Asian Games | 10 ಮೀ. ಏರ್ ಪಿಸ್ತೂಲ್ ಫೈನಲ್ನಲ್ಲಿ 5ನೇ ಸ್ಥಾನ : ಪದಕ ವಂಚಿತರಾದ ಸ್ಟಾರ್ ಶೂಟರ್ ಮನು ಭಾಕರ್

ಮನು ಭಾಕರ್ | Photo Credit : PTI
ನಗೋಯ: ಒಲಿಂಪಿಯನ್ ಮನು ಭಾಕರ್ ಏಶ್ಯನ್ ಗೇಮ್ಸ್ನಲ್ಲಿ ಬುಧವಾರ ನಡೆದ ಮಹಿಳೆಯರ 10 ಮೀ. ಏರ್ ಪಿಸ್ತೂಲ್ ಫೈನಲ್ನಲ್ಲಿ ಐದನೇ ಸ್ಥಾನ ಪಡೆದು ಪದಕ ವಂಚಿತರಾದರು.
ಅರ್ಹತಾ ಸುತ್ತಿನಲ್ಲಿ ಮೂರನೇ ಸ್ಥಾನ ಪಡೆದಿದ್ದ ಭಾಕರ್ ಎಂಟು ಶೂಟರ್ಗಳಿದ್ದ ಫೈನಲ್ನಲ್ಲಿ ನಾಲ್ಕನೇ ಸುತ್ತಿನ ನಂತರ ನಿರ್ಗಮಿಸಿದರು. ನಾಲ್ವರು ಶೂಟರ್ಗಳು ಪದಕದ ಸ್ಪರ್ಧೆಯಲ್ಲಿ ಉಳಿದುಕೊಂಡರು.
ಮೊದಲೆರಡು ಸರಣಿಗಳಲ್ಲಿ 100.3 ಅಂಕ ಗಳಿಸಿದ ಭಾಕರ್ ಉತ್ತಮ ಆರಂಭ ಪಡೆದರು. ಎಲಿಮಿನೇಶನ್ ಸುತ್ತಿನ ಮೊದಲ ಹಂತದ ನಂತರ 120.4 ಅಂಕ ಗಳಿಸಿದರು. ಮುಂದಿನ ಸುತ್ತುಗಳಲ್ಲಿ ಪದಕದ ಸ್ಪರ್ಧೆಯಲ್ಲಿ ಉಳಿದರು. 140.4 ಹಾಗೂ 160.7 ಅಂಕ ಗಳಿಸಿದ ಭಾಕರ್ ಅಂತಿಮವಾಗಿ 181.1 ಅಂಕ ಗಳಿಸಿದರು. ಇದು ಪದಕದ ಸ್ಪರ್ಧೆಯಲ್ಲಿ ಉಳಿಯಲು ಸಾಕಾಗಲಿಲ್ಲ.
ಚೀನಾದ ಚೂ(246.3)ಅಮೋಘ ಪ್ರದರ್ಶನದೊಂದಿಗೆ ಚಿನ್ನ ಜಯಿಸಿದರೆ, ಚೀನಾದ ಇನ್ನೋರ್ವ ಶೂಟರ್ ಶೆನ್ ಯಿಯಾವೊ(241.3)ಬೆಳ್ಳಿ ಪದಕ ಜಯಿಸಿದರು.
ಭಾರತ ಉಳಿದ ಶೂಟರ್ಗಳಾದ ಇಶಾ ಸಿಂಗ್ ಹಾಗೂ ಸುರುಚಿ ಇಂದರ್ ಸಿಂಗ್ ಫೈನಲ್ಗೆ ತಲುಪುವಲ್ಲಿ ವಿಫಲರಾದರು. ಇಶಾ 572 ಅಂಕ ಗಳಿಸಿ 12ನೇ ಸ್ಥಾನವನ್ನು, ಸುರುಚಿ (568)26ನೇ ಸ್ಥಾನ ಪಡೆದರು.
ಇದಕ್ಕೂ ಮೊದಲು ಭಾರತವು ಟೀಮ್ ಸ್ಪರ್ಧೆಯಲ್ಲಿ ನಾಲ್ಕನೇ ಸ್ಥಾನ ಪಡೆದು ಪದಕದಿಂದ ವಂಚಿತವಾಯಿತು. ಭಾರತದ ಭಾಕರ್, ಇಶಾ ಸಿಂಗ್ ಹಾಗೂ ಸುರುಚಿ 1719 ಅಂಕ ಗಳಿಸಿದರು. ವಿಯೆಟ್ನಾಂ ಕಂಚು ಜಯಿಸಿತು, ಚೀನಾ(1735) ಹಾಗೂ ದಕ್ಷಿಣ ಕೊರಿಯಾ(1730)ಕ್ರಮವಾಗಿ ಚಿನ್ನ ಹಾಗೂ ಬೆಳ್ಳಿ ಪದಕ ಜಯಿಸಿದವು.
25 ಮೀ. ಪಿಸ್ತೂಲ್ ಸ್ಪರ್ಧೆಯಲ್ಲಿ ಭಾಗವಹಿಸಲಿರುವ ಭಾಕರ್ಗೆ ಪದಕ ಗೆಲ್ಲುವ ಮತ್ತೊಂದು ಅವಕಾಶವಿದೆ. ಭಾಕರ್ ಅವರು ಇಶಾ ಹಾಗೂ 2018ರ ಏಶ್ಯನ್ ಗೇಮ್ಸ್ನಲ್ಲಿ ಚಿನ್ನದ ಪದಕ ವಿಜೇತೆ ರಾಹಿ ಸರ್ನೊಬಾತ್ ಅವರೊಂದಿಗೆ ಸ್ಪರ್ಧಿಸಲಿದ್ದಾರೆ.






