ಏಶ್ಯಕಪ್ | ಲಂಕಾಗೆ 5 ವಿಕೆಟ್ ಸೋಲುಣಿಸಿದ ಪಾಕ್

PC ; PTI
ಅಬುಧಾಬಿ, ಸೆ. 24: ಟಿ20 ಏಶ್ಯಕಪ್ ಪಂದ್ಯಾವಳಿಯ ಸೂಪರ್ ಫೋರ್ ಪಂದ್ಯವೊಂದರಲ್ಲಿ ಮಂಗಳವಾರ ಪಾಕಿಸ್ತಾನವು ಶ್ರೀಲಂಕಾವನ್ನು ಐದು ವಿಕೆಟ್ಗಳಿಂದ ಸೋಲಿಸಿದೆ. ಇದರೊಂದಿಗೆ ಫೈನಲ್ ತಲುಪುವ ಆಶೆಯನ್ನು ಪಾಕಿಸ್ತಾನವು ಜೀವಂತವಾಗಿರಿಸಿದೆ.
ಅಬುಧಾಬಿಯ ಝಾಯಿದ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಪಂದ್ಯವನ್ನು ಗೆಲ್ಲಲು 134 ರನ್ಗಳ ಗುರಿಯನ್ನು ಪಡೆದ ಪಾಕಿಸ್ತಾನವು ಇನ್ನೂ ಎರಡು ಓವರ್ಗಳು ಬಾಕಿಯಿರುಂತೆಯೇ 5 ವಿಕೆಟ್ಗಳ ನಷ್ಟಕ್ಕೆ 138 ರನ್ ಗಳಿಸಿ ಗೆಲುವನ್ನು ಘೋಷಿಸಿತು.
ಆರಂಭಿಕರಾದ ಸಾಹಿಬ್ಝಾದ ಫರ್ಹಾನ್ (24) ಮತ್ತು ಫಖರ್ ಝಮಾನ್ (17) 45 ರನ್ಗಳ ಭಾಗೀದಾರಿಕೆಯ ಮೂಲಕ ಉತ್ತಮ ಆರಂಭ ಒದಗಿಸಿದರು.
ಒಂದು ಹಂತದಲ್ಲಿ ಪಾಕಿಸ್ತಾನವು 57 ರನ್ಗಳನ್ನು ಗಳಿಸುವಷ್ಟರಲ್ಲಿ 4 ವಿಕೆಟ್ಗಳನ್ನು ಕಳೆದುಕೊಂಡರೂ, ಹುಸೈನ ತಲಾತ್ (32 ಅಜೇಯ) ಮತ್ತು ಮುಹಮ್ಮದ್ ನವಾಝ್ (38) ತಂಡವನ್ನು ಆಧರಿಸಿ ವಿಜಯದತ್ತ ಮುನ್ನಡೆಸಿದರು.
ಇದಕ್ಕೂ ಮೊದಲು, ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ತಂಡಕ್ಕೆ ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ಗಳನ್ನು ಕಳೆದುಕೊಂಡು 133 ರನ್ಗಳನ್ನಷ್ಟೇ ಗಳಿಸಲು ಸಾಧ್ಯವಾಯಿತು. ಬಿಗಿಯಾದ ಬೌಲಿಂಗ್ ದಾಳಿ ನಡೆಸಿದ ಪಾಕಿಸ್ತಾನಿ ಬೌಲರ್ಗಳು ಎದುರಾಳಿ ಬ್ಯಾಟರ್ಗಳ ರನ್ ಹರಿವನ್ನು ನಿಯಂತ್ರಿಸಿದರು.
ಶ್ರೀಲಂಕಾವು ಒಂದು ಹಂತದಲ್ಲಿ 58 ರನ್ಗಳನ್ನು ಗಳಿಸುವಷ್ಟರಲ್ಲಿ 5 ವಿಕೆಟ್ಗಳನ್ನು ಕಳೆದುಕೊಂಡು ಅಪಾಯಕ್ಕೆ ಸಿಲುಕಿತ್ತು. ಆಗ ಬಂದ ಕಮಿಂಡು ಮೆಂಡಿಸ್ ಅರ್ಧ ಶತಕದ ಮೂಲಕ ತಂಡವನ್ನು ಹೆಚ್ಚಿನ ಅಪಾಯದಿಂದ ಪಾರುಮಾಡಿದರು. ಅವರು 44 ಎಸೆತಗಳಲ್ಲಿ 50 ರನ್ಗಳನ್ನು ಗಳಿಸಿದರು.
ಪಾಕ್ನ ಫೈನಲ್ ಕನಸು ಜೀವಂತ
ಈ ವಿಜಯದೊಂದಿಗೆ ಪಾಕಿಸ್ತಾನವು ತನ್ನ ಸೂಪರ್ ಫೋರ್ ಹಂತದಲ್ಲಿ ಎರಡು ಪಂದ್ಯಗಳಿಂದ ಎರಡು ಅಂಕಗಳನ್ನು ಗಳಿಸಿದೆ. ಅದಕ್ಕೆ ಫೈನಲ್ ತಲುಪುವ ಅವಕಾಶ ಈಗಲೂ ಇದೆ.
