Asian Games | ಹೈಜಂಪ್, ಲಾಂಗ್ ಜಂಪ್ನಲ್ಲಿ ಭಾರತಕ್ಕೆ ಬೆಳ್ಳಿ
ಮಹಿಳೆಯರ 200 ಮೀ. ಓಟ: ಹರಿತಾಗೆ ಕಂಚು

ಸರ್ವೇಶ್ ಕುಶಾರೆ - Photo: X/@KirenRijiju
ನಗೋಯ: ಜಪಾನ್ನ ನಗೋಯದಲ್ಲಿ ನಡೆಯುತ್ತಿರುವ ಏಶ್ಯನ್ ಗೇಮ್ಸ್ನಲ್ಲಿ, ರವಿವಾರ ಟ್ರ್ಯಾಕ್ ಮತ್ತು ಪೀಲ್ಡ್ ಕ್ಷೇತ್ರದಲ್ಲಿ ಭಾರತ ಉತ್ತಮ ನಿರ್ವಹಣೆ ನೀಡಿದೆ. ಹೈಜಂಪ್ನಲ್ಲಿ ಸರ್ವೇಶ್ ಕುಶಾರೆ ಐತಿಹಾಸಿಕ ಬೆಳ್ಳಿ ಗೆದ್ದರೆ, ಲಾಂಗ್ಜಂಪ್ನಲ್ಲಿ ಆನ್ಸಿ ಸೋಜನ್ ಕೂಡ ಬೆಳ್ಳಿ ಪಡೆದರು. ಅದೇ ವೇಳೆ, ಲಾಂಗ್ಜಂಪ್ನಲ್ಲಿ, ಶೈಲಿ ಸಿಂಗ್ ಕೂದಲೆಳೆಯ ಅಂತರದಲ್ಲಿ ಕಂಚಿನ ಪದಕದಿಂದ ವಂಚಿತರಾದರು.
ಸರ್ವೇಶ್ ಕುಶಾರೆಗೆ ಐತಿಹಾಸಿಕ ಬೆಳ್ಳಿ: 56 ವರ್ಷಗಳ ಬಳಿಕ ಭಾರತಕ್ಕೆ ಮೊದಲ ಪದಕ
ಜಪಾನ್ನ ನಗೋಯದಲ್ಲಿ ನಡೆಯುತ್ತಿರುವ ಏಶ್ಯನ್ ಗೇಮ್ಸ್ನಲ್ಲಿ, ಪುರುಷರ ಹೈಜಂಪ್ ಸ್ಪರ್ಧೆಯಲ್ಲಿ ರವಿವಾರ ಭಾರತದ ಸರ್ವೇಶ್ ಕುಶಾರೆ ಐತಿಹಾಸಿಕ ಬೆಳ್ಳಿ ಪದಕ ಗೆದ್ದಿದ್ದಾರೆ. ಇದು 56 ವರ್ಷಗಳಲ್ಲಿ, ಹೈಜಂಪ್ನಲ್ಲಿ ಭಾರತ ಗೆದ್ದ ಮೊದಲ ಪದಕವಾಗಿದೆ.
ಮಹಾರಾಷ್ಟ್ರದ 31 ವರ್ಷದ ಸರ್ವೇಶ್, ಏಶ್ಯನ್ ಗೇಮ್ಸ್ನಲ್ಲಿ ಹೈಜಂಪ್ನಲ್ಲಿ ಪದಕ ಗೆದ್ದ ಮೂರನೇ ಭಾರತೀಯ ಪುರುಷ ಅತ್ಲೀಟ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಇದಕ್ಕೂ ಮೊದಲು, ಅಜಿತ್ ಸಿಂಗ್ (1954ರಲ್ಲಿ ಚಿನ್ನ) ಮತ್ತು ಭೀಮ್ ಸಿಂಗ್ (1966ರಲ್ಲಿ ಚಿನ್ನ ಮತ್ತು 1970ರಲ್ಲಿ ಕಂಚು) ಈ ವಿಭಾಗದಲ್ಲಿ ಪದಕಗಳನ್ನು ಗೆದ್ದಿದ್ದರು.
