ಏಶ್ಯನ್ ಗೇಮ್ಸ್: ದೀಪಕ್, ನಿಶಾಂತ್, ಪರ್ವೀನ್ಗೆ ಸ್ಥಾನ

ಹೊಸದಿಲ್ಲಿ: ವಿಶ್ವ ಚಾಂಪಿಯನ್ಶಿಪ್ನಲ್ಲಿ ಕಂಚಿನ ಪದಕ ವಿಜೇತ ಬಾಕ್ಸರ್ಗಳಾದ ದೀಪಕ್ ಭೋರಿಯ(51ಕೆಜಿ) ಹಾಗೂ ನಿಶಾಂತ್ ದೇವ್(71ಕೆಜಿ)ಈ ವರ್ಷ ಚೀನಾದಲ್ಲಿ ನಡೆಯಲಿರುವ ಏಶ್ಯನ್ ಗೇಮ್ಸ್ಗೆ ಭಾರತೀಯ ಪುರುಷರ ಬಾಕ್ಸಿಂಗ್ ತಂಡಕ್ಕೆ ಶನಿವಾರ ಆಯ್ಕೆಯಾಗಿದ್ದಾರೆ.
ಸೆಪ್ಟಂಬರ್ 23ರಿಂದ ಅಕ್ಟೋಬರ್ 8ರ ತನಕ ನಡೆಯಲಿರುವ ಗೇಮ್ಸ್ ನಲ್ಲಿ ಸ್ಟಾರ್ ಬಾಕ್ಸರ್ಗಳಾದ ನಿಖಾತ್ ಝರೀನಾ(51ಕೆಜಿ)ಹಾಗೂ ಲವ್ಲೀನಾ ಬೊರ್ಗೊಹೈನ್ (75ಕೆಜಿ)ಅವರನ್ನೊಳಗೊಂಡ ಮಹಿಳಾ ತಂಡದೊಂದಿಗೆ ಪರ್ವೀನ್ ಹೂಡಾ(57ಕೆಜಿ), ಜೈಸ್ಮಿನ್ ಲ್ಯಾಂಬೊರಿಯ(60ಕೆಜಿ), ಅರುಂಧತಿ ಚೌಧರಿ ಹಾಗೂ ಪ್ರೀತಿ ಪವಾರ್ ಸೇರ್ಪಡೆಯಾಗಿದ್ದಾರೆ. ಮಾರ್ಚ್ನಲ್ಲಿ ವಿಶ್ವ ಚಾಂಪಿಯನ್ಶಿಪ್ನಲ್ಲಿ ಫೈನಲ್ಗೆ ತಲುಪಿದ ಹಿನ್ನೆಲೆಯಲ್ಲಿ ಎರಡು ಬಾರಿಯ ವಿಶ್ವ ಚಾಂಪಿಯನ್ ನಿಖಾತ್ ಹಾಗೂ ಟೋಕಿಯೊ ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕ ವಿಜೇತೆ ಲವ್ಲೀನಾ ಏಶ್ಯನ್ ಗೇಮ್ಸ್ಗೆ ನೇರ ಅರ್ಹತೆ ಪಡೆದಿದ್ದಾರೆ.
ಹಾಲಿ ಏಶ್ಯನ್ ಗೇಮ್ಸ್ ಚಾಂಪಿಯನ್ ಹಾಗೂ 2019ರ ವಿಶ್ವ ಚಾಂಪಿಯನ್ಶಿಪ್ನಲ್ಲಿ ಬೆಳ್ಳಿ ಪದಕ ವಿಜೇತ ಅಮಿತ್ ಪಾಂಘಾಲ್ ತಂಡದಲ್ಲಿ ಸ್ಥಾನ ಪಡೆದಿಲ್ಲ. ಭಾರತದ ಬಾಕ್ಸಿಂಗ್ ಒಕ್ಕೂಟದ ನೂತನ ಆಯ್ಕೆ ನೀತಿಯ ಪ್ರಕಾರ ಅಮಿತ್ ಸ್ಥಾನವನ್ನು ದೀಪಕ್ ತುಂಬಿದ್ದಾರೆ. ದೀಪಕ್ ಹಾಗೂ ನಿಶಾಂತ್ ಮೇನಲ್ಲಿ ನಡೆದಿದ್ದ ವಿಶ್ವ ಚಾಂಪಿಯನ್ಶಿಪ್ನಲ್ಲಿ ಗಮನ ಸೆಳೆದಿದ್ದರು.
48 ಕೆಜಿ ಮಹಿಳೆಯರ ವಿಶ್ವ ಚಾಂಪಿಯನ್ ನೀತು ಘಂಘಾಸ್ ಏಶ್ಯನ್ ಗೇಮ್ಸ್ನಲ್ಲಿ ಭಾಗವಹಿಸುತ್ತಿಲ್ಲ. ನೀತು ಬದಲಿಗೆ ಪ್ರೀತಿ ಪವಾರ್ 51ಕೆಜಿ ವಿಭಾಗದಲ್ಲಿ ಸ್ಪರ್ಧಿಸಲಿದ್ದಾರೆ.