ಪಾಕಿಸ್ತಾನವು ಬಾಂಗ್ಲಾದೇಶ ವಿರುದ್ಧದ ತನ್ನ ಕೊನೆಯ ಸೂಪರ್ ಫೋರ್ ಪಂದ್ಯವನ್ನು ಗೆದ್ದರೆ, ಅದರ ಫೈನಲ್ ತಲುಪುವ ಅವಕಾಶವು ಅತ್ಯಂತ ಉಜ್ವಲವಾಗಿದೆ.
ಇನ್ನೊಂದೆಡೆ, ಭಾರತದ ವಿರುದ್ಧದ ಪಂದ್ಯದಲ್ಲಿ ಬಾಂಗ್ಲಾದೇಶವು ಸೋತರೆ ಬಾಂಗ್ಲಾದೇಶವೂ ಎರಡು ಪಂದ್ಯಗಳಿಂದ ಎರಡು ಅಂಕಗಳನ್ನು ಗಳಿಸುತ್ತದೆ. ಆಗ, ಬಾಂಗ್ಲಾದೇಶ ಮತ್ತು ಪಾಕಿಸ್ತಾನ ನಡುವಿನ ಪಂದ್ಯವು ನೈಜ ಸೆಮಿಫೈನಲ್ ಪಂದ್ಯವಾಗುತ್ತದೆ.
ಒಂದು ವೇಳೆ, ಭಾರತದ ವಿರುದ್ಧ ಬಾಂಗ್ಲಾದೇಶ ಗೆದ್ದರೆ, ಬಾಂಗ್ಲಾದೇಶವು 2 ಪಂದ್ಯಗಳಿಂದ ನಾಲ್ಕು ಅಂಕಗಳನ್ನು ಹೊಂದುತ್ತದೆ. ಈ ಸನ್ನಿವೇಶದಲ್ಲಿ, ಬಾಂಗ್ಲಾದೇಶದ ವಿರುದ್ಧ ಪಾಕಿಸ್ತಾನ ಗೆದ್ದರೆ ಮತ್ತು ಶ್ರೀಲಂಕಾ ವಿರುದ್ಧ ಭಾರತ ಸೋತರೆ ಪಾಕಿಸ್ತಾನವು ಫೈನಲ್ ತಲುಪುತ್ತದೆ.
ಒಂದು ವೇಳೆ, ಪಾಕಿಸ್ತಾನ ಬಾಂಗ್ಲಾದೇಶವನ್ನು ಸೋಲಿಸಿದರೆ ಹಾಗೂ ಭಾರತ ಮೊದಲು ಬಾಂಗ್ಲಾದೇಶದ ವಿರದ್ಧ ಸೋತು ಶ್ರೀಲಂಕಾ ವಿರುದ್ಧ ಗೆದ್ದರೆ, ಎಲ್ಲಾ ಮೂರು ತಂಡಗಳು 4 ಅಂಕಗಳನ್ನು ಪಡೆಯುತ್ತವೆ ಮತ್ತು ಶ್ರೀಲಂಕಾದ ಅಂಕ ಸೊನ್ನೆಯಾಗಿರುತ್ತದೆ. ಈ ಸನ್ನಿವೇಶದಲ್ಲಿ ಎರಡು ಫೈನಲ್ ತಂಡಗಳನ್ನು ನೆಟ್ ರನ್ರೇಟ್ ಆಧಾರದಲ್ಲಿ ನಿರ್ಧರಿಸಲಾಗುತ್ತದೆ.
ಒಂದು ವೇಳೆ, ಪಾಕಿಸ್ತಾನವು ಬಾಂಗ್ಲಾದೇಶ ವಿರುದ್ಧ ಸೋತರೆ ಹಾಗೂ ಭಾರತವು ಬಾಂಗ್ಲಾದೇಶ ಮತ್ತು ಶ್ರೀಲಂಕಾ ವಿರುದ್ಧ ತನ್ನ ಎರಡೂ ಪಂದ್ಯಗಳನ್ನು ಸೋತರೆ, ಬಾಂಗ್ಲಾದೇಶವು ಫೈನಲ್ಗೆ ಹೋಗುತ್ತದೆ. ಶ್ರೀಲಂಕಾ ಮತ್ತು ಪಾಕಿಸ್ತಾನ ತಲಾ 2 ಅಂಕಗಳನ್ನು ಹೊಂದುತ್ತವೆ. ಆಗ ಎರಡನೇ ಫೈನಲ್ ತಂಡವನ್ನು ನೆಟ್ ರನ್ರೇಟ್ ಆಧಾರದಲ್ಲಿ ನಿರ್ಧರಿಸಲಾಗುತ್ತದೆ.







