Asian Games | ಹಾಕಿ: ಥಾಯ್ಲೆಂಡ್ ವಿರುದ್ಧ ಭಾರತಕ್ಕೆ 20-1 ಜಯ

Photo Credit : PTI
ನಗೋಯ: ಏಶ್ಯನ್ ಗೇಮ್ಸ್ನಲ್ಲಿ ಮಹಿಳೆಯರ ಹಾಕಿಯಲ್ಲಿ ಭಾರತವು ತನ್ನ ಶ್ರೇಷ್ಠ ಪ್ರದರ್ಶನ ಮುಂದುವರಿಸಿದ್ದು ‘ಬಿ’ ಗುಂಪಿನ ಪಂದ್ಯದಲ್ಲಿ ಥಾಯ್ಲೆಂಡ್ ತಂಡವನ್ನು 20-1 ಅಂತರದಿಂದ ಮಣಿಸಿದೆ. ದೀಪಿಕಾ 9 ಗೋಲುಗಳನ್ನು ಗಳಿಸಿ ಮತ್ತೊಮ್ಮೆ ಮಿಂಚಿದ್ದಾರೆ.
ಬುಧವಾರ ನಡೆದ ಪಂದ್ಯದಲ್ಲಿ ಫಾರ್ವರ್ಡ್ ಹಾಗೂ ಡ್ರ್ಯಾಗ್-ಫ್ಲಿಕ್ ಸ್ಪೆಷಲಿಸ್ಟ್ ದೀಪಿಕಾ ಎಲ್ಲ 9 ಗೋಲುಗಳನ್ನು ಪೆನಾಲ್ಟಿ ಕಾರ್ನರ್ನ ಮೂಲಕ ಗಳಿಸಿದರು. ಈ ಮೂಲಕ ಸ್ಪರ್ಧಾವಳಿಯಲ್ಲಿ ಭಾರತವು ಸತತ ಮೂರನೇ ಗೆಲುವು ದಾಖಲಿಸುವಲ್ಲಿ ನೆರವಾದರು.
ಈ ಗೆಲುವಿನ ಮೂಲಕ ಭಾರತ ತಂಡ ‘ಬಿ; ಗುಂಪಿನಲ್ಲಿ ಅಗ್ರ ಸ್ಥಾನದಲ್ಲಿದೆ.
ದೀಪಿಕಾ ಪಂದ್ಯದ ಸ್ಟಾರ್ ಆಗಿ ಹೊರಹೊಮ್ಮಿದರು. 9 ಗೋಲುಗಳನ್ನು ಗಳಿಸಿ ವೈಯಕ್ತಿಕ ಪ್ರದರ್ಶನದಿಂದ ಗಮನ ಸೆಳೆದರು. ನವನೀತ್ ಕೌರ್ ನಾಲ್ಕು ಗೋಲುಗಳು ಹಾಗೂ ಋತುಜಾ ಪಿಸಾಲ್ ಹ್ಯಾಟ್ರಿಕ್ ಗೋಲು ಗಳಿಸಿ ಮಿಂಚಿದರು.
ನೇಹಾ, ಲಾಲ್ರೆಂಸಿಯಾಮಿ, ಸಾಕ್ಷಿ ರಾಣಾ ಹಾಗೂ ನಾಯಕಿ ಸಲಿಮಾ ಟೇಟೆ ತಲಾ ಒಂದು ಗೋಲು ಗಳಿಸಿ ಪಂದ್ಯದುದ್ದಕ್ಕೂ ಭಾರತವು ಒತ್ತಡ ಹೇರಲು ನೆರವಾದರು. ನಾಲ್ಕನೇ ಕ್ವಾರ್ಟರ್ನಲ್ಲಿ ಗೋಲು ಗಳಿಸಿದ ಥಾಯ್ಲೆಂಡ್ ತಂಡವು ಕ್ಲೀನ್ಶೀಟ್ ಮುಖಭಂಗದಿಂದ ಪಾರಾಯಿತು.
ಭಾರತ ತಂಡವು ಉಜ್ಬೇಕಿಸ್ತಾನದ ವಿರುದ್ಧ 19-0 ಅಂತರದಿಂದ ಜಯ ಗಳಿಸಿ ತನ್ನ ಅಭಿಯಾನ ಆರಂಭಿಸಿತ್ತು. ಆನಂತರ ಇಂಡೋನೇಶ್ಯ ತಂಡವನ್ನು 17-1ರಿಂದ ಸೋಲಿಸಿತು. ದೀಪಿಕಾ ಇಂಡೋನೇಶ್ಯ ವಿರುದ್ಧವೂ ಹ್ಯಾಟ್ರಿಕ್ ಗಳಿಸಿದ್ದು, ಋತುಜಾ ಹಾಗೂ ನವನೀತ್ ಕೂಡ ಆ ಪಂದ್ಯದಲ್ಲಿ ತಲಾ ಮೂರು ಗೋಲುಗಳನ್ನು ಗಳಿಸಿದ್ದರು.
ಭಾರತ ತಂಡವು ಮುಂದಿನ ಸುತ್ತಿನಲ್ಲಿ ಆತಿಥೇಯ ಜಪಾನ್ ತಂಡವನ್ನು ಎದುರಿಸಲಿದ್ದು, ನಾಕೌಟ್ ಹಂತದಲ್ಲಿ ತನ್ನ ಸ್ಥಾನ ಭದ್ರಪಡಿಸಿಕೊಳ್ಳಲು ಎದುರು ನೋಡುತ್ತಿದೆ. 2023ರ ಏಶ್ಯನ್ ಗೇಮ್ಸ್ನಲ್ಲಿ ಕಂಚಿನ ಪದಕ ಜಯಿಸಿದ್ದ ಭಾರತವು ಈ ಬಾರಿ ತನ್ನ ಪ್ರದರ್ಶನ ಉತ್ತಮಪಡಿಸಿಕೊಳ್ಳುವ ಆಶಯದಲ್ಲಿದೆ. 1982ರ ನಂತರ ಮೊದಲ ಬಾರಿ ಏಶ್ಯನ್ ಗೇಮ್ಸ್ನಲ್ಲಿ ಮಹಿಳೆಯರ ಹಾಕಿಯಲ್ಲಿ ಚಿನ್ನ ಗೆಲ್ಲುವ ವಿಶ್ವಾಸದಲ್ಲಿದೆ. ಆಗ ಸ್ವದೇಶದಲ್ಲಿ ಭಾರತವು ತನ್ನ ಮೊದಲ ಹಾಕಿ ಪ್ರಶಸ್ತಿ ಜಯಿಸಿತ್ತು.
ಸತತ ಮೂರು ಪಂದ್ಯಗಳಲ್ಲಿ ಜಯ ಗಳಿಸಿ, ತನ್ನ ಆರಂಭಿಕ ಮೂರು ಪಂದ್ಯಗಳಲ್ಲಿ 56 ಗೋಲುಗಳನ್ನು ಗಳಿಸಿರುವ ಭಾರತವು ‘ಬಿ’ಗುಂಪಿನಲ್ಲಿ ಪ್ರಬಲ ಆರಂಭ ಪಡೆದಿದೆ.






