ಏಶ್ಯಕಪ್ : ನಾಳೆ ಭಾರತ- ಪಾಕ್ ಮುಖಾಮುಖಿ

PC | olympics.com
ದುಬೈ, ಸೆ. 13: ಏಶ್ಯ ಕಪ್ ಟಿ20 ಕ್ರಿಕೆಟ್ ಪಂದ್ಯಾವಳಿಯ ‘ಎ’ ಗುಂಪಿನ ಪಂದ್ಯವೊಂದರಲ್ಲಿ ಭಾರತ ಮತ್ತು ಪಾಕಿಸ್ತಾನದ ಮುಖಾಮುಖಿಗೆ ಕ್ಷಣಗಣನೆ ಆರಂಭವಾಗಿದೆ. ಪಂದ್ಯವು ರವಿವಾರ ರಾತ್ರಿ ದುಬೈಯ ಡಿಐಸಿಎಸ್ ಮೈದಾನದಲ್ಲಿ ನಡೆಯಲಿದೆ.
ಆದರೆ, ಸಾಂಪ್ರದಾಯಿಕ ಎದುರಾಳಿಗಳ ಮುಖಾಮುಖಿ ಮುನ್ನ ಸಾಮಾನ್ಯವಾಗಿ ಆವರಿಸಿಕೊಳ್ಳುತ್ತಿದ್ದ ಕ್ರಿಕೆಟ್ ಜ್ವರ, ಉನ್ಮಾದ, ರೋಮಾಂಚಕತೆ ಈ ಬಾರಿ ಕಾಣುತ್ತಿಲ್ಲ. ಹಿಂದೆ ಭಾರತ-ಪಾಕಿಸ್ತಾನ ಪಂದ್ಯಕ್ಕೆ ದಿನಗಳು ಮತ್ತು ವಾರಗಳು ಇರುವಾಗಲೇ ಅದರ ಸುತ್ತ ಭಾರೀ ರೋಮಾಂಚಕತೆಯನ್ನು ಬೆಳೆಸಲಾಗುತ್ತಿತ್ತು. ಟೆಲಿವಿಶನ್, ಸಾಮಾಜಿಕ ಮಾಧ್ಯಮಗಳಲ್ಲಿ ಆಸಕ್ತಿದಾಯಕ ಚರ್ಚೆಗಳು ನಡೆಯುತ್ತಿದ್ದವು. ಟಿಕೆಟ್ಗಳ ಬೆಲೆ ಎಷ್ಟೇ ಆಗಿದ್ದರೂ ಬಿಸಿ ಕೇಕ್ಗಳಂತೆ ಖರ್ಚಾಗುತ್ತಿದ್ದವು. ಉಭಯ ತಂಡಗಳ ಆಟಗಾರರನ್ನು ಪರಸ್ಪರ ತುಲನೆ ಮಾಡಲಾಗುತ್ತಿತ್ತು.
ಆದರೆ, ಈ ಬಾರಿಯ ಚಿತ್ರಣವೇ ಬದಲಾಗಿದೆ. ಇದನ್ನು ಟಿಕೆಟ್ ಮಾರಾಟದ ಸ್ಥಿತಿಗತಿಯೇ ಹೇಳುತ್ತಿದೆ. ಎರಡು ವಾರಗಳ ಮೊದಲೇ ಟಿಕೆಟ್ ಮಾರಾಟ ಆರಂಭವಾಗಿದ್ದರೂ ಟಿಕೆಟ್ಗಳು ಈಗಲೂ ಸಿಗುತ್ತಿವೆ.
ಕ್ರಿಕೆಟ್ ಅಭಿಮಾನಿಗಳ ಮನೋಭಾವದಲ್ಲಿ ಆಗಿರುವ ಈ ಹಠಾತ್ ಬದಲಾವಣೆಗೆ ಎದ್ದು ಕಾಣುವ ಕಾರಣವೆಂದರೆ, ಎಪ್ರಿಲ್ನಲ್ಲಿ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ಪ್ರವಾಸಿಗರ ಮೇಲೆ ಪಾಕಿಸ್ತಾನಿ ಪ್ರಾಯೋಜಿತ ಭಯೋತ್ಪಾದಕರು ನಡೆಸಿರುವ ದಾಳಿ. ಆ ದಾಳಿಯಲ್ಲಿ 26 ಪ್ರವಾಸಿಗರು ಪ್ರಾಣ ಕಳೆದುಕೊಂಡಿದ್ದಾರೆ. ಆ ದಾಳಿಯ ಬಳಿಕ, ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಬಂಧವು ಪಾತಾಳಕ್ಕೆ ಕುಸಿದಿದೆ.
ಆ ದಾಳಿಯಿಂದ ಭಾರತೀಯರ ಕೆಲವು ವರ್ಗಗಳು ಆಕ್ರೋಶಗೊಂಡಿದ್ದು, ಭಾರತ-ಪಾಕಿಸ್ತಾನ ಪಂದ್ಯವನ್ನು ಬಹಿಷ್ಕರಿಸುವಂತೆ ಕರೆ ನೀಡಿವೆ.
