Asian Games | ಪುರುಷರ ಬ್ಯಾಡ್ಮಿಂಟನ್ : ಚೀನಾ ವಿರುದ್ಧ ಸೋತ ಭಾರತಕ್ಕೆ ಕಂಚು

ಸಾತ್ವಿಕ್ಸಾಯಿರಾಜ್ ರಾಂಕಿರೆಡ್ಡಿ , ಚಿರಾಗ್ ಶೆಟ್ಟಿ | Photo Credit : PTI
ನಗೋಯ: ಭಾರತದ ಪುರುಷರ ಬ್ಯಾಡ್ಮಿಂಟನ್ ತಂಡವು ಏಶ್ಯನ್ ಗೇಮ್ಸ್ನಲ್ಲಿ ಬುಧವಾರ ನಡೆದ ಸೆಮಿ ಫೈನಲ್ನಲ್ಲಿ ಚೀನಾ ತಂಡದ ವಿರುದ್ಧ 1-3 ಅಂತರದಿಂದ ಸೋಲನುಭವಿಸಿದ್ದು, ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡಿತು.
2023ರಲ್ಲಿ ಹಾಂಗ್ಝೌನಲ್ಲಿ ನಡೆದಿದ್ದ ಹಿಂದಿನ ಆವೃತ್ತಿಯ ಗೇಮ್ಸ್ನಲ್ಲಿ ಭಾರತವು ಬೆಳ್ಳಿ ಪದಕ ಜಯಿಸಿತ್ತು. ಆಗ ಅದು ಫೈನಲ್ನಲ್ಲಿ ಚೀನಾ ತಂಡದ ವಿರುದ್ಧವೇ ಸೋತಿತ್ತು.
ಆರಂಭಿಕ ಸಿಂಗಲ್ಸ್ ಪಂದ್ಯದಲ್ಲಿ ಲಕ್ಷ್ಯ ಸೇನ್ರನ್ನು ನೇರ ಗೇಮ್ಗಳಿಂದ ಮಣಿಸಿರುವ ಶಿ ಯು ಕ್ಯೂ ಚೀನಾಕ್ಕೆ ಆರಂಭಿಕ ಮುನ್ನಡೆ ಒದಗಿಸಿಕೊಟ್ಟರು. ಭಾರತದ ಡಬಲ್ಸ್ ಜೋಡಿ ಸಾತ್ವಿಕ್ಸಾಯಿರಾಜ್ ರಾಂಕಿರೆಡ್ಡಿ ಹಾಗೂ ಚಿರಾಗ್ ಶೆಟ್ಟಿ ಚೀನಾದ ಲಿಯಾಂಗ್ ವೀಕೆಂಟ್ ಹಾಗೂ ವಾಂಗ್ ಚಾಂಗ್ರನ್ನು 21-11, 11-20 ಅಂತರದಿಂದ ಮಣಿಸಿ 1-1 ರಿಂದ ಸಮಬಲಗೊಳಿಸಿದರು. ವಿಶ್ವ ಚಾಂಪಿಯನ್ಶಿಪ್ನ ಹಾಲಿ ಚಾಂಪಿಯನ್ರನ್ನು ಮಣಿಸಿದ ಸಾತ್ವಿಕ್-ಚಿರಾಗ್ ಭಾರತಕ್ಕೆ ತಿರುಗೇಟು ನೀಡುವ ವಿಶ್ವಾಸ ಮೂಡಿಸಿದರು.
ಎರಡನೇ ಸಿಂಗಲ್ಸ್ ಪಂದ್ಯದಲ್ಲಿ ಆಯುಷ್ ಶೆಟ್ಟಿ ಅವರನ್ನು 21-19, 21-13 ಗೇಮ್ಗಳ ಅಂತರದಿಂದ ಮಣಿಸಿರುವ ಲಿ ಶಿಫೆಂಗ್ ಚೀನಾಕ್ಕೆ 2-1 ಮುನ್ನಡೆ ಒದಗಿಸಿಕೊಟ್ಟರು.
ಭಾರತ ಸ್ಪರ್ಧೆಯಲ್ಲಿ ಉಳಿಯಲು ನಾಲ್ಕನೇ ಪಂದ್ಯವನ್ನು ಗೆಲ್ಲುವ ಅಗತ್ಯವಿತ್ತು. ಆದರೆ ಡಬಲ್ಸ್ ಜೋಡಿ ಹರಿಹರನ್ ಹಾಗೂ ಎಂ.ಆರ್. ಅರ್ಜುನ್ 16-21, 21-17, 9-21 ಗೇಮ್ಗಳ ಅಂತರದಿಂದ ಸೋತರು. ಮೊದಲ ಗೇಮ್ ಸೋತ ಭಾರತೀಯ ಜೋಡಿ ಎರಡನೇ ಗೇಮ್ ಗೆದ್ದುಕೊಂಡು ಮರು ಹೋರಾಟ ನೀಡಿತು. ಆದರೆ, ಚೀನಾದ ಜೋಡಿ ನಿರ್ಣಾಯಕ ಗೇಮ್ನಲ್ಲಿ ಪ್ರಾಬಲ್ಯ ಸಾಧಿಸಿದ್ದು, ಪಂದ್ಯವನ್ನು 3-1ರಿಂದ ಗೆಲ್ಲಲು ನೆರವಾಯಿತು.
ಈ ಫಲಿತಾಂಶದಿಂದ ಭಾರತೀಯ ಪುರುಷರ ತಂಡವು 40 ವರ್ಷಗಳಲ್ಲಿ ಮೊದಲ ಬಾರಿ ಏಶ್ಯನ್ ಗೇಮ್ಸ್ನಲ್ಲಿ ಬೆನ್ನುಬೆನ್ನಿಗೆ ಪದಕ ಜಯಿಸಿದೆ. 1982 ಹಾಗೂ 1986ರ ಆವೃತ್ತಿಗಳಲ್ಲಿ ಭಾರತ ತಂಡವು ಕಂಚಿನ ಪದಕ ಜಯಿಸಿತ್ತು.






