ಏಶ್ಯ ಕಪ್ | ಶುಭಮನ್ ಸೇರ್ಪಡೆ, ಸಂಜು ಸ್ಥಾನಕ್ಕೆ ಸಂಚಕಾರ

ಶುಭಮನ್ ಗಿಲ್ |PC : X
ಹೊಸದಿಲ್ಲಿ, ಆ.20: ಯುಎಇನಲ್ಲಿ ನಡೆಯಲಿರುವ ಮುಂಬರುವ ಏಶ್ಯಕಪ್ ಟೂರ್ನಿಗಾಗಿ ಶುಭಮನ್ ಗಿಲ್ ರನ್ನು ಉಪ ನಾಯಕನಾಗಿ ಆಯ್ಕೆ ಮಾಡಿರುವುದು ಭಾರತೀಯ ಕ್ರಿಕೆಟ್ ತಂಡದಲ್ಲಿ ಸಂಜು ಸ್ಯಾಮ್ಸನ್ ಸ್ಥಾನದ ಬಗ್ಗೆ ಚರ್ಚೆ ಹುಟ್ಟು ಹಾಕಿದೆ.
ಆಯ್ಕೆ ಸಮಿತಿಯ ಮುಖ್ಯಸ್ಥ ಅಜಿತ್ ಅಗರ್ಕರ್ ಅವರು ತಂಡವನ್ನು ಪ್ರಕಟಿಸಿರುವ ರೀತಿಯು ಒಮಾನ್ ವಿರುದ್ಧ ಭಾರತ ಆಡಲಿರುವ ಮೊದಲ ಪಂದ್ಯದಲ್ಲಿ ಆಡುವ 11ರ ಬಳಗದಲ್ಲಿ ಗಿಲ್ ಅವರು ಅಭಿಷೇಕ್ ಶರ್ಮಾ ಜೊತೆ ಇನಿಂಗ್ಸ್ ಆರಂಭಿಸುವ ಕುರಿತ ವದಂತಿಗೆ ಪುಷ್ಠಿ ನೀಡಿದೆ.
ಅಜಿತ್ ಅಗರ್ಕರ್ ಅವರು ಸ್ಯಾಮ್ಸನ್ ಹಾಗೂ ರಿಂಕು ಸಿಂಗ್ ಗಿಂತ ಮೊದಲೇ ಗಿಲ್ ಹಾಗೂ ಜಿತೇಶ್ ಶರ್ಮಾರ ಹೆಸರನ್ನು ಓದಿದ್ದರು. ಇದು ತಂಡದ ಸಂಯೋಜನೆಯ ಬಗ್ಗೆ ಊಹಾಪೋಹಕ್ಕೆ ಕಾರಣವಾಗಿದೆ. ಇತ್ತೀಚೆಗೆ ಆರಂಭಿಕ ಆಟಗಾರನಾಗಿ ಯಶಸ್ಸು ಗಳಿಸಿದ್ದರೂ ಸಂಜು ಸ್ಯಾಮ್ಸನ್ ಪಾತ್ರದ ಬಗ್ಗೆ ಪ್ರಶ್ನೆ ಎದ್ದಿದೆ.
ಬ್ಯಾಟಿಂಗ್ ಸರದಿಯಲ್ಲಿ ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್, ಶಿವಂ ದುಬೆ, ಹಾರ್ದಿಕ್ ಪಾಂಡ್ಯ ಹಾಗೂ ಅಕ್ಷರ್ ಪಟೇಲ್ ಅವರು ಮೂರರಿಂದ 7ನೇ ಕ್ರಮಾಂಕದಲ್ಲಿ ಆಡುವ ಸಾಧ್ಯತೆಯನ್ನು ಬಿಂಬಿಸುತ್ತಿದೆ. ಈ ವ್ಯವಸ್ಥೆಯು ಅಗ್ರ ಸರದಿಯಲ್ಲಿ ಸ್ಯಾಮ್ಸನ್ ಗೆ ಸೀಮಿತ ಅವಕಾಶಗಳನ್ನು ಒದಗಿಸಿದೆ.
ಶುಭಮನ್ ಗಿಲ್ರನ್ನು ಟಿ-20 ತಂಡಕ್ಕೆ ಆಯ್ಕೆ ಮಾಡಿರುವ ಟೀಮ್ ಇಂಡಿಯಾದ ಮ್ಯಾನೇಜ್ ಮೆಂಟ್ ವಿರುದ್ಧ ಭಾರತದ ಮಾಜಿ ಸ್ಪಿನ್ನರ್ ಆರ್. ಅಶ್ವಿನ್ ವಾಗ್ದಾಳಿ ನಡೆಸಿದರು.
‘‘ಆಯ್ಕೆ ಸಮಿತಿಯು ಶುಭಮನ್ ಗಿಲ್ ರನ್ನು ಭವಿಷ್ಯದ ನಾಯಕನೆಂದು ಪರಿಗಣಿಸಿದೆ. ಬಹುಶಃ ಅವರು ಎಲ್ಲ ಸ್ವರೂಪದ ಕ್ರಿಕೆಟಿಗೆ ನಾಯಕರಾಗಬಹುದು. ಆದರೆ ಎಲ್ಲ ಪ್ರಕಾರದ ಪಂದ್ಯಗಳಲ್ಲಿ ಒಬ್ಬನೇ ನಾಯಕನಿರುವುದು ಅನಿವಾರ್ಯವಲ್ಲ. ನೀವು ಗಿಲ್ ಅವರನ್ನು ಉಪ ನಾಯಕ ಎಂದು ಘೋಷಿಸಿದ್ದೀರಿ, ಹೀಗಾಗಿ ಸಂಜು ಸ್ಯಾಮ್ಸನ್ ಅವರ ಸ್ಥಾನಕ್ಕೆ ಸಂಚಕಾರ ಬಂದಿದೆ. ಸಂಜು ಆಡುವುದಿಲ್ಲ, ಶುಭಮನ್ ಗಿಲ್ ಆಡುತ್ತಾರೆ, ಗಿಲ್ ಬ್ಯಾಟಿಂಗ್ ಆರಂಭಿಸುತ್ತಾರೆ’’ ಎಂದು ಅಶ್ವಿನ್ ಹೇಳಿದ್ದಾರೆ.
ಐಪಿಎಲ್ನಲ್ಲಿ ರಾಜಸ್ಥಾನ ರಾಯಲ್ಸ್ ನಾಯಕನಾಗಿದ್ದ ಸ್ಯಾಮ್ಸನ್ ಇತ್ತೀಚೆಗೆ ಉತ್ತಮ ಪ್ರದರ್ಶನ ನೀಡಿದ ಹೊರತಾಗಿಯೂ ಏಶ್ಯಕಪ್ ಆರಂಭಕ್ಕೂ ಮೊದಲು ಅನಿಶ್ಚಿತತೆ ಎದುರಿಸುತ್ತಿದ್ದಾರೆ.







