Asian Games ವ್ಯವಸ್ಥೆಯ ಬಗ್ಗೆ ಭಾರತೀಯ ಶೂಟಿಂಗ್ ಕೋಚ್ ಅಸಮಾಧಾನ

Photo Credit: economictimes
ಟೋಕಿಯೊ: ಏಶ್ಯನ್ ಗೇಮ್ಸ್ಗಾಗಿ ತೆರಳಿರುವ ಭಾರತದ 30 ಸದಸ್ಯರ ಶೂಟಿಂಗ್ ತಂಡದೊಂದಿಗೆ ಪ್ರಯಾಣಿಸಿರುವ ಹಿರಿಯ ಕೋಚ್ ಒಬ್ಬರು ಜಪಾನ್ನಲ್ಲಿನ ವ್ಯವಸ್ಥೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸ್ಪರ್ಧೆಗೆ ಮುನ್ನ ತಂಡದ ಹೋಟೆಲ್ ಹಾಗೂ ಶೂಟಿಂಗ್ ರೇಂಜ್(ಸ್ಪರ್ಧಾ ಸ್ಥಳ)ನಡುವಿನ ದೀರ್ಘ ಪ್ರಯಾಣವು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ ಎಂದು ಅವರು ಹೇಳಿದ್ದಾರೆ.
ತಾನು ಹೆಚ್ಚಿನ ನಿರೀಕ್ಷೆಯೊಂದಿಗೆ ಜಪಾನಿಗೆ ಆಗಮಿಸಿದ್ದರೂ ಆತಿಥೇಯ ದೇಶದಿಂದ ನಿರೀಕ್ಷಿಸಿದ್ದ ಮಟ್ಟದ ವ್ಯವಸ್ಥೆಗಳು ಅಲ್ಲಿ ಕಂಡುಬಂದಿಲ್ಲ. ಭಾರತೀಯ ಶೂಟರ್ಗಳಿಗೆ ತರಬೇತಿ ಹಾಗೂ ಸ್ಪರ್ಧಾಸ್ಥಳದಿಂದ ಸುಮಾರು 50 ಕಿ.ಮೀ. ದೂರದಲ್ಲಿ ವಸತಿ ಕಲ್ಪಿಸಲಾಗಿದೆ. ಸ್ಪರ್ಧಿಗಳು ವಿವಿಧ ಹೊಟೇಲ್ಗಳಲ್ಲಿ ಉಳಿದುಕೊಂಡಿದ್ದಾರೆ ಎಂದು ಸುದ್ದಿಸಂಸ್ಥೆ ಪಿಟಿಐಗೆ ಶೂಟಿಂಗ್ ಕೋಚ್ ತಿಳಿಸಿದ್ದಾರೆ.
ಎರಡು ಬಾರಿ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಮನು ಭಾಕರ್ ಹಾಗೂ ಹಲವು ಬಾರಿ ಏಶ್ಯನ್ ಗೇಮ್ಸ್ ಪದಕಗಳನ್ನು ಗೆದ್ದಿರುವ ಇಶಾ ಸಿಂಗ್ ಅವರಂತಹ ಭಾರತದ ಪ್ರಮುಖ ಪದಕ ಆಕಾಂಕ್ಷಿಗಳನ್ನು ಒಳಗೊಂಡ ಭಾರತದ ಶೂಟಿಂಗ್ ತಂಡಕ್ಕೆ ತರಬೇತಿಯ ವೇಳಾಪಟ್ಟಿಯನ್ನು ಪಾಲಿಸಲು ಮುಂಜಾನೆಯೇ ಎದ್ದು ದೀರ್ಘಕಾಲ ರಸ್ತೆಯಲ್ಲಿ ಪ್ರಯಾಣಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.
‘‘ಸಾರಿಗೆ ವ್ಯವಸ್ಥೆ ನಿಜಕ್ಕೂ ಒಂದು ಸಮಸ್ಯೆಯಾಗಿದೆ. ಆದರೆ ನಾವೇನು ಮಾಡಲು ಸಾಧ್ಯವಿಲ್ಲ. ಶೂಟಿಂಗ್ ರೇಂಜ್ ಸಮೀಪ ಯಾವುದೇ ಹೋಟೆಲ್ಗಳು ನನಗೆ ಕಾಣಿಸಲಿಲ್ಲ. ಒಂದು ವೇಳೆ ಇದ್ದಿದ್ದರೆ ನಾವು ಬೇಗನೆ ತಲುಪಬಹುದಿತ್ತು. ಆಯೋಜಕರು ನಮಗೆ ದೂರದ ಸ್ಥಳದಲ್ಲಿ ವಸತಿ ಕಲ್ಪಿಸಿದ್ದಾರೆ’’ ಎಂದು ಹೆಸರು ಬಹಿರಂಗಪಡಿಸದ ಕೋಚ್ವೊಬ್ಬರು ಪಿಟಿಐಗೆ ತಿಳಿಸಿದರು.






