ಏಶ್ಯಕಪ್: ಭಾರತ ಹಾಕಿ ತಂಡಕ್ಕೆ ಸತತ ಎರಡನೇ ಜಯ

PC : X \ @AsliKhuda
ಪಾಟ್ನಾ, ಆ.31: ಪುರುಷರ ಏಶ್ಯಕಪ್ ಹಾಕಿ ಪಂದ್ಯಾವಳಿಯಲ್ಲಿ ರವಿವಾರ ನಡೆದ ‘ಎ’ ಗುಂಪಿನ 2ನೇ ಪಂದ್ಯದಲ್ಲಿ ಜಪಾನ್ ತಂಡವನ್ನು 3-2 ಗೋಲುಗಳ ಅಂತರದಿಂದ ರೋಚಕವಾಗಿ ಮಣಿಸಿದ ಭಾರತ ತಂಡವು ಸತತ ಎರಡನೇ ಗೆಲುವು ದಾಖಲಿಸಿ ತನ್ನ ಯಶಸ್ವಿ ಅಭಿಯಾನ ಮುಂದುವರಿಸಿದೆ.
ರಾಜ್ ಗಿರ್ ನ ಬಿಹಾರ ಸ್ಪೋರ್ಟ್ಸ್ ಯುನಿವರ್ಸಿಟಿ ಹಾಕಿ ಸ್ಟೇಡಿಯಂನಲ್ಲಿ ರವಿವಾರ ನಡೆದ ಪಂದ್ಯದಲ್ಲಿ ಜಪಾನ್ ತಂಡವನ್ನು ಸೋಲಿಸುವ ಮುಖಾಂತರ ಭಾರತವು ‘ಎ’ ಗುಂಪಿನಲ್ಲಿ ಎರಡು ಪಂದ್ಯಗಳಿಂದ ಆರು ಅಂಕಗಳನ್ನು ಕಲೆ ಹಾಕಿ ಅಗ್ರ ಸ್ಥಾನಕ್ಕೆ ಜಿಗಿದಿದೆ.
ಪ್ರತೀ ಗುಂಪಿನ ಅಗ್ರ ಎರಡು ತಂಡಗಳು ಸೂಪರ್-4 ಹಂತಕ್ಕೆ ನೇರ ಅರ್ಹತೆ ಪಡೆಯಲಿವೆ.
ಪಂದ್ಯದ 4ನೇ ನಿಮಿಷದಲ್ಲಿ ಮನ್ದೀಪ್ ಸಿಂಗ್ ಗೋಲು ಖಾತೆ ತೆರೆದು ಭಾರತಕ್ಕೆ ಆರಂಭಿಕ ಮುನ್ನಡೆ ಒದಗಿಸಿದರು. ನಾಯಕ ಹರ್ಮನ್ಪ್ರೀತ್ ಸಿಂಗ್ ಪೆನಾಲ್ಟಿ ಕಾರ್ನರ್ ನ ಮೂಲಕ ಅವಳಿ ಗೋಲು ಗಳಿಸಿ ಗೆಲುವಿನ ಹಾದಿ ಸುಗಮಗೊಳಿಸಿದರು. ಹರ್ಮನ್ಪ್ರೀತ್ 5ನೇ ನಿಮಿಷದಲ್ಲಿ ಮೊದಲ ಗೋಲು ಗಳಿಸಿದರೆ, 46ನೇ ನಿಮಿಷದಲ್ಲಿ ಮತ್ತೊಂದು ಗೋಲು ದಾಖಲಿಸಿದರು.
ಜಪಾನ್ ತಂಡದ ಪರ ಕೊಸೆ ಕವಾಬೆ 38ನೇ ಹಾಗೂ 59ನೇ ನಿಮಿಷದಲ್ಲಿ ಎರಡೂ ಗೋಲುಗಳನ್ನು ಗಳಿಸಿ ಜಪಾನ್ ತಂಡವನ್ನು ಕೊನೆಯ ತನಕ ಸ್ಪರ್ಧೆಯಲ್ಲ್ರಿಸಿದರು. ಕವಾಬೆ ಅವರ ಪ್ರಯತ್ನದ ಹೊರತಾಗಿಯೂ ಪಂದ್ಯದ ಕೊನೆಯ ಕ್ಷಣದಲ್ಲಿ ಭಾರತವು ಎದುರಾಳಿಗೆ ಗೋಲು ಬಿಟ್ಟುಕೊಡದೆ ಮೇಲುಗೈ ಸಾಧಿಸಿತು. ಏಶ್ಯದ 5ನೇ ರ್ಯಾಂಕಿನ ತಂಡ ಜಪಾನಿಗೆ ಗೆಲುವು ನಿರಾಕರಿಸಿತು.
