Asian Games 2026 | ಈಜು ಸ್ಪರ್ಧೆಯ 100 ಮೀಟರ್ ಬ್ಯಾಕ್ ಸ್ಟ್ರೋಕ್ನಲ್ಲಿ ಭಾರತದ ರಿಷಭ್ ದಾಸ್ ಫೈನಲ್ ಗೆ
ಟೆಕ್ ಬಾಲ್ ನಲ್ಲಿ ಕ್ವಿಮ್ಸಿ ಡಿಸೋಜಾ ಕೈತಪ್ಪಿದ ಎರಡು ಪದಕಗಳು

Photo: x.com/dilseanilbansal
ನಗೋಯಾ/ಜಪಾನ್: ಏಷ್ಯನ್ ಗೇಮ್ಸ್ 2026ರ ಈಜು ಸ್ಪರ್ಧೆಯ ಪುರುಷರ 100 ಮೀಟರ್ ಬ್ಯಾಕ್ಸ್ಟ್ರೋಕ್ನ ಹೀಟ್ಸ್ನಲ್ಲಿ ಭಾರತದ ರಿಷಭ್ ದಾಸ್ ಪ್ರಭಾವಿ ಪ್ರದರ್ಶನ ನೀಡಿ ಫೈನಲ್ ಪ್ರವೇಶಿಸಿದ್ದಾರೆ.
ಅವರು 54.85 ಸೆಕೆಂಡುಗಳಲ್ಲಿ ಗುರಿ ತಲುಪಿ, ಒಟ್ಟಾರೆ ಸ್ಪರ್ಧೆಯಲ್ಲಿ ಐದನೇ ಅತ್ಯಂತ ವೇಗದ ಸಮಯ ದಾಖಲಿಸಿದರು. ಇದರೊಂದಿಗೆ ಈ ವಿಭಾಗದಲ್ಲಿ ತಮ್ಮ ವೈಯಕ್ತಿಕ ಶ್ರೇಷ್ಠ ಸಮಯವನ್ನೂ ಅವರು ಉತ್ತಮಪಡಿಸಿಕೊಂಡಿದ್ದಾರೆ.
ಈ ವರ್ಷದ ರಾಷ್ಟ್ರೀಯ ಚಾಂಪಿಯನ್ಶಿಪ್ನಲ್ಲಿ ದಾಖಲಿಸಿದ್ದ 55.44 ಸೆಕೆಂಡುಗಳ ತಮ್ಮ ಹಿಂದಿನ ವೈಯಕ್ತಿಕ ಶ್ರೇಷ್ಠ ಸಾಧನೆಯನ್ನು ದಾಸ್ ಇದೀಗ ಉತ್ತಮಪಡಿಸಿದ್ದಾರೆ.
ಟೆಕ್ಬಾಲ್ ನಲ್ಲಿ ಕೈತಪ್ಪಿದ ಎರಡು ಪದಕಗಳು
ಏಷ್ಯನ್ ಗೇಮ್ಸ್ನ ಟೆಕ್ಬಾಲ್ ಸ್ಪರ್ಧೆಯಲ್ಲಿ ಭಾರತಕ್ಕೆ ಸತತ ಎರಡು ಪದಕಗಳು ಸ್ವಲ್ಪದರಲ್ಲೇ ಕೈತಪ್ಪಿದವು. ಮಹಿಳೆಯರ ಸಿಂಗಲ್ಸ್ ಮತ್ತು ಮಿಕ್ಸೆಡ್ ಡಬಲ್ಸ್ ಎರಡರಲ್ಲೂ ಕೈಗೆಟುಕುವ ದೂರದಲ್ಲಿದ್ದ ಕಂಚಿನ ಪದಕಗಳು ಜಾರಿದವು.
