ಏಶ್ಯನ್ ಚಾಂಪಿಯನ್ಸ್ ಟ್ರೋಫಿ | ಭಾರತದ ಹಾಕಿ ತಂಡಕ್ಕೆ ಸತತ ಎರಡನೇ ಜಯ
► ಜಪಾನ್ ವಿರುದ್ಧ 5-1 ಜಯ

(PC : Hockey India)
ಬೀಜಿಂಗ್ : ಸುಖಜೀತ್ ಸಿಂಗ್ ಗಳಿಸಿದ ಅವಳಿ ಗೋಲುಗಳ ನೆರವಿನಿಂದ ಹೀರೊ ಏಶ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಪಂದ್ಯಾವಳಿಯ ಲೀಗ್ ಪಂದ್ಯದಲ್ಲಿ ಸೋಮವಾರ ಹಾಲಿ ಚಾಂಪಿಯನ್ ಭಾರತ ತಂಡವು ಜಪಾನ್ ತಂಡವನ್ನು 5-1 ಅಂತರದಿಂದ ಮಣಿಸಿದೆ. ಈ ಮೂಲಕ ಪಂದ್ಯಾವಳಿಯಲ್ಲಿ ಸತತ ಎರಡನೇ ಗೆಲುವು ದಾಖಲಿಸಿತು.
ಸುಖಜೀತ್ ಅವರು 2ನೇ ಹಾಗೂ 60ನೇ ನಿಮಿಷದಲ್ಲಿ ಗೋಲು ಗಳಿಸಿದರೆ, ಅಭಿಷೇಕ್(3ನೇ ನಿಮಿಷ), ಸಂಜಯ್(17ನೇ ನಿಮಿಷ) ಹಾಗೂ ಉತ್ತಮ್ ಸಿಂಗ್(54ನೇ ನಿಮಿಷ)ಭಾರತದ ಪರ ತಲಾ ಒಂದು ಗೋಲುಗಳನ್ನು ಕಲೆ ಹಾಕಿದರು.
ಮಾಟ್ಸುಮೊಟೊ ಕಝುಮಸ ಜಪಾನ್ ಪರ 41ನೇ ನಿಮಿಷದಲ್ಲಿ ಏಕೈಕ ಗೋಲು ಗಳಿಸಿದರು. ಜಪಾನ್ ವಿರುದ್ಧ ಗಳಿಸಿರುವ 5 ಗೋಲುಗಳ ಪೈಕಿ ಎರಡನ್ನು ಪೆನಾಲ್ಟಿ ಕಾರ್ನರ್ ಮೂಲಕ ಗಳಿಸಿತು. ನಾಲ್ಕು ಬಾರಿಯ ಚಾಂಪಿಯನ್ ಭಾರತವು ರವಿವಾರ ಆಡಿರುವ ತನ್ನ ಆರಂಭಿಕ ರೌಂಡ್ ರಾಬಿನ್ ಲೀಗ್ ಪಂದ್ಯದಲ್ಲಿ ಚೀನಾ ತಂಡವನ್ನು 3-0 ಅಂತರದಿಂದ ಮಣಿಸಿ ಶುಭಾರಂಭ ಮಾಡಿತ್ತು.
ಭಾರತವು ಕ್ಷಿಪ್ರವಾಗಿ ಮುನ್ನಡೆ ಪಡೆದುಕೊಂಡಿದ್ದು, ಸುಖಜೀತ್ ಸಿಂಗ್ ಪಂದ್ಯ ಆರಂಭವಾಗಿ ಎರಡನೇ ನಿಮಿಷದಲ್ಲಿ ಸಂಜಯ್ ನೀಡಿದ ಕ್ರಾಸ್ ನೆರವಿನಿಂದ ಫೀಲ್ಡ್ ಗೋಲು ಗಳಿಸಿದರು. ಭಾರತವು 3ನೇ ನಿಮಿಷದಲ್ಲಿ ತನ್ನ ಮುನ್ನಡೆಯನ್ನು 2-0ಗೆ ವಿಸ್ತರಿಸಿಕೊಂಡಿತು. ಅಭಿಷೇಕ್ ಅವರು ಜಪಾನ್ನ ಡಿಫೆಂಡರ್ಗಳು ಹಾಗೂ ಗೋಲ್ಕೀಪರ್ರನ್ನು ವಂಚಿಸಿ ಗೋಲು ಗಳಿಸಿದರು.
ಎರಡನೇ ಕ್ವಾರ್ಟರ್ನಲ್ಲಿ ಭಾರತವು ತನ್ನ ಶ್ರೇಷ್ಠ ಪ್ರದರ್ಶನ ಮುಂದುವರಿಸಿದ್ದು, ಸಂಜಯ್ ಅವರು 17ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಗೋಲಾಗಿ ಪರಿವರ್ತಿಸುವಲ್ಲಿ ಯಶಸ್ವಿಯಾದರು. ಈ ಮೂಲಕ ಭಾರತವು ಮೊದಲಾರ್ಧದ ಅಂತ್ಯಕ್ಕೆ 3-0 ಮುನ್ನಡೆ ಪಡೆದುಕೊಂಡಿತು.