ಭಾರತ ತಂಡವು ಶುಕ್ರವಾರ ಏಶ್ಯಕಪ್ ನಲ್ಲಿ ಆಡಿರುವ ತನ್ನ ಮೊದಲ ಪಂದ್ಯದಲ್ಲಿ ಚೀನಾ ತಂಡವನ್ನು 4-3 ಗೋಲುಗಳ ಅಂತರದಿಂದ ರೋಚಕವಾಗಿ ಮಣಿಸಿತ್ತು. ಪಂದ್ಯಾವಳಿಯುದ್ದಕ್ಕೂ ಆಕ್ರಮಣಕಾರಿ ಹೋರಾಟದಿಂದ ಗಮನ ಸೆಳೆದಿದೆ.
ಸತತ ಎರಡು ಪಂದ್ಯಗಳಲ್ಲಿ ಜಯ ಸಾಧಿಸಿರುವ ಭಾರತ ತಂಡವು ‘ಎ’ ಗುಂಪಿನಲ್ಲಿ ಸುಸ್ಥಿತಿಯಲ್ಲಿದ್ದು, ಸೋಮವಾರ ನಡೆಯಲಿರುವ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಕಝಕ್ಸ್ತಾನ ತಂಡವನ್ನು ಎದುರಿಸಲಿದೆ. ಈ ಪಂದ್ಯದಲ್ಲೂ ಗೆಲುವಿನ ಓಟ ಮುಂದುವರಿಸುವ ವಿಶ್ವಾಸದಲ್ಲಿದೆ.
ಕಾಂಟಿನೆಂಟಲ್ ಚಾಂಪಿಯನ್ ಶಿಪ್ ಅತ್ಯಂತ ಮಹತ್ವ ಪಡೆದಿದ್ದು, ಏಶ್ಯಕಪ್ ವಿಜೇತ ತಂಡವು ಮುಂದಿನ ವರ್ಷ ಬೆಲ್ಜಿಯಮ್ ಹಾಗೂ ನೆದರ್ಲ್ಯಾಂಡ್ಸ್ನ ಜಂಟಿ ಆತಿಥ್ಯದಲ್ಲಿ ನಡೆಯಲಿರುವ ಹಾಕಿ ವಿಶ್ವಕಪ್ನಲ್ಲಿ ಆಡುವ ಅರ್ಹತೆ ಗಿಟ್ಟಿಸಿಕೊಳ್ಳಲಿದೆ.
ಚೀನಾ ಹಾಗೂ ಜಪಾನ್ ವಿರುದ್ಧ ಜಯಭೇರಿ ಬಾರಿಸಿರುವ ಭಾರತ ತಂಡವು ‘ಎ’ ಗುಂಪಿನಲ್ಲಿ ಅಗ್ರ ಸ್ಥಾನದೊಂದಿಗೆ ಪ್ರತಿಷ್ಠಿತ ಜಾಗತಿಕ ಪಂದ್ಯಾವಳಿಗೆ ನೇರ ಪ್ರವೇಶ ಪಡೆಯುವ ಹಾದಿಯಲ್ಲಿದೆ.
ಪ್ರಮುಖ ಆಟಗಾರರಾದ ಹರ್ಮನ್ಪ್ರೀತ್ ಸಿಂಗ್ ಹಾಗೂ ಮನ್ದೀಪ್ ಸಿಂಗ್ ಸದ್ಯ ಭರ್ಜರಿ ಫಾರ್ಮ್ನಲ್ಲಿದ್ದಾರೆ. ತಂಡವು ಒತ್ತಡದಲ್ಲೂ ಪ್ರತಿರೋಧ ವ್ಯಕ್ತಪಡಿಸಿದೆ. ಗ್ರೂಪ್ ಹಂತದ ಇನ್ನೊಂದು ಪಂದ್ಯ ಹಾಗೂ ಆ ನಂತರದ ಪಂದ್ಯದಲ್ಲೂ ಭಾರತವು ಗೆಲುವಿನ ಓಟವನ್ನು ಮುಂದುವರಿಸುವ ಗುರಿ ಇಟ್ಟುಕೊಂಡಿದೆ.







