Asian Games | ಬರಿಗೈಯಲ್ಲಿ ವಾಪಸಾದ ಶೂಟರ್ ಮನು ಭಾಕರ್

ಮನು ಭಾಕರ್ | Photo Credit : PTI
ನಗೋಯ: ಒಲಿಂಪಿಕ್ಸ್ನಲ್ಲಿ ಅವಳಿ ಪದಕ ವಿಜೇತೆ ಮನು ಭಾಕರ್ ಜಪಾನ್ನಲ್ಲಿ ನಡೆಯುತ್ತಿರುವ ಏಶ್ಯನ್ ಗೇಮ್ಸ್ನಲ್ಲಿ ನಾಲ್ಕು ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರೂ ಪದಕ ಗೆಲ್ಲದೆ ಬರಿಗೈಯಲ್ಲಿ ವಾಪಸಾಗಿದ್ದಾರೆ. ಭಾರತದ ಅತಿದೊಡ್ಡ ಪದಕ ಭರವಸೆಯಾಗಿದ್ದ ಭಾಕರ್ರಿಂದ ಅನಿರೀಕ್ಷಿತ ಫಲಿತಾಂಶ ದಾಖಲಾಗಿದೆ. ಶೂಟಿಂಗ್ ತಂಡವು ಹಿಂದಿನ ಗೇಮ್ಸ್ ಸಾಧನೆಯನ್ನು ಸರಿಗಟ್ಟಲು ಪರದಾಡುತ್ತಿದೆ.
ಭಾರತವು 2023ರ ಗೇಮ್ಸ್ನಲ್ಲಿ ಏಳು ಚಿನ್ನ ಸಹಿತ ಒಟ್ಟು 22 ಶೂಟಿಂಗ್ ಪದಕಗಳನ್ನು ಗೆದ್ದಿತ್ತು. ಐಚಿ-ನಗೋಯಾದಲ್ಲಿ ಈ ತನಕ ಕೇವಲ ಒಂದು ಚಿನ್ನ ಸಹಿತ 12 ಪದಕಗಳನ್ನು ಜಯಿಸಿದೆ. ಸೋಮವಾರ ಇಶಾ ಸಿಂಗ್ ಅವರು ಮಹಿಳೆಯರ 25 ಮೀ. ಪಿಸ್ತೂಲ್ನಲ್ಲಿ ಬೆಳ್ಳಿ ಪದಕ ಜಯಿಸಿದ್ದಾರೆ.
ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಎರಡು ಕಂಚು ಜಯಿಸಿ ಚರಿತ್ರೆ ನಿರ್ಮಿಸಿದ್ದ ಮನು ಏಶ್ಯನ್ ಗೇಮ್ಸ್ನಲ್ಲಿ ಭಾರೀ ನಿರೀಕ್ಷೆ ಮೂಡಿಸಿದ್ದರು. ಆದರೆ 24ರ ವಯಸ್ಸಿನ ಮನು ನಾಲ್ಕು ಬಾರಿ ಪದಕ ಗೆಲ್ಲುವ ಅವಕಾಶಗಳನ್ನು ಚೆನ್ನಾಗಿ ಬಳಸಿಕೊಳ್ಳಲಿಲ್ಲ. ಮಹಿಳೆಯರ 10 ಮೀ. ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ 5ನೇ ಸ್ಥಾನ ಪಡೆದರು. ಟೀಮ್ ಇವೆಂಟ್ನಲ್ಲಿ ನಾಲ್ಕನೇ ಸ್ಥಾನ ಪಡೆದರು.
25 ಮೀ. ಪಿಸ್ತೂಲ್ ಸ್ಪರ್ಧೆಯಲ್ಲಿ ಮತ್ತೊಂದು ಅವಕಾಶ ಲಭಿಸಿತ್ತು. ಆದರೆ ಮನು ಅರ್ಹತಾ ಸುತ್ತಿನಲ್ಲಿ 11ನೇ ಸ್ಥಾನ ಪಡೆದು ವೈಯಕ್ತಿಕ ಫೈನಲ್ನಿಂದ ವಂಚಿತರಾದರು. ಸೋಮವಾರ 25 ಮೀ. ಪಿಸ್ತೂಲ್ ಟೀಮ್ ಇವೆಂಟ್ನಲ್ಲಿ ಐದನೇ ಸ್ಥಾನ ಪಡೆದು ತನ್ನ ಅಭಿಯಾನ ಅಂತ್ಯಗೊಳಿಸಿದರು.






