ಏಶ್ಯನ್ ಬೀಚ್ ಹ್ಯಾಂಡ್ಬಾಲ್ ಚಾಂಪಿಯನ್ಶಿಪ್ | ಪಾಕಿಸ್ತಾನದ ವಿರುದ್ಧ ಆಡಿದ ಭಾರತ ತಂಡ

Competitions - Asian Handball Federation
ಹೊಸದಿಲ್ಲಿ: ಉಭಯ ದೇಶಗಳ ನಡುವಿನ ಸಂಘರ್ಷ ಹೆಚ್ಚುತ್ತಿರುವಾಗಲೇ ಶುಕ್ರವಾರ ಒಮಾನ್ ನ ಮಸ್ಕತ್ ನಲ್ಲಿ ನಡೆದ 10ನೇ ಆವೃತ್ತಿಯ ಏಶ್ಯನ್ ಬೀಚ್ ಹ್ಯಾಂಡ್ ಬಾಲ್ ಚಾಂಪಿಯನ್ ಶಿಪ್ನಲ್ಲಿ ಭಾರತ ತಂಡವು ಪಾಕಿಸ್ತಾನದ ವಿರುದ್ಧ ಆಡಿದೆ.
ಲೀಗ್ ಪಂದ್ಯದ ವೇಳೆ ಭಾರತೀಯರು ಕಪ್ಪು ತೋಳಿನ ಪಟ್ಟಿ ಧರಿಸಿದ್ದರು. ಆದರೆ ಆಯೋಜಕರು ಹಾಗೂ ಏಶ್ಯನ್ ಹ್ಯಾಂಡ್ಬಾಲ್ ಒಕ್ಕೂಟ(ಎಎಚ್ಎಫ್)ಅವುಗಳನ್ನು ತೆಗೆದುಹಾಕುವಂತೆ ಭಾರತೀಯ ಕೋಚಿಂಗ್ ಸಿಬ್ಬಂದಿಗೆ ತಿಳಿಸಿತ್ತು ಎಂದು ಮೂಲಗಳು ತಿಳಿಸಿವೆ.
ಸ್ವದೇಶದಲ್ಲಿ ಸಾರ್ವಜನಿಕರ ಪ್ರತಿಕ್ರಿಯೆಯ ಭಯದಿಂದಾಗಿ ಭಾರತೀಯ ತಂಡವು ಪಾಕಿಸ್ತಾನ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸಲು ಆರಂಭದಲ್ಲಿ ನಿರ್ಧರಿಸಿತು. ಆದರೆ ಎಎಚ್ಎಫ್ ನಿಷೇಧ ಹಾಗೂ ಗಮನಾರ್ಹ ದಂಡದ ಬಗ್ಗೆ ಎಚ್ಚರಿಸಿದ ನಂತರ ಪಂದ್ಯ ಆಡಲು ನಿರ್ಧರಿಸಿತು.
‘‘ಅಂತರರಾಷ್ಟ್ರೀಯ ಹ್ಯಾಂಡ್ಬಾಲ್ ಒಕ್ಕೂಟದ ಪ್ರಕಾರ ನಾವು ಪಂದ್ಯವನ್ನು ಬಹಿಷ್ಕರಿಸಿದರೆ, 10,000 ಡಾಲರ್ ದಂಡವನ್ನು ಪಾವತಿಸಬೇಕಾಗುತ್ತದೆ. ಅಂತರರಾಷ್ಟ್ರೀಯ ಸ್ಪರ್ಧೆಗಳಿಂದ 2 ವರ್ಷಗಳ ನಿಷೇಧವನ್ನು ಎದುರಿಸಬೇಕಾಗುತ್ತದೆ. ಭಾರತೀಯ ಪಂದ್ಯವು ಪಂದ್ಯದಲ್ಲಿ ಭಾಗವಹಿಸದಿದ್ದರೆ ಅದನ್ನು ಒಲಿಂಪಿಕ್ಸ್ನ ಆಶಯಕ್ಕೆ ವಿರುದ್ಧ ಎಂದು ಪರಿಗಣಿಸಲಾಗುತ್ತದೆ ಎಂದು ಎಎಚ್ಎಫ್ ನಮಗೆ ಸ್ಪಷ್ಟವಾಗಿ ತಿಳಿಸಿತ್ತು. ನಮಗೆ ಬೇರೆ ದಾರಿ ಇರಲಿಲ್ಲ’’, ಎಂದು ಹ್ಯಾಂಡ್ಬಾಲ್ ಫೆಡರೇಶನ್ ಆಫ್ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕ ಆನಂದೇಶ್ವರ ಪಾಂಡೆ ತಿಳಿಸಿದ್ದಾರೆ.
