ಏಶ್ಯ ಕಪ್ ಟ್ರೋಫಿ ವಿವಾದ ಅಂತ್ಯವಾಗಿದೆ: ದೇವಜಿತ್ ಸೈಕಿಯಾ

ದೇವಜಿತ್ ಸೈಕಿಯಾ |PC : PTI
ಹೊಸದಿಲ್ಲಿ, ನ.8: ಏಶ್ಯ ಕಪ್ ಟ್ರೋಫಿಗೆ ಸಂಬಂಧಪಟ್ಟ ವಿವಾದವನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಮುಖ್ಯಸ್ಥ ಮುಹ್ಸಿನ್ ನಖ್ವಿ ಅವರೊಂದಿಗೆ ಸೌಹಾರ್ದಯುತವಾಗಿ ಬಗೆಹರಿಸಲಾಗಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ(ಬಿಸಿಸಿಐ)ಕಾರ್ಯದರ್ಶಿ ದೇವಜಿತ್ ಸೈಕಿಯಾ ಶನಿವಾರ ದೃಢಪಡಿಸಿದರು.
ದುಬೈನಲ್ಲಿ ಶುಕ್ರವಾರ ನಡೆದ ಐಸಿಸಿ ಸಭೆಯ ವೇಳೆ ಈ ವಿಷಯದ ಬಗ್ಗೆ ಚರ್ಚಿಸಲಾಯಿತು. ಎರಡೂ ಕಡೆಯವರು ಈಗ ಸಾಧ್ಯವಾದಷ್ಟು ಬೇಗನೆ ಬಿಕ್ಕಟ್ಟನ್ನು ನಿವಾರಿಸಲು ಒಟ್ಟಿಗೆ ಕೆಲಸ ಮಾಡಲಿದ್ದಾರೆ ಎಂದು ಸೈಕಿಯಾ ಹೇಳಿದರು.
‘‘ಮಂಜುಗಡ್ಡೆ ಕರಗಿ ಹೋಗಿದೆ. ಮಂಡಳಿಯ ಅನೌಪಚಾರಿಕ ಹಾಗೂ ಔಪಚಾರಿಕ ಸಭೆಗಳಲ್ಲಿ ನಾನು ಹಾಜರಿದ್ದೆ. ಪಿಸಿಬಿ ಅಧ್ಯಕ್ಷ ನಖ್ವಿ ಕೂಡ ಅಲ್ಲಿದ್ದರು. ಆದರೆ ಔಪಚಾರಿಕ ಸಭೆಯಲ್ಲಿ ಈ ವಿಷಯವು ಕಾರ್ಯಸೂಚಿಯಲ್ಲಿ ಇರಲಿಲ್ಲ’’ ಎಂದು ‘ಸ್ಪೋರ್ಟ್ಸ್ಟರ್’ಗೆ ಸೈಕಿಯಾ ತಿಳಿಸಿದರು.
ಹಿರಿಯ ಐಸಿಸಿ ಅಧಿಕಾರಿಯ ಸಮ್ಮುಖದಲ್ಲಿ ಪಿಸಿಬಿ ಮುಖ್ಯಸ್ಥರು ಹಾಗೂ ನನ್ನ ನಡುವೆ ಪ್ರತ್ಯೇಕ ಸಭೆಯನ್ನು ಐಸಿಸಿ ವ್ಯವಸ್ಥೆಗೊಳಿಸಿತ್ತು. ಸಂಧಾನ ಪ್ರಕ್ರಿಯೆಯನ್ನು ಆರಂಭಿಸಲು ಇದು ಸಕಾರಾತ್ಮಕ ಹೆಜ್ಜೆಯಾಗಿತ್ತು. ಸಭೆಯಲ್ಲಿ ಎರಡೂ ಕಡೆಯವರು ಸೌಹಾರ್ದಯುತವಾಗಿ ಭಾಗವಹಿಸಿದ್ದು, ಆದಷ್ಟು ಬೇಗನೆ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುವುದು ಎಂಬ ಬಗ್ಗೆ ವಿಶ್ವಾಸವಿದೆ ಎಂದು ಸೈಕಿಯಾ ಹೇಳಿದರು.
ಸೆಪ್ಟಂಬರ್ನಲ್ಲಿ ದುಬೈನಲ್ಲಿ ನಡೆದಿದ್ದ ಏಶ್ಯ ಕಪ್ ಫೈನಲ್ನಲ್ಲಿ ಭಾರತ ತಂಡವು ಪಾಕಿಸ್ತಾನ ತಂಡವನ್ನು 5 ವಿಕೆಟ್ ಗಳಿಂದ ಸೋಲಿಸಿತ್ತು. ಆದರೆ ಪಾಕಿಸ್ತಾನದ ಆಂತರಿಕ ಸಚಿವ ಹಾಗೂ ಎಸಿಸಿ ಹಾಗೂ ಪಿಸಿಬಿ ಅಧ್ಯಕ್ಷರೂ ಆಗಿರುವ ನಖ್ವಿ ಅವರಿಂದ ಟ್ರೋಫಿ ಸ್ವೀಕರಿಸಲು ನಿರಾಕರಿಸಿತ್ತು. ಟ್ರೋಫಿಯನ್ನು ಹಿಂತಿರುಗಿಸುವಂತೆ ಎಸಿಸಿಗೆ ಬಿಸಿಸಿಐ ಪತ್ರ ಬರೆದಿತ್ತು. ಈ ವಿಷಯವನ್ನು ಐಸಿಸಿ ಸಭೆಯಲ್ಲಿ ಪ್ರಸ್ತಾವಿಸಲಾಗಿದೆ.







