ಏಷ್ಯನ್ ಚಾಂಪಿಯನ್ಸ್ ಟ್ರೋಫಿ; ತಟಸ್ಥ ಸ್ಥಳಕ್ಕೆ ಪಂದ್ಯಗಳ ಬದಲಾವಣೆಗೆ ಪಾಕ್ ಮನವಿ ಪುರಸ್ಕರಿಸದ ಹಾಕಿ ಇಂಡಿಯಾ

Photo Credit: Bhaskar English
ಅಕ್ಟೋಬರ್ 27ರಿಂದ ಮೊಹಾಲಿಯಲ್ಲಿ 2026ರ ಪುರುಷರ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿ ನಡೆಯಲಿದ್ದು, ವ್ಯವಸ್ಥೆಗಳಲ್ಲಿ ಬದಲಾವಣೆ ಕೋರಿ ಪಾಕಿಸ್ತಾನವು ಏಷ್ಯನ್ ಹಾಕಿ ಫೆಡರೇಶನ್ ಅನ್ನು ಸಂಪರ್ಕಿಸಿದೆ.
ಏಷ್ಯನ್ ಚಾಂಪಿಯನ್ಸ್ ಟ್ರೋಫಿಯ ಸ್ಥಳವನ್ನು ಬದಲಿಸಲು ಪಾಕಿಸ್ತಾನ ಮಾಡಿರುವ ಮನವಿಯನ್ನು ಪರಿಗಣಿಸುವುದಿಲ್ಲ ಎಂದು ಹಾಕಿ ಇಂಡಿಯಾದ ಪ್ರಧಾನ ಕಾರ್ಯದರ್ಶಿ ಭೋಲಾನಾಥ್ ಸಿಂಗ್ ಹೇಳಿದ್ದಾರೆ. ಅಕ್ಟೋಬರ್ 27ರಿಂದ ಮೊಹಾಲಿಯಲ್ಲಿ 2026ರ ಪುರುಷರ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿ ನಡೆಯಲಿದೆ. ಈ ವ್ಯವಸ್ಥೆಗಳಲ್ಲಿ ಬದಲಾವಣೆ ಕೋರಿ ಪಾಕಿಸ್ತಾನವು ಏಷ್ಯನ್ ಹಾಕಿ ಫೆಡರೇಶನ್ (AHF) ಅನ್ನು ಸಂಪರ್ಕಿಸಿದೆ.
ಪಂದ್ಯಾವಳಿಯನ್ನು ಭಾರತದಿಂದ ಬೇರೆಡೆಗೆ ಸ್ಥಳಾಂತರಿಸಲು ಅಥವಾ ಪಾಕಿಸ್ತಾನದ ಎಲ್ಲಾ ಪಂದ್ಯಗಳನ್ನು ತಟಸ್ಥ ಸ್ಥಳಕ್ಕೆ ಬದಲಿಸುವಂತೆ ಪಾಕಿಸ್ತಾನ ಹಾಕಿ ಫೆಡರೇಶನ್ (PHF) ಇದೀಗ ಏಷ್ಯನ್ ಹಾಕಿ ಸಂಸ್ಥೆಯನ್ನು ಕೋರಿದೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಸೂಕ್ಷ್ಮ ಸಂಬಂಧಗಳನ್ನು ಪರಿಗಣಿಸಿದ ನಂತರವೇ ಈ ಮನವಿಯನ್ನು ಮಾಡಲಾಗಿದೆ ಎಂದು PHF ಅಧ್ಯಕ್ಷ ಮೊಹಿಯುದ್ದೀನ್ ಅಹ್ಮದ್ ವಾನಿ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಪಾಕಿಸ್ತಾನದ ತಂಡದ ಸುರಕ್ಷತೆಯ ಬಗ್ಗೆಯೂ ಫೆಡರೇಶನ್ ಕಳವಳ ವ್ಯಕ್ತಪಡಿಸಿದ್ದು, ಪಂದ್ಯಾವಳಿಯ ಸಮಯದಲ್ಲಿ ಆಟಗಾರರು ಮತ್ತು ಸಹಾಯಕ ಸಿಬ್ಬಂದಿಗೆ ಸುರಕ್ಷಿತ ವಾತಾವರಣ ಖಾತ್ರಿಪಡಿಸುವ ಉದ್ದೇಶದಿಂದ ಮನವಿ ಮಾಡಲಾಗಿದೆ ಎಂದು ಹೇಳಿದೆ. ಆದರೆ ಮಾಧ್ಯಮಗಳ ಜೊತೆಗೆ ಮಾತನಾಡಿದ ಭೋಲಾ ನಾಥ್, “ಸ್ಥಳದಲ್ಲಿ ಯಾವುದೇ ಬದಲಾವಣೆ ಇಲ್ಲ ಮತ್ತು ಪಂದ್ಯಾವಳಿ ಆಡಲು ಪಾಕಿಸ್ತಾನ ತಂಡ ಭಾರತಕ್ಕೆ ಪ್ರಯಾಣಿಸಲೇಬೇಕು” ಎಂದು ಹೇಳಿದ್ದಾರೆ.
