ಏಷ್ಯನ್ ಕ್ರೀಡಾಕೂಟದ ಚಿನ್ನದ ಪದಕ ವಿಜೇತ, ಶೂಟಿಂಗ್ ಕೋಚ್ ಜಸ್ಪಾಲ್ ರಾಣಾ ನಿಧನ

ಜಸ್ಪಾಲ್ ರಾಣಾ | Photo Credit : X
ಹೊಸದಿಲ್ಲಿ: ಭಾರತದ ಖ್ಯಾತ ಶೂಟಿಂಗ್ ಕೋಚ್ ಹಾಗೂ ಏಷ್ಯನ್ ಕ್ರೀಡಾಕೂಟದ ಚಿನ್ನದ ಪದಕ ವಿಜೇತ ಜಸ್ಪಾಲ್ ರಾಣಾ (49) ಗುರುವಾರ ನಿಧನರಾದರು.
ರಾಷ್ಟ್ರೀಯ ರೈಫಲ್ ಅಸೋಸಿಯೇಷನ್ ಆಫ್ ಇಂಡಿಯಾ (NRAI) ಅಧ್ಯಕ್ಷ ಕಲಿಕೇಶ್ ನಾರಾಯಣ್ ಸಿಂಗ್ ಡಿಯೋ ಈ ಮಾಹಿತಿಯನ್ನು ದೃಢಪಡಿಸಿದ್ದಾರೆ. ರಾಣಾ ಅವರು ಗುರುವಾರ ರಾತ್ರಿ ದಿಲ್ಲಿಯ ಆಸ್ಪತ್ರೆಯೊಂದರಲ್ಲಿ ನಿಧನರಾದರು ಎಂದು ಅವರು ತಿಳಿಸಿದ್ದಾರೆ.
ಭಾರತೀಯ ಪಿಸ್ತೂಲ್ ಶೂಟರ್ ಗಳ ಉನ್ನತ ಕೋಚ್ ಆಗಿದ್ದ ರಾಣಾ, ಇತ್ತೀಚೆಗೆ ಜರ್ಮನಿಯ ಮ್ಯೂನಿಕ್ನಲ್ಲಿ ನಡೆದ ISSF ವಿಶ್ವಕಪ್ ಸ್ಪರ್ಧೆಯಿಂದ ಹಿಂದಿರುಗುವ ವೇಳೆ ಅಸ್ವಸ್ಥಗೊಂಡಿದ್ದರು. ಆ ಸ್ಪರ್ಧೆಯಲ್ಲಿ ಭಾರತ ಎರಡು ಚಿನ್ನ ಮತ್ತು ಎರಡು ಬೆಳ್ಳಿ ಪದಕ ಸೇರಿ ನಾಲ್ಕು ಪದಕಗಳನ್ನು ಗೆದ್ದಿತ್ತು.
NRAI ಮೂಲಗಳ ಪ್ರಕಾರ, ಹೊಸದಿಲ್ಲಿಗೆ ಹಿಂದಿರುಗುವ ವಿಮಾನ ಪ್ರಯಾಣದ ವೇಳೆ ರಾಣಾ ಅಸ್ವಸ್ಥಗೊಂಡಿದ್ದರು. ಭಾರತಕ್ಕೆ ಬಂದ ಬಳಿಕ ಅವರನ್ನು ನೇರವಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯಕೀಯ ಪರೀಕ್ಷೆಯಲ್ಲಿ ಸ್ಟೆಂಟ್ ಅಳವಡಿಸುವ ಅಗತ್ಯವಿರುವುದು ತಿಳಿದುಬಂದಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟರು.
ರಾಣಾ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದು, ಅವರ ಅಗಲಿಕೆ ಭಾರತೀಯ ಕ್ರೀಡಾ ಕ್ಷೇತ್ರಕ್ಕೆ ಆಳವಾದ ನಷ್ಟವಾಗಿದೆ ಎಂದು ಹೇಳಿದ್ದಾರೆ.
Deeply saddened by the passing of Shri Jaspal Rana Ji. His passing is a profound loss to the world of Indian sports.
— Narendra Modi (@narendramodi) June 12, 2026
He brought immense glory to the nation through his extraordinary achievements in shooting. Equally remarkable was his contribution as a mentor, shaping and…
ಏಷ್ಯನ್ ಕ್ರೀಡಾಕೂಟದ ಚಿನ್ನದ ಪದಕ ಸೇರಿದಂತೆ ಹಲವು ಅಂತರರಾಷ್ಟ್ರೀಯ ಸಾಧನೆಗಳನ್ನು ದಾಖಲಿಸಿದ್ದ ರಾಣಾ, ಸ್ಪರ್ಧಾತ್ಮಕ ಕ್ರೀಡಾಜೀವನದ ಬಳಿಕ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. 2012ರಲ್ಲಿ ಜೂನಿಯರ್ ರಾಷ್ಟ್ರೀಯ ಪಿಸ್ತೂಲ್ ಕೋಚ್ ಆಗಿ ನೇಮಕಗೊಂಡ ಅವರು, ಸೌರಭ್ ಚೌಧರಿ, ಅನೀಶ್ ಭನ್ವಾಲಾ ಮತ್ತು ಚಿಂಕಿ ಯಾದವ್ ಸೇರಿದಂತೆ ಹಲವು ಶೂಟರ್ ಗಳನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
2024ರ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಎರಡು ಕಂಚಿನ ಪದಕಗಳನ್ನು ಗೆದ್ದ ಮನು ಭಾಕರ್ ಅವರ ಬೆಳವಣಿಗೆಯಲ್ಲೂ ರಾಣಾ ಅವರ ಕೊಡುಗೆ ಮಹತ್ವದ್ದಾಗಿತ್ತು. ಒಲಿಂಪಿಕ್ಸ್ ನಂತಹ ಪ್ರಮುಖ ಸ್ಪರ್ಧೆಗಳಿಗೆ ಕ್ರೀಡಾಪಟುಗಳನ್ನು ಸಜ್ಜುಗೊಳಿಸುವ ಅವರ ತರಬೇತಿ ವಿಧಾನವು ಮೆಚ್ಚುಗೆಗೆ ಪಾತ್ರವಾಗಿತ್ತು.
2025ರ ಫೆಬ್ರುವರಿಯಲ್ಲಿ ಎನ್ಆರ್ಎಐ, 25 ಮೀಟರ್ ಪಿಸ್ತೂಲ್ ವಿಭಾಗದ ಮುಖ್ಯ ತರಬೇತುದಾರರಾಗಿ ರಾಣಾ ಅವರನ್ನು ನೇಮಕ ಮಾಡಿತ್ತು. ಭಾರತೀಯ ಶೂಟಿಂಗ್ ಗೆ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಕೇಂದ್ರ ಸರ್ಕಾರವು 2020ರಲ್ಲಿ ಅವರಿಗೆ ದ್ರೋಣಾಚಾರ್ಯ ಪ್ರಶಸ್ತಿ ನೀಡಿ ಗೌರವಿಸಿತ್ತು.






