Asian Games 2026 | ರೋಯಿಂಗ್ ನ ಪುರುಷರ ಡಬಲ್ಸ್ ಸ್ಕಲ್ಸ್ನಲ್ಲಿ ಭಾರತಕ್ಕೆ ಕಂಚು
ಕೊನೆಯ ಹಂತದಲ್ಲಿ ಬೆಳ್ಳಿ ಕಳೆದುಕೊಂಡ ಸತ್ನಾಮ್ ಸಿಂಗ್–ಸಲ್ಮಾನ್ ಖಾನ್ ಜೋಡಿ

Photo: PTI
ಹೊಸದಿಲ್ಲಿ / ನಗೋಯಾ: ಭಾರತದ ರೋಯಿಂಗ್ ಪಟುಗಳಾದ ಸತ್ನಾಮ್ ಸಿಂಗ್ ಮತ್ತು ಸಲ್ಮಾನ್ ಖಾನ್, ಏಷ್ಯನ್ ಗೇಮ್ಸ್ನ ಪುರುಷರ ಡಬಲ್ ಸ್ಕಲ್ಸ್ ವಿಭಾಗದಲ್ಲಿ ಕಂಚಿನ ಪದಕ ಗೆದ್ದಿದ್ದಾರೆ. ಏಷ್ಯನ್ ಗೇಮ್ಸ್ನ ಪುರುಷರ ಡಬಲ್ ಸ್ಕಲ್ಸ್ ವಿಭಾಗದಲ್ಲಿ ಭಾರತಕ್ಕೆ ಲಭಿಸಿದ ಮೊದಲ ಪದಕ ಇದಾಗಿದೆ.
ರೇಸ್ನ 1,500 ಮೀಟರ್ವರೆಗೂ ಎರಡನೇ ಸ್ಥಾನದಲ್ಲಿದ್ದ ಭಾರತೀಯ ಜೋಡಿ, ಅಂತಿಮ 500 ಮೀಟರ್ಗಳಲ್ಲಿ ವೇಗ ಕಳೆದುಕೊಂಡು ಮೂರನೇ ಸ್ಥಾನಕ್ಕೆ ಜಾರಿತು.
ಚೀನಾದ ಯಿ ಕ್ಸುಡಿ ಮತ್ತು ನೀ ಯಿಡೆ ಜೋಡಿ 6:09.37ರಲ್ಲಿ ಗುರಿ ತಲುಪಿ ಚಿನ್ನದ ಪದಕ ಗೆದ್ದರೆ, ಉಜ್ಬೇಕಿಸ್ತಾನ್ನ ಪಾವೆಲ್ ಸೊರಿನ್ ಮತ್ತು ಮೆಖ್ರೋಜ್ಬೆಕ್ ಮಮತ್ಕುಲೋವ್ ಜೋಡಿ 6:10.49ರಲ್ಲಿ ಗುರಿ ತಲುಪಿ ಬೆಳ್ಳಿ ಪದಕ ತನ್ನದಾಗಿಸಿಕೊಂಡಿತು.
26 ವರ್ಷದ ಸತ್ನಾಮ್ ಸಿಂಗ್ ಮಾಜಿ ರಾಷ್ಟ್ರೀಯ ಹ್ಯಾಂಡ್ಬಾಲ್ ಆಟಗಾರರಾಗಿದ್ದು, ಸುಮಾರು ಎಂಟು ವರ್ಷಗಳ ಹಿಂದೆ ರೋಯಿಂಗ್ ಕ್ಷೇತ್ರಕ್ಕೆ ಕಾಲಿಟ್ಟಿದ್ದರು.
ತಮ್ಮ ಮೊದಲ ಏಷ್ಯನ್ ಗೇಮ್ಸ್ ಪದಕ ಗೆದ್ದಿರುವ 28 ವರ್ಷದ ಸಲ್ಮಾನ್ ಅವರ ರೋಯಿಂಗ್ ಪಯಣ 2018ರಲ್ಲಿ ಆರಂಭವಾಯಿತು. ಭಾರತೀಯ ಸೇನೆಯ ಬಾಂಬೆ ಎಂಜಿನಿಯರಿಂಗ್ ಗ್ರೂಪ್ಗೆ ಸೇರಿದ ಬಳಿಕ ಅವರು ರೋಯಿಂಗ್ನ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದಾರೆ.