ಸರ್ವೇಶ್ ಮತ್ತು ಚೈನೀಸ್ ತೈಪೆಯ ಫೂ ಚಾವೊ-ಹ್ಸುವಾನ್ ಇಬ್ಬರೂ 2.25 ಮೀಟರ್ ಎತ್ತರವನ್ನು ಯಶಸ್ವಿಯಾಗಿ ಜಿಗಿದು ಸಮಬಲ ಸಾಧಿಸಿದರು. ಆದರೆ, ಕೌಂಟ್ಬ್ಯಾಕ್ನಲ್ಲಿ ಸರ್ವೇಶ್ ಬೆಳ್ಳಿ ಪದಕಕ್ಕೆ ತೃಪ್ತಿಪಡಬೇಕಾಯಿತು.
ದಕ್ಷಿಣ ಕೊರಿಯದ ಸಾಂಘ್ಯೋಕ್ ವೂ 2.22 ಮೀ ಎತ್ತರ ಜಿಗಿದು ಕಂಚಿನ ಪದಕ ಪಡೆದರು.
ಲಾಂಗ್ ಜಂಪ್: ಆನ್ಸಿ ಸೋಜನ್ಗೆ ಬೆಳ್ಳಿ
ಏಶ್ಯನ್ ಗೇಮ್ಸ್ನಲ್ಲಿ, ಮಹಿಳೆಯರ ಲಾಂಗ್ ಜಂಪ್ನಲ್ಲಿ ರವಿವಾರ ಭಾರತದ ಆನ್ಸಿ ಸೋಜನ್ ಸತತ ಎರಡನೇ ಬೆಳ್ಳಿ ಪದಕ ಗೆದ್ದರೆ, ಶೈಲಿ ಸಿಂಗ್ ಕೂದಲೆಳೆಯ ಅಂತರದಲ್ಲಿ ಕಂಚಿನ ಪದಕದಿಂದ ವಂಚಿತರಾದರು.
ಅಂತಿಮ ಸುತ್ತಿನಲ್ಲಿ, ಹಾಂಗ್ಝೂ 2023ರ ಏಶ್ಯನ್ ಗೇಮ್ಸ್ನ ಬೆಳ್ಳಿ ಪದಕ ವಿಜೇತೆ ಆನ್ಸಿ (6.53 ಮೀ) ಅಗ್ರಸ್ಥಾನದಲ್ಲಿದ್ದರೆ, ಶೈಲಿ (6.42 ಮೀ) ಮೂರನೇ ಸ್ಥಾನದಲ್ಲಿದ್ದರು.
ಆದರೆ, ಚೀನಾದ ಟಾನ್ ಮೆಂಗ್ಯಿ ತನ್ನ ಅಂತಿಮ ಪ್ರಯತ್ನದಲ್ಲಿ 6.46 ಮೀಟರ್ ಜಿಗಿದು ಶೈಲಿ ಅವರನ್ನು ನಾಲ್ಕನೇ ಸ್ಥಾನಕ್ಕೆ ತಳ್ಳಿದರು.
ಬಳಿಕ, ಚೀನಾದವರೇ ಆದ ಹುವಾಂಗ್ ಯಿಂಗ್ಯಿಂಗ್ ತನ್ನ ಕೊನೆಯ ಜಿಗಿತದಲ್ಲಿ 6.55 ಮೀಟರ್ ಕ್ರಮಿಸಿ ಆನ್ಸಿ ಅವರನ್ನು ಹಿಂದಿಕ್ಕಿದರು.
ಹುವಾಂಗ್ ಅವರ ಕೊನೆಯ ಪ್ರಯತ್ನಕ್ಕೆ ಸರಿಸಮನಾದ ಜಿಗಿತ ದಾಖಲಿಸಿದ್ದರೂ ಆನ್ಸಿಗೆ ಚಿನ್ನದ ಪದಕ ಒಲಿಯುತ್ತಿತ್ತು. ಏಕೆಂದರೆ ಆನ್ಸಿ ಅವರ ಎರಡನೇ ಅತ್ಯುತ್ತಮ ಪ್ರಯತ್ನ (6.53 ಮೀ), ಹುವಾಂಗ್ರ ಎರಡನೇ ಅತ್ಯುತ್ತಮ ಪ್ರಯತ್ನ (6.49 ಮೀ)ಕ್ಕಿಂತ ಉತ್ತಮವಾಗಿತ್ತು. ಆದರೆ ಆನ್ಸಿಗೆ ತನ್ನ ಕೊನೆಯ ಪ್ರಯತ್ನದಲ್ಲಿ 6.49 ಮೀಟರ್ ಜಿಗಿಯಲಷ್ಟೇ ಸಾಧ್ಯವಾಯಿತು.
