ಶ್ರೀಲಂಕಾ ವಿರುದ್ಧ ಏಶ್ಯಕಪ್ ಸೂಪರ್-4 ಪಂದ್ಯ: ಭಾರತ 213 ರನ್‌ಗೆ ಆಲೌಟ್
ಐದು ವಿಕೆಟ್ ಗೊಂಚಲು ಕಬಳಿಸಿದ ಯುವ ಎಡಗೈ ಸ್ಪಿನ್ನರ್ ದುನಿತ್ ವೆಲ್ಲಲಾಗೆ

ಕೊಲಂಬೊ, ಸೆ.12: ಶ್ರೀಲಂಕಾದ ಯುವ ಬೌಲರ್ ದುನಿತ್ ವೆಲ್ಲಲಾಗೆ (5-40) ಸ್ಪಿನ್ ಮೋಡಿಗೆ ತತ್ತರಿಸಿದ ಭಾರತವು ಏಶ್ಯಕಪ್‌ನ ಸೂಪರ್-4 ಪಂದ್ಯ ದಲ್ಲಿ 49.1 ಓವರ್‌ಗಳಲ್ಲಿ 213 ರನ್ ಗಳಿಸಿ ಆಲೌಟಾಗಿದೆ.
ಮಂಗಳವಾರ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಭಾರತಕ್ಕೆ ರೋಹಿತ್ ಶರ್ಮಾ(53 ರನ್, 48 ಎಸೆತ) ಹಾಗೂ ಶುಭಮನ್ ಗಿಲ್ (19 ರನ್, 25 ಎಸೆತ) ಮೊದಲ ವಿಕೆಟ್‌ಗೆ 11 ಓವರ್‌ಗಳಲ್ಲಿ 80 ರನ್ ಜೊತೆಯಾಟ ನಡೆಸಿ ಉತ್ತಮ ಆರಂಭ ಒದಗಿಸಿದರು.
ಆಗ ದಾಳಿಗಿಳಿದ 20ರ ಹರೆಯದ ದುನಿತ್ ತನ್ನ ಮೊದಲ ಎಸೆತದಲ್ಲೇ ಶುಭಮನ್ ಗಿಲ್ ವಿಕೆಟನ್ನು ಉರುಳಿಸಿ ಭಾರತದ ರನ್ ವೇಗಕ್ಕೆ ಕಡಿವಾಣ ಹಾಕಿದರು. ವಿರಾಟ್ ಕೊಹ್ಲಿ (3 ರನ್) ಹಾಗೂ ರೋಹಿತ್ ಶರ್ಮಾರನ್ನು ಪೆವಿಲಿಯನ್‌ಗೆ ಕಳುಹಿಸಿದರು. ಆನಂತರ ಕೆ.ಎಲ್.ರಾಹುಲ್ (39 ರನ್) ಹಾಗೂ ಹಾರ್ದಿಕ್ ಪಾಂಡ್ಯ (5 ರನ್) ವಿಕೆಟನ್ನು ಪಡೆದು ತನ್ನ ಚೊಚ್ಚಲ ಐದು ವಿಕೆಟ್ ಗೊಂಚಲು ಪಡೆದರು. ದುನಿತ್‌ಗೆ ಇನ್ನೋರ್ವ ಸ್ಪಿನ್ನರ್ ಚರಿತ್ ಅಸಲಂಕ(4-18)ಸಾಥ್ ನೀಡಿದರು. ಇಶಾನ್ ಕಿಶನ್ 33 ರನ್ ಗಳಿಸಿ ಚರಿತ್ ಅಸಲಂಕಗೆ ವಿಕೆಟ್ ಒಪ್ಪಿಸಿದರು. ಅಕ್ಷರ್ ಪಟೇಲ್(26 ರನ್, 36 ಎಸೆತ) ವಿಕೆಟ್ ಪಡೆದ ತೀಕ್ಷ್ಣ ಭಾರತದ ಇನಿಂಗ್ಸ್‌ಗೆ ತೆರೆ ಎಳೆದರು
. ಇಂದಿನ ಪಂದ್ಯದಲ್ಲಿ ಮಿಂಚಿರುವ ದುನಿತ್ 2022ರ ಅಂಡರ್-19 ವಿಶ್ವಕಪ್‌ನಲ್ಲಿ ಲಂಕಾದ ನಾಯಕತ್ವವಹಿಸುವ ಮೂಲಕ ಬೆಳಕಿಗೆ ಬಂದಿದ್ದರು. ಟೂರ್ನಮೆಂಟ್‌ನಲ್ಲಿ ಬ್ಯಾಟ್ ಹಾಗೂ ಬೌಲಿಂಗ್‌ನಲ್ಲಿ ಕೊಡುಗೆ ನೀಡಿದ್ದ ಈ ಯುವ ಆಟಗಾರ ಗರಿಷ್ಠ ವಿಕೆಟ್‌ಗಳನ್ನು ಪಡೆದ ಸಾಧನೆ ಮಾಡಿದ್ದರು. ಟೂರ್ನಿಯಲ್ಲಿ 6 ಪಂದ್ಯಗಳಲ್ಲಿ ಒಟ್ಟು 17 ವಿಕೆಟ್‌ಗಳನ್ನು ಪಡೆದಿದ್ದರು. ಒಟ್ಟು 264 ರನ್ ಗಳಿಸಿದ್ದರು. ಆಸ್ಟ್ರೇಲಿಯದ ವಿರುದ್ದ ಪಲ್ಲೆಕೆಲೆಯಲ್ಲಿ ಜೂನ್ 2022ರಲ್ಲಿ ದುನಿತ್ ಏಕದಿನ ಕ್ರಿಕೆಟಿಗೆ ಕಾಲಿಟ್ಟಿದ್ದರು. ಜುಲೈ 2022ರಲ್ಲಿ ಪಾಕಿಸ್ತಾನದ ವಿರುದ್ಧ ತನ್ನ ದೇಶದ ಪರ ಏಕೈಕ ಟೆಸ್ಟ್ ಪಂದ್ಯವನ್ನು ಆಡಿದ್ದರು.







