Asia Cup | ಫೈನಲ್ ನಲ್ಲಿ ಭಾರತದ ಮಂಧನಾ–ಶಫಾಲಿ ಬ್ಯಾಟಿಂಗ್ ಅಬ್ಬರ; ಲಂಕಾಗೆ 184 ರನ್ ಗಳ ಸವಾಲು

Photo Credit : BCCI Women - X
ದುಬೈ: ಮಹಿಳಾ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯ ಫೈನಲ್ ನಲ್ಲಿ ಶ್ರೀಲಂಕಾ ವಿರುದ್ಧ ಭಾರತ ತಂಡವು 20 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 183 ರನ್ ಗಳಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಭಾರತದ ಪರ ಆರಂಭಿಕ ಆಟಗಾರ್ತಿಯರಾದ ಸ್ಮೃತಿ ಮಂಧನಾ ಹಾಗೂ ಶಫಾಲಿ ವರ್ಮಾ ಭರ್ಜರಿ ಅರ್ಧಶತಕಗಳನ್ನು ದಾಖಲಿಸಿದರು.
ಶಫಾಲಿ ಕೇವಲ 24 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಅವರು 39 ಎಸೆತಗಳನ್ನು ಎದುರಿಸಿ 68 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಮಂಧನಾ 35 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಆದರೆ ಹರ್ಮನ್ಪ್ರೀತ್ ಕೌರ್ ಅವರೊಂದಿಗಿನ ರನ್ ಗಾಗಿ ಓಡುವ ವೇಳೆ ಉಂಟಾದ ಗೊಂದಲದಿಂದಾಗಿ 59 ರನ್ ಗಳಿಸಿದ್ದಾಗ ರನ್ಔಟ್ ಆದರು. ಇದರೊಂದಿಗೆ ಸಾರ್ವಕಾಲಿಕ ದಾಖಲೆಯೊಂದನ್ನು ನಿರ್ಮಿಸುವ ಅವಕಾಶವನ್ನು ಮಂಧನಾ ಕೂದಲೆಳೆಯ ಅಂತರದಲ್ಲಿ ಕಳೆದುಕೊಂಡರು.
2024ರ ಏಷ್ಯಾ ಕಪ್ ಫೈನಲ್ ನಲ್ಲಿ ಶ್ರೀಲಂಕಾ ವಿರುದ್ಧ ಸೋತಿದ್ದ ಭಾರತವು ಈ ಬಾರಿ ಆ ಸೋಲಿಗೆ ಸೇಡು ತೀರಿಸಿಕೊಳ್ಳುವ ಗುರಿಯಲ್ಲಿದೆ. ಅಲ್ಲದೆ, ತನ್ನ ದಾಖಲೆಯನ್ನು ಮತ್ತಷ್ಟು ವಿಸ್ತರಿಸಿ ಎಂಟನೇ ಮಹಿಳಾ ಏಷ್ಯಾ ಕಪ್ ಪ್ರಶಸ್ತಿ ಗೆಲ್ಲುವತ್ತ ಭಾರತ ಚಿತ್ತ ಹರಿಸಿದೆ.
ಚಮರಿ ಅಥಪತ್ತು ನಾಯಕತ್ವದ ಶ್ರೀಲಂಕಾ ತಂಡವು ಸತತ ಎರಡನೇ ಬಾರಿ ಏಷ್ಯಾ ಕಪ್ ಪ್ರಶಸ್ತಿ ಗೆಲ್ಲುವ ನಿರೀಕ್ಷೆಯಲ್ಲಿದೆ.