2023ರ ಆವೃತ್ತಿಯ ಪಂದ್ಯಾವಳಿಯಲ್ಲಿ ಮೂರನೇ ಸ್ಥಾನ ಪಡೆದಿರುವ ಜಪಾನ್ ತಂಡ 21ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಅವಕಾಶ ಪಡೆದಿದ್ದು, ಆದರೆ ಅದನ್ನು ಗೋಲಾಗಿಸುವಲ್ಲಿ ವಿಫಲವಾಯಿತು.
ಮೊದಲಾರ್ಧದಲ್ಲಿ 10 ನಿಮಿಷದ ವಿರಾಮದ ಬಳಿಕ ವಾಪಸಾದ ಭಾರತವು ತಾಳ್ಮೆ ಹಾಗೂ ಶಿಸ್ತುಬದ್ಧವಾಗಿ ಅಡಿತು. ಕೊನೆಗೂ ರಚನಾತ್ಮಕ ದಾಳಿ ಸಂಘಟಿಸಿದ ಜಪಾನ್ ತಂಡ 41ನೇ ನಿಮಿಷದಲ್ಲಿ ಫೀಲ್ಡ್ ಗೋಲು ಗಳಿಸಿ ಸೋಲಿನ ಅಂತರ ತಗ್ಗಿಸಿತು. ಕಝುಮಸಾ ಭಾರತದ ಗೋಲ್ಕೀಪರ್ ಕೃಷ್ಣ ಪಾಠಕ್ರನ್ನು ವಂಚಿಸಿ ಗೋಲು ಗಳಿಸುವಲ್ಲಿ ಶಕ್ತರಾದರು.
ಜಪಾನ್ ಗೋಲ್ಗಿಂತ ಕೇವಲ ಒಂದು ನಿಮಿಷ ಮೊದಲು ಭಾರತ ಉತ್ತಮ ಅವಕಾಶ ಕಳೆದುಕೊಂಡಿತು. ವಿವೇಕ್ ಸಾಗರ್ ನಾಲ್ಕನೇ ಗೋಲು ಗಳಿಸುವುದರಿಂದ ಸ್ವಲ್ಪದರಲ್ಲೇ ವಂಚಿತರಾದರು.
ಜರ್ಮನ್ಪ್ರೀತ್ ಸಿಂಗ್ ನೆರವಿನಿಂದ ಉತ್ತಮ್ ಸಿಂಗ್ 54ನೇ ನಿಮಿಷದಲ್ಲಿ ಫೀಲ್ಡ್ ಗೋಲು ಗಳಿಸಿದರು. ಈ ಮೂಲಕ ಭಾರತವು ತನ್ನ 4ನೇ ಗೋಲು ಗಳಿಸಿತು.
ಅಭಿಷೇಕ್ ನೆರವಿನಿಂದ ಸುಖಜೀತ್ ಅವರು 60ನೇ ನಿಮಿಷದಲ್ಲಿ ಮತ್ತೊಂದು ಗೋಲು ಗಳಿಸಿ ಭಾರತದ ಮುನ್ನಡೆಯನ್ನು 5-1ಕ್ಕೆ ವಿಸ್ತರಿಸಿದರು.
ಇದು ಸಂಪೂರ್ಣ ತಂಡದ ಪ್ರಯತ್ನವಾಗಿತ್ತು. ನಾವು ಮೂಲಭೂತ ಅಂಶಗಳಿಗೆ ಅಂಟಿಕೊಂಡಿದ್ದೆವು. ಉತ್ತಮ ದಾಳಿ ಸಂಘಟಿಸಿ, ಗುರಿಯನ್ನು ಖಚಿತಪಡಿಸಿಕೊಂಡಿದ್ದೆವು ಎಂದು ಪಂದ್ಯದ ಹೀರೊ ಅಭಿಷೇಕ್ ಹೇಳಿದ್ದಾರೆ.
ಹರ್ಮನ್ಪ್ರೀತ್ ಸಿಂಗ್ ನಾಯಕತ್ವದ ಭಾರತ ತಂಡು ಬುಧವಾರ ಕಳೆದ ಆವೃತ್ತಿಯ ರನ್ನರ್ಸ್ ಅಪ್ ಮಲೇಶ್ಯ ತಂಡವನ್ನು ಎದುರಿಸಲಿದೆ.
ಆರು ತಂಡಗಳ ನಡುವೆ ರೌಂಡ್-ರಾಬಿನ್ ಲೀಗ್ ಪಂದ್ಯಗಳ ನಡೆದ ನಂತರ ಅಗ್ರ ನಾಲ್ಕು ತಂಡಗಳು ಸೆಮಿ ಫೈನಲ್ಗೆ ಅರ್ಹತೆ ಪಡೆಯುತ್ತವೆ. ಸೆಮಿ ಫೈನಲ್ ಪಂದ್ಯಗಳು ಸೆಪ್ಟಂಬರ್ 16ರಂದು ಆಡಲಾಗುತ್ತದೆ. ಫೈನಲ್ ಪಂದ್ಯವು ಸೆಪ್ಟಂಬರ್ 17ರಂದು ನಿಗದಿಪಡಿಸಲಾಗಿದೆ.







