ಏಶ್ಯಕಪ್ ಟ್ರೋಫಿ ದುಬೈಯಿಂದ ಅಬುಧಾಬಿಯ ಅಜ್ಞಾತ ಸ್ಥಳಕ್ಕೆ!

Photo Credit : asiacup.com.in
ದುಬೈ, ಅ. 24: ಏಶ್ಯ ಕಪ್ ಟ್ರೋಫಿಯನ್ನು ಒಳಗೊಂಡ ನಾಟಕವು ಮುಂದುವರಿದಿದೆ. ಟ್ರೋಫಿಯನ್ನು ದುಬೈಯಲ್ಲಿರುವ ಏಶ್ಯನ್ ಕ್ರಿಕೆಟ್ ಮಂಡಳಿಯ ಪ್ರಧಾನ ಕಚೇರಿಯಿಂದ ಅಬುಧಾಬಿಯಲ್ಲಿರುವ ಗುಪ್ತ ಸ್ಥಳವೊಂದಕ್ಕೆ ಕೊಂಡೊಯ್ಯಲಾಗಿದೆ ಎನ್ನಲಾಗಿದೆ.
ದುಬೈಯಲ್ಲಿ ಸೆಪ್ಟಂಬರ್ 28ರಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ (ಪಿಸಿಬಿ) ಅಧ್ಯಕ್ಷರೂ ಆಗಿರುವ ಏಶ್ಯನ್ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಮುಹ್ಸಿನ್ ನಖ್ವಿಯಿಂದ ಏಶ್ಯ ಕಪ್ ಟ್ರೋಫಿಯನ್ನು ಸ್ವೀಕರಿಸಲು ವಿಜೇತ ಭಾರತ ತಂಡ ನಿರಾಕರಿಸಿದ ಬಳಿಕ ನಾಟಕೀಯ ಬೆಳವಣಿಗೆಗಳು ನಡೆದಿವೆ.
ಫೈನಲ್ನಲ್ಲಿ ಭಾರತ ತಂಡವು ಪಾಕಿಸ್ತಾನವನ್ನು ಸೋಲಿಸಿದ ಬಳಿಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು 90 ನಿಮಿಷ ವಿಳಂಬವಾಗಿ ನಡೆಯಿತು. ಏಶ್ಯನ್ ಕ್ರಿಕೆಟ್ ಮಂಡಳಿ ಅಧಿಕಾರಿಯೊಬ್ಬರು ಯಾವುದೇ ವಿವರಣೆ ನೀಡದೆ ಟ್ರೋಫಿಯನ್ನು ವೇದಿಕೆಯಿಂದ ತೆಗೆದುಕೊಂಡು ಹೋದ ಹಿನ್ನೆಲೆಯಲ್ಲಿ ಈ ಬೆಳವಣಿಗೆ ಸಂಭವಿಸಿತು. ಬಳಿಕ ಟ್ರೋಫಿಯನ್ನು ಏಶ್ಯನ್ ಕ್ರಿಕೆಟ್ ಮಂಡಳಿಯ ಪ್ರಧಾನ ಕಚೇರಿಯಲ್ಲಿ ಇಡಲಾಗಿತ್ತು.
ಇತ್ತೀಚೆಗೆ ಬಿಸಿಸಿಐ ಅಧಿಕಾರಿಯೊಬ್ಬರು ಎಸಿಸಿ ಪ್ರಧಾನ ಕಚೇರಿಗೆ ಭೇಟಿ ನೀಡಿದಾಗ ಟ್ರೋಫಿ ಅಲ್ಲಿಲ್ಲದಿರುವುದು ಅವರ ಗಮನಕ್ಕೆ ಬಂತು. ವಿಚಾರಿಸಿದಾಗ, ಅದು ಅಬುಧಾಬಿಯಲ್ಲಿ ಮುಹ್ಸಿನ್ ನಖ್ವಿಯ ಸುಪರ್ದಿಯಲ್ಲಿದೆ ಎಂಬ ಮಾಹಿತಿಯನ್ನು ಅಲ್ಲಿನ ಸಿಬ್ಬಂದಿ ನೀಡಿದರು.
ಟ್ರೋಫಿಯನ್ನು ಭಾರತಕ್ಕೆ ನೀಡಲು ಹಲವು ಷರತ್ತುಗಳನ್ನು ನಖ್ವಿ ಈ ತಿಂಗಳ ಆರಂಭದಲ್ಲಿ ವಿಧಿಸಿದ್ದರು. ಭಾರತಕ್ಕೆ ಟ್ರೋಫಿ ನಿಜವಾಗಿಯೂ ಬೇಕಿದ್ದರೆ ಅದು ಎಸಿಸಿ ಪ್ರಧಾನ ಕಚೇರಿಯಲ್ಲಿ ತನ್ನಿಂದ ಸ್ವೀಕರಿಸಬೇಕು ಎಂದು ಅವರು ಹೇಳಿದ್ದರು. ಬಳಿಕ, ಏಶ್ಯ ಕಪ್ ಟ್ರೋಫಿಯನ್ನು ಭಾರತಕ್ಕೆ ಹಸ್ತಾಂತರಿಸಲು ಸಮಾರಂಭವೊಂದನ್ನು ಏರ್ಪಡಿಸುವ ಪ್ರಸ್ತಾವವನ್ನೂ ಅವರು ಮುಂದಿಟ್ಟಿದ್ದರು.







