ಏಷ್ಯಾ 'ಕಪ್' ವಿವಾದ | ನನ್ನ ಅನುಮತಿಯಿಲ್ಲದೆ ಟ್ರೋಫಿ ಮುಟ್ಟುವಂತಿಲ್ಲ: ಎಸಿಸಿ ಅಧ್ಯಕ್ಷ, ಪಾಕಿಸ್ತಾನದ ಸಚಿವ ನಖ್ವಿ ಎಚ್ಚರಿಕೆ

ಮೊಹ್ಸಿನ್ ನಖ್ವಿ | Photo Credit : NDTV
ಲಾಹೋರ್: “ನನ್ನ ಅನುಮತಿಯಿಲ್ಲದೆ ಟ್ರೋಫಿ ಮುಟ್ಟುವಂತಿಲ್ಲ” ಎಂದು ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರು ಎಚ್ಚರಿಕೆ ನೀಡಿದ್ದಾರೆ.
ಸೆಪ್ಟೆಂಬರ್ 28ರಂದು ಭಾರತ ಮತ್ತು ಪಾಕಿಸ್ತಾನ ನಡುವಿನ ಏಷ್ಯಾ ಕಪ್ ಫೈನಲ್ ಪಂದ್ಯ ನಂತರ, ಟ್ರೋಫಿಯನ್ನು ಪಾಕಿಸ್ತಾನದ ಸಚಿವರೂ ಆಗಿರುವ ನಖ್ವಿ ಅವರಿಂದ ಸ್ವೀಕರಿಸಲು ಭಾರತೀಯ ಆಟಗಾರರು ನಿರಾಕರಿಸಿದ ಹಿನ್ನೆಲೆಯಲ್ಲಿ ನಖ್ವಿಯೇ ಟ್ರೋಫಿಯನ್ನು ಸ್ವತಃ ಕೊಂಡೊಯ್ದಿದ್ದರು.
“ದುಬೈನ ಎಸಿಸಿ ಕಚೇರಿಯಲ್ಲಿಯೇ ಟ್ರೋಫಿ ಇಡಲಾಗಿದೆ. ಎಸಿಸಿ ಅಧ್ಯಕ್ಷ ನಖ್ವಿಯ ಅನುಮತಿ ಹಾಗೂ ಉಪಸ್ಥಿತಿ ಇಲ್ಲದೆ ಅದನ್ನು ಸ್ಥಳಾಂತರಿಸಲು ಅಥವಾ ಪ್ರದರ್ಶಿಸಲು ಯಾರಿಗೂ ಅವಕಾಶವಿಲ್ಲ” ಎಂದು ಮೂಲಗಳು ತಿಳಿಸಿವೆ ಎಂದು ಪಿಟಿಐ ಸುದ್ದಿ ಸಂಸ್ಥೆ ತಿಳಿಸಿದೆ.
ನಖ್ವಿಯ ಈ ನಡೆಗೆ ಬಿಸಿಸಿಐ (ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ) ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಮುಂದಿನ ಐಸಿಸಿ ಸಭೆಯಲ್ಲಿ ಈ ವಿಚಾರವನ್ನು ಅಧಿಕೃತವಾಗಿ ಚರ್ಚಿಸುವ ಸಾಧ್ಯತೆಯಿದೆ.
‘ಆಪರೇಷನ್ ಸಿಂಧೂರ’ ನಂತರ ಭಾರತ–ಪಾಕಿಸ್ತಾನಗಳ ನಡುವಿನ ರಾಜತಾಂತ್ರಿಕ ಸಂಬಂಧಗಳು ಮತ್ತಷ್ಟು ಬಿಗಡಾಯಿಸಿದ್ದು, ಈ ಬಾರಿಯ ಏಷ್ಯಾ ಕಪ್ನಲ್ಲಿ ಪಾಕಿಸ್ತಾನ ಆಟಗಾರರಿಗೆ ಹಸ್ತಲಾಘವ ನೀಡುವುದನ್ನು ಭಾರತೀಯ ತಂಡ ನಿರಾಕರಿಸಿತ್ತು.





