Asian Games 2026 | 10 ಮೀ. ರೈಫಲ್ನಲ್ಲಿ ಇಲಾವೆನಿಲ್ ವಲರಿವನ್–ರಾಕೇಶ್ ಜೋಡಿ ಫೈನಲ್ಗೆ
ಬ್ಯಾಡ್ಮಿಂಟನ್ ಕ್ವಾರ್ಟರ್ ಫೈನಲ್ ನಲ್ಲಿ ಪಿ.ವಿ.ಸಿಂಧುಗೆ ಸೋಲು

ಇಲಾವೆನಿಲ್ ವಲರಿವನ್, ಪಾರ್ಥ್ ರಾಕೇಶ್ ಮಾನೆ | Photo credit : X
ಹೊಸದಿಲ್ಲಿ / ನಗೋಯಾ: ಏಷ್ಯನ್ ಗೇಮ್ಸ್ 2026ರ 10 ಮೀಟರ್ ಏರ್ ರೈಫಲ್ ಮಿಶ್ರ ತಂಡದ ಸ್ಪರ್ಧೆಯಲ್ಲಿ ಭಾರತದ ಭರವಸೆಯ ತಾರೆ ಇಲಾವೆನಿಲ್ ವಲರಿವನ್ ಮತ್ತು ಪಾರ್ಥ್ ರಾಕೇಶ್ ಮಾನೆ ಅವರ ಜೋಡಿ ಫೈನಲ್ಗೆ ಪ್ರವೇಶಿಸಿದೆ.
ಅರ್ಹತಾ ಸುತ್ತಿನಲ್ಲಿ ಭಾರತದ ಜೋಡಿ ಒಟ್ಟು 634.6 ಅಂಕಗಳನ್ನು ಗಳಿಸಿ ಎರಡನೇ ಸ್ಥಾನ ಪಡೆಯುವ ಮೂಲಕ ಚಿನ್ನದ ಪದಕದ ಪಂದ್ಯಕ್ಕೆ ಅರ್ಹತೆ ಪಡೆದುಕೊಂಡಿದೆ. ಇನ್ನೊಂದೆಡೆ, ಚೀನಾ ತಂಡವು ಅರ್ಹತಾ ಸುತ್ತಿನಲ್ಲಿ 638.9 ಅಂಕಗಳನ್ನು ಗಳಿಸಿ ಹೊಸ ವಿಶ್ವ ದಾಖಲೆಯನ್ನು ನಿರ್ಮಿಸಿದೆ.
ಇಂದು ನಡೆಯಲಿರುವ ಬಹುನಿರೀಕ್ಷಿತ ಚಿನ್ನದ ಪದಕದ ಪಂದ್ಯದಲ್ಲಿ ಭಾರತವು ಚೀನಾ ತಂಡವನ್ನು ಎದುರಿಸಲಿದೆ.
ಬ್ಯಾಡ್ಮಿಂಟನ್ ಕ್ವಾರ್ಟರ್ ಫೈನಲ್ ನಲ್ಲಿ ಪಿ.ವಿ. ಸಿಂಧುಗೆ ಸೋಲು :
ಬ್ಯಾಡ್ಮಿಂಟನ್ ಕ್ವಾರ್ಟರ್ ಫೈನಲ್ ನ ಮೊದಲ ಪಂದ್ಯದಲ್ಲಿ ಭಾರತದ ತಾರಾ ಆಟಗಾರ್ತಿ ಪಿ.ವಿ.ಸಿಂಧು ಅವರು ಜಪಾನ್ ನ ಅಕಾನೆ ಯಮಗುಚಿ ವಿರುದ್ಧ ಸೋಲನುಭವಿಸಿದ್ದಾರೆ. ತೀವ್ರ ಪೈಪೋಟಿಯಿಂದ ಕೂಡಿದ್ದ ಮೂರು ಗೇಮ್ ಗಳ ಹಣಾಹಣಿಯಲ್ಲಿ ಮೊದಲ ಗೇಮ್ ಅನ್ನು ಸಿಂಧು 23-21 ಅಂತರದಿಂದ ಗೆದ್ದು ಶುಭಾರಂಭ ಮಾಡಿದರು.
ಆದರೆ, ಎರಡನೇ ಗೇಮ್ ನಲ್ಲಿ ಪ್ರಬಲವಾಗಿ ಪುಟಿದೆದ್ದ ಯಮಗುಚಿ 21-18 ಅಂತರದಿಂದ ಗೆದ್ದು ಸಮಬಲ ಸಾಧಿಸಿದರು.
ಬಳಿಕ ನಡೆದ ನಿರ್ಣಾಯಕ ಮೂರನೇ ಗೇಮ್ ನಲ್ಲಿ ಪಾರಮ್ಯ ಮೆರೆದ ಜಪಾನ್ ನ ಶಟ್ಲರ್ 21-11 ಅಂತರದ ಜಯ ದಾಖಲಿಸುವ ಮೂಲಕ ಪಂದ್ಯವನ್ನು 2-1 ಗೇಮ್ಗಳಿಂದ ತಮ್ಮದಾಗಿಸಿಕೊಂಡರು.
ಒಟ್ಟು ಒಂದು ಗಂಟೆ 12 ನಿಮಿಷಗಳ ಕಾಲ ನಡೆದ ಈ ರೋಚಕ ಪಂದ್ಯದಲ್ಲಿ ಇಬ್ಬರೂ ಆಟಗಾರ್ತಿಯರು ಸುದೀರ್ಘ ರ್ಯಾಲಿಗಳ ಮೂಲಕ ತೀವ್ರ ಪೈಪೋಟಿ ನಡೆಸಿದರು.
ಉಳಿದ ಆಟಗಾರ್ತಿಯರ ಮೇಲೆ ಒತ್ತಡ :
ಆರಂಭಿಕ ಪಂದ್ಯದಲ್ಲಿ ಸಿಂಧು ಜಯ ದಾಖಲಿಸಲು ವಿಫಲವಾದ ಹಿನ್ನೆಲೆಯಲ್ಲಿ, ಪದಕದ ಆಸೆ ಹಾಗೂ ಚಿನ್ನ ಗೆಲ್ಲುವ ನಿರೀಕ್ಷೆಯನ್ನು ಜೀವಂತವಾಗಿರಿಸಿಕೊಳ್ಳಲು ಭಾರತ ತಂಡವು ಇನ್ನುಳಿದ ಪಂದ್ಯಗಳಲ್ಲಿ ಕನಿಷ್ಠ ಎರಡರಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆ ಎದುರಾಗಿದೆ.






