ಏಶ್ಯ ಬ್ಯಾಡ್ಮಿಂಟನ್ ಟೀಮ್ ಚಾಂಪಿಯನ್ ಶಿಪ್ ; ಚೀನಾದ ವಿರುದ್ಧ ಭಾರತಕ್ಕೆ ರೋಚಕ ಜಯ

ಪಿ.ವಿ.ಸಿಂಧು | Photo: X
ಶಾ ಆಲಂ : ಏಶ್ಯ ಬ್ಯಾಡ್ಮಿಂಟನ್ ಟೀಮ್ ಚಾಂಪಿಯನ್ ಶಿಪ್ ನ ಮಹಿಳೆಯರ ಸ್ಪರ್ಧಾವಳಿಯಲ್ಲಿ ಭಾರತವು ಬಲಿಷ್ಠ ಚೀನಾ ತಂಡವನ್ನು 3-2 ಅಂತರದಿಂದ ರೋಚಕವಾಗಿ ಮಣಿಸಿದೆ. ಹಿರಿಯ ಆಟಗಾತಿ ಪಿ.ವಿ.ಸಿಂಧು ನಾಲ್ಕು ತಿಂಗಳ ಗಾಯದ ಸಮಸ್ಯೆಯಿಂದ ಚೇತರಿಸಿಕೊಂಡು ಬುಧವಾರ ಗೆಲುವಿನ ಆರಂಭ ಪಡೆದಿದ್ದಾರೆ.
ಡಬ್ಲ್ಯು ಗುಂಪಿನಲ್ಲಿ ಕೇವಲ ಎರಡು ತಂಡಗಳಿದ್ದು, ಮೊದಲ ಪಂದ್ಯ ನಡೆಯುವುದಕ್ಕಿಂತ ಮೊದಲೇ ಭಾರತವು ನಾಕೌಟ್ ಸುತ್ತಿನಲ್ಲಿ ತನ್ನ ಸ್ಥಾನ ಗಿಟ್ಟಿಸಿಕೊಂಡಿದೆ. ಇದೀಗ ತನ್ನದೇ ಶೈಲಿಯಲ್ಲಿ ಅಗ್ರ ಶ್ರೇಯಾಂಕದ ಚೀನಾ ತಂಡವನ್ನು ಸೋಲಿಸಿ ಶಾಕ್ ನೀಡಿದೆ.
ಫ್ರೆಂಚ್ ಓಪನ್ ವೇಳೆ ಮೊಣಕಾಲು ನೋವಿಗೆ ಒಳಗಾದ ನಂತರ ಕಳೆದ ವರ್ಷದ ಅಕ್ಟೋಬರ್ನಿಂದ ಪಿ.ವಿ. ಸಿಂಧು ಬ್ಯಾಡ್ಮಿಂಟನ್ನಲ್ಲಿ ಸಕ್ರಿಯವಾಗಿಲ್ಲ. ಬುಧವಾರ 40 ನಿಮಿಷಗಳ ಕಾಲ ನಡೆದ ಮಹಿಳೆಯರ ಸಿಂಗಲ್ಸ್ ಪಂದ್ಯದಲ್ಲಿ ಸಿಂಧು ಗರಿಷ್ಠ ರ್ಯಾಂಕಿನ ಹಾನ್ ಯುಇ ವಿರುದ್ಧ 21-17, 21-15 ಗೇಮ್ ಗಳ ಅಂತರದಿಂದ ಜಯ ದಾಖಸಿ ಭಾರತಕ್ಕೆ 1-0 ಮುನ್ನಡೆ ಒದಗಿಸಿಕೊಟ್ಟರು.
ಎರಡು ಬಾರಿ ಒಲಿಂಪಿಕ್ಸ್ ಪದಕ ವಿಜೇತೆ ಸಿಂಧು ಸದ್ಯ ರ್ಯಾಂಕಿಂಗ್ ನಲ್ಲಿ 11ನೇ ಸ್ಥಾನದಲ್ಲಿದ್ದಾರೆ. ಚೀನಾದ ಆಟಗಾರ್ತಿ 8ನೇ ರ್ಯಾಂಕಿನಲ್ಲಿದ್ದಾರೆ.