“ಪಾಕಿಸ್ತಾನದ ಅಂತಹ ಯಾವುದೇ ಮನವಿಯನ್ನು ಪರಿಗಣಿಸಲಾಗುವುದಿಲ್ಲ. ಸ್ಥಳದಲ್ಲಿ ಯಾವುದೇ ಬದಲಾವಣೆ ಇಲ್ಲ. ಹಿಂದೆ ಕೂಡ ಪಾಕಿಸ್ತಾನ ಹೀಗೆ ಮಾಡಿದೆ. ಅವರು ಏಷ್ಯನ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡಲು ಬಯಸಿದರೆ ಭಾರತಕ್ಕೆ ಬರಲೇಬೇಕು” ಎಂದು ಹೇಳಿದ್ದಾರೆ.
ಮಾತ್ರವಲ್ಲದೆ, ಪಾಕಿಸ್ತಾನಕ್ಕೆ ಪರ್ಯಾಯವಾಗಿ ಬಾಂಗ್ಲಾದೇಶ ಮತ್ತು ಒಮಾನ್ ತಂಡಗಗಳನ್ನು ಪರಿಗಣಿಸಲಾಗುತ್ತಿದೆ. ಪಾಕಿಸ್ತಾನ ಭಾರತಕ್ಕೆ ಪ್ರಯಾಣಿಸಲು ನಿರಾಕರಿಸಿದರೆ ಇವುಗಳಲ್ಲಿ ಒಂದು ತಂಡ ಅವಕಾಶ ಪಡೆಯಲಿವೆ ಎಂದು ಅವರು ವಿವರ ನೀಡಿದ್ದಾರೆ.
ರಾಷ್ಟ್ರೀಯ ತಂಡಕ್ಕೆ ಭಾರತಕ್ಕೆ ಪ್ರಯಾಣಿಸಲು ಇನ್ನೂ ಸರ್ಕಾರದ ಅನುಮತಿ ದೊರೆತಿಲ್ಲ ಎಂದು ಪಾಕಿಸ್ತಾನದ ಹಾಕಿ ಫೆಡರೇಶನ್ ಹಿರಿಯ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದ ಕೆಲವೇ ಗಂಟೆಗಳಲ್ಲಿ ಈ ಬೆಳವಣಿಗೆ ನಡೆದಿದೆ. ಆದರೆ ದೇಶದಲ್ಲಿ ಆಯೋಜಿಸಲಾಗುವ ಬಹುರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಪಾಕಿಸ್ತಾನದ ತಂಡಗಳು ಸ್ಪರ್ಧಿಸಲು ಭಾರತದ ಕ್ರೀಡಾ ನೀತಿ ಅವಕಾಶ ನೀಡುತ್ತದೆ ಎಂದು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಹೇಳಿದ್ದರು.
ಭದ್ರತಾ ಕಾರಣಗಳಿಂದ ಪಾಕಿಸ್ತಾನವು ಈ ಹಿಂದೆ ಭಾರತದಲ್ಲಿ ಆಯೋಜಿಸಲಾದ ಪಂದ್ಯಾವಳಿಗಳಿಂದ ಹಿಂದೆ ಸರಿದಿತ್ತು. ಕಳೆದ ವರ್ಷ ತಮಿಳುನಾಡಿನಲ್ಲಿ ನಡೆದ ಎಫ್ಐಎಚ್ ಜ್ಯೂನಿಯರ್ ವಿಶ್ವಕಪ್ನಿಂದವೂ ತಂಡ ಹಿಂದೆ ಸರಿದಿತ್ತು. ಇದೇ ರೀತಿಯ ಕಾರಣಗಳನ್ನು ನೀಡಿ ಏಷ್ಯಾ ಕಪ್ನಿಂದಲೂ ಹೊರಗುಳಿದಿತ್ತು. 2026ರ ಏಷ್ಯನ್ ಚಾಂಪಿಯನ್ ಟ್ರೋಫಿಯಲ್ಲಿ ಭಾರತ, ಪಾಕಿಸ್ತಾನ, ಮಲೇಷ್ಯಾ, ಚೀನಾ, ಜಪಾನ್ ಮತ್ತು ಕೊರಿಯಾ ತಂಡಗಳು ಭಾಗವಹಿಸಲಿವೆ. ಪಾಕಿಸ್ತಾನ ಹಿಂದೆ ಸರಿದಲ್ಲಿ ಇತರ ದೇಶಗಳಿಗೆ ಅವಕಾಶ ದೊರೆಯಲಿದೆ.