200 ಮೀಟರ್ ಓಟದಲ್ಲಿ ಕಂಚು ಗೆದ್ದ ಹರಿತಾ
ಜಪಾನ್ನ ಐಚಿ-ನಗೋಯದಲ್ಲಿ ನಡೆಯುತ್ತಿರುವ ಏಶ್ಯನ್ ಗೇಮ್ಸ್ನಲ್ಲಿ, ಮಹಿಳೆಯರ 200 ಮೀಟರ್ ಓಟದಲ್ಲಿ ರವಿವಾರ ಭಾರತದ ಹರಿತಾ ಭದ್ರಾ ಕಂಚಿನ ಪದಕ ಗೆದ್ದಿದ್ದಾರೆ.
ಮಹಾರಾಷ್ಟ್ರದ 23 ವರ್ಷದ ಓಟಗಾರ್ತಿ ಹರಿತಾ, 23.20 ಸೆಕೆಂಡುಗಳಲ್ಲಿ ಗುರಿ ತಲುಪಿ ಮೂರನೇ ಸ್ಥಾನ ಪಡೆದರು. ಅವರು ಜಪಾನ್ನ ಅಬಿಗೆಯಿರುಫುಕಾ ಇದೊ ಅವರಿಗಿಂತ ಕೇವಲ ಸೆಕೆಂಡಿನ ನೂರನೇ ಒಂದು ಭಾಗದಷ್ಟು ಮುನ್ನ ಗುರಿ ತಲುಪಿ ಪದಕವನ್ನು ಖಚಿತಪಡಿಸಿಕೊಂಡರು.
ಸಿಂಗಾಪುರದ ಶಾಂತಿ ಪೆರೇರಾ 22.78 ಸೆಕೆಂಡುಗಳಲ್ಲಿ ಗುರಿ ತಲುಪಿ ಚಿನ್ನದ ಪದಕ ಮುಡಿಗೇರಿಸಿಕೊಂಡರೆ, ಚೀನಾದ ಚೆನ್ ಯುಜಿ 22.93 ಸೆಕೆಂಡ್ಗಳಲ್ಲಿ ಸ್ಪರ್ಧೆ ಮುಗಿಸಿ ಬೆಳ್ಳಿ ಗೆದ್ದರು.
ಫೈನಲ್ ತಲುಪಿದ್ದ ಮತ್ತೊಬ್ಬ ಭಾರತೀಯ ಸ್ಪರ್ಧಿ ಉನ್ನತಿ ಅಯ್ಯಪ್ಪ ಬೊಳ್ಳಂಡ 23.46 ಸೆಕೆಂಡ್ಗಳಲ್ಲಿ ಗುರಿ ಮುಟ್ಟಿ ಆರನೇ ಸ್ಥಾನ ಪಡೆದರು.
ಏಶ್ಯನ್ ಗೇಮ್ಸ್ನ 200 ಮೀಟರ್ ಓಟದಲ್ಲಿ ಪದಕ ಗೆದ್ದ ಭಾರತದ ಆರನೇ ಮಹಿಳಾ ಅತ್ಲೀಟ್ ಎಂಬ ಹೆಗ್ಗಳಿಕೆಗೆ ಹರಿತಾ ಪಾತ್ರರಾಗಿದ್ದಾರೆ. ಇದಕ್ಕೂ ಮೊದಲು ಈ ಸ್ಪರ್ಧೆಯಲ್ಲಿ ರೋಶನ್ ಮಿಸ್ತ್ರಿ, ಕ್ರಿಸ್ಟಿನ್ ಬ್ರೌನ್, ಪಿ.ಟಿ. ಉಷಾ, ರಚಿತಾ ಮಿಸ್ತ್ರಿ ಮತ್ತು ದ್ಯುತಿ ಚಂದ್ ಪದಕಗಳನ್ನು ಗೆದ್ದಿದ್ದಾರೆ.






