮಹತ್ವದ ಪಾತ್ರವಹಿಸಿದ್ದ ಸಿರಾಜ್ ಈ ವರ್ಷದ ಐಪಿಎಲ್ ಟೂರ್ನಿಯಲ್ಲಿ ಒಟ್ಟು 16 ವಿಕೆಟ್ಗಳನ್ನು ಉರುಳಿಸಿದ್ದರು.