ತನಿಶಾ ಕಾಸ್ಟ್ರೊ ಹಾಗೂ ಅಶ್ವಿನಿ ಪೊನ್ನಪ್ಪ ಜೋಡಿ ಲಿಯು ಶೆಂಗ್ ಶು ಹಾಗೂ ಟಾನ್ ನಿಂಗ್ ಎದುರು 19-21, 16-21 ಅಂತರದಿಂದ ಸೋತಿದ್ದಾರೆ. ಆ ನಂತರ ಅಶ್ಮಿತಾ ಚಲಿಹಾ ವಿಶ್ವದ ನಂ.9ನೇ ಆಟಗಾರ್ತಿ ಝೀ ಯಿ ವಿರುದ್ಧ 13-21, 15-21 ಅಂತರದಿಂದ ಸೋತಾಗ ಭಾರತವು ಮೂರು ಪಂದ್ಯಗಳಲ್ಲಿ 1-2 ಹಿನ್ನಡೆಯಲ್ಲಿತ್ತು.
ಒಂದು ಗಂಟೆ ಹಾಗೂ 9 ನಿಮಿಷಗಳ ಕಾಲ ನಡೆದ ಮಹಿಳೆಯರ ಡಬಲ್ಸ್ ನಲ್ಲಿ ಟ್ರೀಸಾ ಜೋಲಿ ಹಾಗೂ ಗಾಯತ್ರಿ ಗೋಪಿಚಂದ್ ಚೀನಾದ ಜೋಡಿ ಲಿ ಯಿ ಜಿಂಗ್ ಹಾಗೂ ಲುವೊ ಕ್ಸು ಮಿನ್ ವಿರುದ್ಧ 10-21, 21-18, 21-17 ಗೇಮ್ ಗಳ ಅಂತರದಿಂದ ಜಯ ಸಾಧಿಸಿ ಭಾರತ 2-2ರಿಂದ ಸಮಬಲ ಸಾಧಿಸುವಲ್ಲಿ ನೆರವಾದರು.
ಐದನೇ ಹಾಗೂ ನಿರ್ಣಾಯಕ ಪಂದ್ಯದಲ್ಲಿ ಒಂದು ಗಂಟೆ ಹಾಗೂ 17 ನಿಮಿಷಗಳ ಹೋರಾಟದಲ್ಲಿ ವಿಶ್ವದ 472ನೇ ರ್ಯಾಂಕಿನ ಅನ್ಮೋಲ್ ಖರ್ಬ್ ವಿಶ್ವದ 149ನೇ ರ್ಯಾಂಕಿನ ಯು ಲುವೊರನ್ನು 22-20, 14-21, 21-18 ಗೇಮ್ ಗಳ ಅಂತರದಿಂದ ಮಣಿಸಿದರು. ಈ ಮೂಲಕ ಭಾರತಕ್ಕೆ ಸ್ಮರಣೀಯ ಗೆಲುವು ತಂದುಕೊಟ್ಟರು.
2022ರಲ್ಲಿ ಥಾಮಸ್ ಕಪ್ ಎತ್ತಿ ಹಿಡಿದಿರುವ ಹಾಗೂ ಕಳೆದ ವರ್ಷ ಏಶ್ಯನ್ ಗೇಮ್ಸ್ನಲ್ಲಿ ಭಾರತಕ್ಕೆ ಮೊದಲ ಬಾರಿ ಬೆಳ್ಳಿ ಪದಕ ಗೆದ್ದುಕೊಟ್ಟಿರುವ ಹಾಂಕಾಂಗ್ ವಿರುದ್ಧ ಎ ಗುಂಪಿನ ಲೀಗ್ ಪಂದ್ಯ ಆಡಲಿದೆ.