ಸುಲ್ತಾನ್ ಕಬೂಸ್ ಕ್ರೀಡಾ ಸಂಕೀರ್ಣದಲ್ಲಿ ನಡೆದ ಪಂದ್ಯದಲ್ಲಿ ಭಾರತ ತಂಡವು 0-2 ಅಂತರದಿಂದ ಸೋತಿದೆ.
ಪಂದ್ಯ ಆರಂಭವಾಗುವ ಮೊದಲು ಎಚ್ಎಫ್ಐ, ಪಾಕಿಸ್ತಾನದೊಂದಿಗೆ ಆಡಬೇಕೆ ಅಥವಾ ಬೇಡವೇ ಎಂಬುದರ ಕುರಿತು ಮಾರ್ಗದರ್ಶನ ಕೋರಿ ಕ್ರೀಡಾ ಸಚಿವಾಲಯ ಹಾಗೂ ಭಾರತೀಯ ಒಲಿಂಪಿಕ್ಸ್ ಸಂಸ್ಥೆಗೆ(ಐಒಎ)ಪ್ರತ್ಯೇಕ ಪತ್ರಗಳನ್ನು ಬರೆದಿತ್ತು. ಅವರು ನಮ್ಮ ಮೇಲ್ಗೆ ತಕ್ಷಣ ಪ್ರತಿಕ್ರಿಯಿಸಲಿಲ್ಲ. ಭಾರತೀಯ ತಂಡಗಳು ಪಾಕಿಸ್ತಾನದೊಂದಿಗೆ ಆಡುವುದನ್ನು ತಡೆಯುವ ಯಾವುದೇ ಸ್ಪಷ್ಟ ಸಲಹೆ ಸರಕಾರದಿಂದ ಇರಲಿಲ್ಲ. ಒಂದು ವೇಳೆ ಇದ್ದಿದ್ದರೆ, ನಾವು ಸ್ಪರ್ಧೆಯಿಂದ ಹೊರಗಿರುತ್ತಿದ್ದೆವು’’ ಎಂದು ಪಾಂಡೆ ಹೇಳಿದರು.
ಈ ಪಂದ್ಯಾವಳಿಗೆ ತಿಂಗಳುಗಳ ಮೊದಲೇ ಹೆಸರು ನೋಂದಾಯಿಸಲಾಗಿತ್ತು. ಭಾರತೀಯ ಪುರುಷರ ಹಾಗೂ ಮಹಿಳಾ ತಂಡಗಳು ಮೇ 5ರಂದು ಪಂದ್ಯಾವಳಿಗಾಗಿ ಮಸ್ಕತ್ಗೆ ಬಂದಿಳಿದಿದ್ದವು. ಸೆಮಿ ಫೈನಲ್ ಹಾಗೂ ಫೈನಲ್ ನಲ್ಲಿ ಭಾರತ ಹಾಗೂ ಪಾಕಿಸ್ತಾನ ಮತ್ತೊಮ್ಮೆ ಪರಸ್ಪರ ಎದುರಾಗುವ ಸಾಧ್ಯತೆಯಿದೆ ಎಂದು ಪಾಂಡೆ ತಿಳಿಸಿದರು.
ಪಂದ್ಯಾವಳಿಯ ಫೈನಲ್ ಪಂದ್ಯವು ಮೇ 15ರಂದು ನಡೆಯಲಿದೆ. ಈ ಸ್ಪರ್ಧೆಯು 2026ರಲ್ಲಿ ನಡೆಯುವ ಬೀಚ್ ಹ್ಯಾಂಡ್ಬಾಲ್ ವಿಶ್ವ ಚಾಂಪಿಯನ್ಶಿಪ್ಗೆ ಅರ್ಹತಾ ಪಂದ್ಯಾವಳಿಯಾಗಿ ಕಾರ್ಯನಿರ್ವಹಿಸುತ್ತದೆ.