ಭೌಗೋಳಿಕ-ರಾಜಕೀಯ ವಾಸ್ತವಗಳು ಏನಿದ್ದರೂ, ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯಗಳಲ್ಲಿ ಭಾರತವೇ ಪಾರಮ್ಯ ಹೊಂದಿದೆ. ಉಭಯ ತಂಡಗಳ ನಡುವೆ ಈವರೆಗೆ ನಡೆದಿರುವ 13 ಟಿ20 ಪಂದ್ಯಗಳ ಪೈಕಿ ಭಾರತ ಒಂಭತ್ತರಲ್ಲಿ ಗೆದ್ದಿದೆ. 2015ರ ಬಳಿಕ, ಸಾಂಪ್ರದಾಯಿಕ ಎದುರಾಳಿಗಳ ನಡುವೆ 10 50-ಓವರ್ಗಳ ಪಂದ್ಯಗಳು ನಡೆದಿದ್ದು, ಆ ಪೈಕಿ 8ರಲ್ಲಿ ಭಾರತವೇ ವಿಜಯ ಗಳಿಸಿದೆ.
ಈ ಹಂತದಲ್ಲಿ, ಭಾರತೀಯ ಪಾಳಯದಲ್ಲಿ ಕೆಲವು ಅತಿ ದೊಡ್ಡ ತಾರಾ ಆಟಗಾರರು ಇದ್ದಾರೆ. ಆದರೆ, ಸಲ್ಮಾನ್ ಆಘ ನೇತೃತ್ವದ ಪಾಕಿಸ್ತಾನ ತಂಡವು ಹೆಚ್ಚಾಗಿ ಉದಯೋನ್ಮುಖ ಆಟಗಾರರನ್ನೇ ನೆಚ್ಚಿಕೊಂಡಿದೆ.
ರವಿವಾರವು ಸಮಾನರ ನಡುವಿನ ರೋಚಕ ಪಂದ್ಯವೊಂದಕ್ಕೆ ಸಾಕ್ಷಿಯಾಗುವ ಸಾಧ್ಯತೆ ಕಡಿಮೆಯಾದರೂ, ಪಾಕಿಸ್ತಾನ ತಂಡವೂ ಅಚ್ಚರಿಯ ಫಲಿತಾಂಶವನ್ನು ನೀಡುವ ಸಾಧ್ಯತೆಯೂ ಇದೆ. ಯಾಕೆಂದರೆ ಟಿ20 ಪಂದ್ಯವನ್ನು ನಿರ್ಧರಿಸುವುದು ಕೆಲವೇ ಕ್ಷಣಗಳ ಹುಚ್ಚು ಹೊಡೆತಗಳು ಮತ್ತು ಆಕಸ್ಮಿಕಗಳು.
ರವಿವಾರ ಸ್ಪಿನ್ ದಾಳಿಯು ಫಲಿತಾಂಶವನ್ನು ನಿರ್ಧರಿಸಬಹುದಾಗಿದೆ. ಈವರೆಗೆ ನಡೆದಿರುವ ಆರಂಭಿಕ ಪಂದ್ಯಗಳಲ್ಲಿ ಇದರ ಲಕ್ಷಣಗಳು ಕಂಡುಬಂದಿವೆ. ಬುಧವಾರ ಭಾರತವು ಯುಎಇ ತಂಡವನ್ನು 9 ವಿಕೆಟ್ಗಳಿಂದ ಹಿಮ್ಮೆಟ್ಟಿಸಿತ್ತು. ಸ್ಪಿನ್ನರ್ಗಳಾದ ಕುಲದೀಪ್ ಯಾದವ್ ನಾಲ್ಕು ವಿಕೆಟ್ಗಳನ್ನು ಪಡೆದರೆ, ವರುಣ್ ಚಕ್ರವರ್ತಿ ಮತ್ತು ಅಕ್ಷರ್ ಪಟೇಲ್ ತಲಾ ಒಂದು ವಿಕೆಟ್ ಉರುಳಿಸಿದರು.
ತಂಡಗಳು
ಭಾರತ: ಸೂರ್ಯಕುಮಾರ್ ಯಾದವ್ (ನಾಯಕ), ಶುಭಮನ್ ಗಿಲ್ (ವಿಕೆಟ್ಕಿಪರ್), ಅಭಿಶೇಕ್ ಶರ್ಮಾ, ಅರ್ಶದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ, ಶಿವಮ್ ದುಬೆ, ಹರ್ಷಿತ್ ರಾಣಾ, ಕುಲದೀಪ್ ಯಾದವ್, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಸಂಜು ಸ್ಯಾಮ್ಸನ್, ಜಿತೇಶ್ ಶರ್ಮಾ, ರಿಂಕು ಸಿಂಗ್, ತಿಲಕ್ ವರ್ಮಾ, ವರುಣ್ ಚಕ್ರವರ್ತಿ.
ಪಾಕಿಸ್ತಾನ: ಸಲ್ಮಾನ್ ಆಘ (ನಾಯಕ), ಅಬ್ರಾರ್ ಅಹ್ಮದ್, ಫಾಹೀಮ್ ಅಶ್ರಫ್, ಫಖರ್ ಝಮಾನ್, ಹಾರಿಸ್ ರವೂಫ್, ಹಸನ್ ಅಲಿ, ಹಸನ್ ನವಾಝ್, ಹುಸೈನ್ ತಲಾಲ್, ಖುಶ್ದಿಲ್ ಶಾ, ಮುಹಮ್ಮದ್ ಹಾರಿಸ್, ಮುಹಮ್ಮದ್ ನವಾಝ್, ಮುಹಮ್ಮದ್ ವಾಸಿಮ್, ಶಿಬ್ಝಾದ ಫರ್ಹಾನ್, ಸಯೀಮ್ ಅಯೂಬ್, ಸಲ್ಮಾನ್ ಮಿರ್ಝಾ, ಶಹೀನ್ ಶಾ ಅಫ್ರಿದಿ, ಸುಫಿಯನ್ ಮುಕೀಮ್.