ಕ್ವಿಮ್ಸಿ ಡಿಸೋಜಾ ಎರಡೂ ವಿಭಾಗಗಳಲ್ಲಿ ಸ್ಪರ್ಧಿಸಿದ್ದರೂ, ಎರಡೂ ಪಂದ್ಯಗಳಲ್ಲಿ ಸೋಲುವ ಮೂಲಕ ನಿರಾಸೆ ಅನುಭವಿಸಿದರು. ಆದರೆ, ಮಿಕ್ಸೆಡ್ ಡಬಲ್ಸ್ ಕಂಚಿನ ಪದಕದ ಹಣಾಹಣಿಯಲ್ಲಿ ಗಾಯದ ನಡುವೆಯೂ 24 ವರ್ಷದ ಕ್ವಿಮ್ಸಿ ತೋರಿದ ಹೋರಾಟದ ಪ್ರದರ್ಶನವು ನಗೋಯಾದಲ್ಲಿ ಈ ಕ್ರೀಡೆಗೆ ಸ್ಮರಣೀಯ ಪರಿಚಯವನ್ನು ಒದಗಿಸಿತು.
ಮಹಿಳೆಯರ ಸಿಂಗಲ್ಸ್ ಕಂಚಿನ ಪದಕದ ಪಂದ್ಯದಲ್ಲಿ ವಿಶ್ವದ 7ನೇ ಶ್ರೇಯಾಂಕದ ಆಟಗಾರ್ತಿ, ಜಪಾನ್ನ ಯುಯಿನಾ ಸಕಾಮೊಟೊ ವಿರುದ್ಧ ಕಣಕ್ಕಿಳಿದ ಕ್ವಿಮ್ಸಿ, ಆರಂಭಿಕ ಹಿನ್ನಡೆಯಿಂದ ಚೇತರಿಸಿಕೊಂಡು ಆತಿಥೇಯರ ನೆಚ್ಚಿನ ಆಟಗಾರ್ತಿಗೆ ತೀವ್ರ ಪೈಪೋಟಿ ನೀಡಿದರು. ಆದರೆ, ಗೆಲುವು ಒಲಿಸಿಕೊಳ್ಳಲು ಸಾಧ್ಯವಾಗಲಿಲ್ಲ.
ಅಂತಿಮ ಅಂಕದ ಬಳಿಕ ಅವರು ಟೇಬಲ್ ಬಳಿ ಕುಸಿದುಬಿದ್ದರು. ಕಣ್ಣೀರಂಚಿನಲ್ಲಿ ನಡುಗುತ್ತಿದ್ದ ದೃಶ್ಯವೂ ಸ್ಪಷ್ಟವಾಗಿ ಗೋಚರಿಸಿತು.
ಸೋಲಿನ ಬಳಿಕ ಮಿಕ್ಸೆಡ್ ಡಬಲ್ಸ್ ಪಂದ್ಯಕ್ಕೆ ಮುಹಮ್ಮದ್ ಅನಸ್ ಬೇಗ್ ಅವರೊಂದಿಗೆ ಅಂಕಣಕ್ಕೆ ಮರಳಿದ ಅವರು, ಬೆನ್ನುನೋವು ತೀವ್ರಗೊಂಡ ಕಾರಣ ವಿರಾಮದ ವೇಳೆ ಫಿಸಿಯೋಥೆರಪಿಸ್ಟ್ನಿಂದ ಚಿಕಿತ್ಸೆ ಪಡೆಯಬೇಕಾಯಿತು.
ಕ್ವಿಮ್ಸಿಗೆ ಸ್ಮ್ಯಾಶ್ ಹೊಡೆಯಲು ತಮ್ಮ ಬಲಗಾಲನ್ನು ಸರಿಯಾಗಿ ಎತ್ತಲು ಸಾಧ್ಯವಾಗುತ್ತಿರಲಿಲ್ಲ. ಮತ್ತೊಂದೆಡೆ, ಬೇಗ್ ಕೂಡ ಒತ್ತಡಕ್ಕೆ ಸಿಲುಕಿ ನಿರ್ಣಾಯಕ ಕ್ಷಣಗಳಲ್ಲಿ ಚೆಂಡಿನ ಮೇಲಿನ ನಿಯಂತ್ರಣ ಕಳೆದುಕೊಳ್ಳುತ್ತಿದ್ದರು.
ಇದರ ಸಂಪೂರ್ಣ ಲಾಭ ಪಡೆದ ವಿಯೆಟ್ನಾಂ ಜೋಡಿ ಮುನ್ನಡೆಯನ್ನು ಹೆಚ್ಚಿಸಿಕೊಂಡು ಪಂದ್ಯವನ್ನು ಗೆದ್ದುಕೊಂಡಿತು.






