ಏಶ್ಯ ಬ್ಯಾಡ್ಮಿಂಟನ್ ಟೀಮ್ ಚಾಂಪಿಯನ್ ಶಿಪ್ ; ಭಾರತಕ್ಕೆ ಪಿ.ವಿ. ಸಿಂಧು, ಎಚ್.ಎಸ್.ಪ್ರಣಯ್ ಸಾರಥ್ಯ

ಪಿ.ವಿ. ಸಿಂಧು , ಎಚ್.ಎಸ್. ಪ್ರಣಯ್ | Photo: PTI
ಹೊಸದಿಲ್ಲಿ: ಡಬಲ್ ಒಲಿಂಪಿಯನ್ ಪಿ.ವಿ. ಸಿಂಧು ಹಾಗೂ ವಿಶ್ವದ ನಂ.8ನೇ ಆಟಗಾರ ಎಚ್.ಎಸ್. ಪ್ರಣಯ್ ಮಲೇಶ್ಯದಲ್ಲಿ ಫೆಬ್ರವರಿ 13ರಿಂದ 19ರ ತನಕ ನಡೆಯುವ ಏಶ್ಯ ಬ್ಯಾಡ್ಮಿಂಟನ್ ಟೀಮ್ ಚಾಂಪಿಯನ್ ಶಿಪ್ ನಲ್ಲಿ ಭಾರತೀಯ ತಂಡದ ಸವಾಲನ್ನು ಮುನ್ನಡೆಸಲಿದ್ದಾರೆ.
2024ರ ಪ್ಯಾರಿಸ್ ಒಲಿಂಪಿಕ್ಸ್ ಕ್ವಾಲಿಫಿಕೇಶನ್ ಗೆ ಸ್ಪರ್ಧೆಯಲ್ಲಿರಲು ಅಮೂಲ್ಯ ಅರ್ಹತಾ ಅಂಕಗಳನ್ನು ಗಳಿಸಲು ಈ ಪ್ರತಿಷ್ಠಿತ ಟೀಮ್ ಇವೆಂಟ್ ಭಾರತೀಯ ಶಟ್ಲರ್ ಗಳಿಗೆ ಮುಖ್ಯವಾಗಿದೆ.
ಟೀಮ್ ಚಾಂಪಿಯನ್ ಶಿಪ್ ಭಾರತದ ಸ್ಟಾರ್ ಶಟ್ಲರ್ ಪಿ.ವಿ. ಸಿಂಧು ಪುನರಾಗಮನಕ್ಕೆ ವೇದಿಕೆಯಾಗಿದೆ. ಸಿಂಧು ಮೊಣಕಾಲು ನೋವಿನಿಂದಾಗಿ ಸುಮಾರು ನಾಲ್ಕು ತಿಂಗಳುಗಳಿಂದ ಅಂತರ್ರಾಷ್ಟ್ರೀಯ ಸ್ಪರ್ಧೆಗಳಿಂದ ದೂರ ಉಳಿದಿದ್ದಾರೆ.
ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಮಾಜಿ ವಿಶ್ವ ಚಾಂಪಿಯನ್ ಸಿಂಧುಗೆ 16ರ ವಯಸ್ಸಿನ ಸೀನಿಯರ್ ರಾಷ್ಟ್ರೀಯ ಚಾಂಪಿಯನ್ ಅನ್ಮೋಲ್ ಖರ್ಬ್, ಏಶ್ಯ ಬ್ಯಾಡ್ಮಿಂಟನ್ ಜೂನಿಯರ್ ಚಾಂಪಿಯನ್ ಶಿಪ್ ನಲ್ಲಿ ಪದಕ ವಿಜೇತೆ ತನ್ವೀ ಶರ್ಮಾ ಹಾಗೂ ಅಶ್ಮಿತಾ ಚಲಿಹಾ ಅವರು ಸಾಥ್ ನೀಡಲಿದ್ದಾರೆ.
ಒಲಿಂಪಿಕ್ ಕ್ರೀಡಾಕೂಟಕ್ಕೆ ಕೆಲವೇ ತಿಂಗಳುಗಳು ಬಾಕಿ ಇರುವಾಗ ಪ್ಯಾರಿಸ್ ಒಲಿಂಪಿಕ್ಸ್ ಕ್ವಾಲಿಫಿಕೇಶನ್ ದೃಷ್ಟಿಯಿಂದ ಇದೊಂದು ಪ್ರಮುಖ ಸ್ಪರ್ಧಾವಳಿಗಳಲ್ಲಿ ಒಂದಾಗಿದೆ. ಟೀಮ್ ಇಂಡಿಯಾಕ್ಕೆ ಕರೆ ನೀಡುವ ಮೂಲಕ ಸೀನಿಯರ್ ರಾಷ್ಟ್ರೀಯ ಚಾಂಪಿಯನ್ ಗಳಿಗೆ ನಾವು ಆದ್ಯತೆ ನೀಡಿದ್ದೇವೆ. ಇದು ಭಾರತದ ಬಲಿಷ್ಠ ತಂಡವಾಗಿದೆ. ಪ್ರತಿಷ್ಠಿತ ಟೂರ್ನಿಯಲ್ಲಿ ಈ ತಂಡವು ಇತಿಹಾಸ ರಚಿಸಲಿದೆ ಎಂಬ ವಿಶ್ವಾಸ ನನಗಿದೆ ಎಂದು ಭಾರತೀಯ ಬ್ಯಾಡ್ಮಿಂಟನ್ ಅಸೋಸಿಯೇಶನ್(ಬಿಎಫ್ಐ)ಪ್ರಧಾನ ಕಾರ್ಯದರ್ಶಿ ಸಂಜಯ್ ಮಿಶ್ರಾ ಹೇಳಿದ್ದಾರೆ.
ಕಳೆದ ವರ್ಷ ದುಬೈನಲ್ಲಿ ಏಶ್ಯ ಬ್ಯಾಡ್ಮಿಂಟನ್ ಮಿಕ್ಸೆಡ್ ಟೀಮ್ ಚಾಂಪಿಯನ್ ಶಿಪ್ ನಲ್ಲಿ ಐತಿಹಾಸಿಕ ಕಂಚಿನ ಪದಕ ಜಯಿಸಿದ್ದ ಟ್ರೀಸಾ ಜೋಲಿ ಹಾಗೂ ಗಾಯತ್ರಿ ಗೋಪಿಚಂದ್ ಮಹಿಳೆಯರ ಡಬಲ್ಸ್ ನಲ್ಲಿ ಸ್ಪರ್ಧಿಸಲಿದ್ದಾರೆ. ಗುವಾಹಟಿ ಮಾಸ್ಟರ್ಸ್-2023 ಚಾಂಪಿಯನ್ ಅಶ್ವಿನಿ ಪೊನ್ನಪ್ಪ-ತನಿಶಾ ಕ್ರಾಸ್ಟೊ, ಹಾಲಿ ಸೀನಿಯರ್ ನ್ಯಾಶನಲ್ ಚಾಂಪಿಯನ್ ಗಳಾದ ಪ್ರಿಯಾ ದೇವಿ- ಶ್ರುತಿ ಮಿಶ್ರಾ ಅವರು ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಮತ್ತೊಂದೆಡೆ, 2023ರಲ್ಲಿ ಮೊದಲ ಬಾರಿ ಬಿಡಬ್ಲ್ಯುಎಫ್ ವರ್ಲ್ಡ್ ಚಾಂಪಿಯನ್ ಶಿಪ್ ಪದಕ ವಿಜೇತ, ಬಿಡಬ್ಲ್ಯುಎಫ್ ವರ್ಲ್ಡ್ ಟೂರ್ ಪ್ರಶಸ್ತಿ ಜಯಿಸಿರುವ ಭಾರತದ ಪರ ಅತ್ಯಂತ ಸ್ಥಿರ ಪ್ರದರ್ಶನ ನೀಡುತ್ತಿರುವ ಆಟಗಾರರ ಪೈಕಿ ಒಬ್ಬರಾಗಿರುವ ಪ್ರಣಯ್ ಅವರು ಪುರುಷರ ತಂಡವನ್ನು ನಾಯಕನಾಗಿ ಮುನ್ನಡೆಸಲಿದ್ದಾರೆ.
ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಚಿನ್ನದ ಪದಕ ವಿಜೇತ ಲಕ್ಷ್ಯ ಸೇನ್, ವಿಶ್ವದ ಮಾಜಿ ನಂ.1 ಆಟಗಾರ ಕೆ. ಶ್ರೀಕಾಂತ್ ಹಾಗೂ ಇತ್ತೀಚೆಗೆ ಸೀನಿಯರ್ ನ್ಯಾಶನಲ್ ಚಾಂಪಿಯನ್ ಆಗಿರುವ ಚಿರಾಗ್ ಸೇನ್ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದಿದ್ದಾರೆ.
ಏಶ್ಯನ್ ಗೇಮ್ಸ್ ಹಾಗೂ ಏಶ್ಯನ್ ಚಾಂಪಿಯನ್ ಶಿಪ್ ನಲ್ಲಿ ಚಿನ್ನದ ಪದಕ ಸಹಿತ 2023ರಲ್ಲಿ ಆರು ಪ್ರಶಸ್ತಿಗಳನ್ನು ಜಯಿಸಿರುವ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಹಾಗೂ ಚಿರಾಗ್ ಶೆಟ್ಟಿ ಪುರುಷರ ಡಬಲ್ಸ್ ಜವಾಬ್ದಾರಿಯನ್ನು ಹೊರಲಿದ್ದಾರೆ.
ಭಾರತೀಯ ಪುರುಷರ ತಂಡವು 2016 ಹಾಗೂ 2018ರ ಆವೃತ್ತಿಯ ಟೂರ್ನಿಗಳಲ್ಲಿ ಕಂಚಿನ ಪದಕವನ್ನು ಗೆದ್ದುಕೊಂಡಿದೆ.
ಭಾರತದ ಬ್ಯಾಡ್ಮಿಂಟನ್ ತಂಡ
ಪುರುಷರ ತಂಡ: ಎಚ್.ಎಸ್.ಪ್ರಣಯ್, ಲಕ್ಷ್ಯ ಸೇನ್, ಕಿಡಂಬಿ ಶ್ರೀಕಾಂತ್, ಚಿರಾಗ್ ಸೇನ್, ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ, ಚಿರಾಗ್ ಶೆಟ್ಟಿ, ಧ್ರುವ್ ಕಪಿಲ, ಎಂ.ಆರ್. ಅರ್ಜುನ್, ಸೂರಜ್, ಪೃಥ್ವಿ ರಾಯ್.
ಮಹಿಳೆಯರ ತಂಡ: ಪಿ.ವಿ. ಸಿಂಧು, ಅನ್ಮೋಲ್ ಖರ್ಬ್, ತನ್ವಿ ಶರ್ಮಾ, ಅಶ್ಮಿತಾ ಚಲಿಹಾ, ಟ್ರೀಸಾ ಜೋಲಿ, ಗಾಯತ್ರಿ ಗೋಪಿಚಂದ್, ಅಶ್ವಿನಿ ಪೊನ್ನಪ್ಪ, ತನಿಶಾ ಕ್ರಾಸ್ಟಾ, ಪ್ರಿಯಾ ದೇವಿ, ಶ್ರುತಿ ಮಿಶ್ರಾ.







