Asian Games | ಶಾಟ್ಪುಟ್ : ಬೆಳ್ಳಿಗೆ ತೃಪ್ತಿಪಟ್ಟ ತಜಿಂದರ್ಪಾಲ್ ಸಿಂಗ್

ತಜಿಂದರ್ಪಾಲ್ ಸಿಂಗ್ | Photo Credit : PTI
ನಗೋಯ: ನಗೋಯದಲ್ಲಿ ನಡೆಯುತ್ತಿರುವ ಏಶ್ಯನ್ ಗೇಮ್ಸ್ನಲ್ಲಿ, ಶನಿವಾರ ಭಾರತದ ಶಾಟ್ಪುಟ್ ಪಟು ತಜಿಂದರ್ಪಾಲ್ ಸಿಂಗ್ ತೂರ್ ಬೆಳ್ಳಿ ಪದಕಕ್ಕೆ ತೃಪ್ತರಾದರು. ಸತತ ಮೂರನೇ ಏಶ್ಯನ್ ಗೇಮ್ಸ್ ಚಿನ್ನದ ಪದಕದ ಅವರ ಕನಸು ಮಳೆಯಿಂದಾಗಿ ನನಸಾಗಲಿಲ್ಲ.
ಮಳೆ ಸುರಿದ ಹಿನ್ನೆಲೆಯಲ್ಲಿ ಒದ್ದೆ ಮತ್ತು ಜಾರುವ ನೆಲದಲ್ಲಿ ಪರಿಣಾಮಕಾರಿ ಪ್ರದರ್ಶನವನ್ನು ನೀಡಲು ಅವರಿಗೆ ಸಾಧ್ಯವಾಗಲಿಲ್ಲ.
ತೂರ್ ಗುಂಡನ್ನು 20.64 ಮೀಟರ್ ದೂರ ಎಸೆದು ಎರಡನೇ ಸ್ಥಾನ ಗಳಿಸಿದರು. ಆ ಮೂಲಕ ಏಶ್ಯನ್ ಗೇಮ್ಸ್ನಲ್ಲಿ ತನ್ನ ಸತತ ಮೂರನೇ ಪದಕವನ್ನು ಮುಡಿಗೇರಿಸಿಕೊಂಡರು.
ಇರಾನ್ನ ಮುಹಮ್ಮದ್ರೆಝ ತಯೆಬಿಸೆ 20.81 ಮೀಟರ್ ದೂರ ಎಸೆದು ಕೂಟ ದಾಖಲೆಯೊಂದಿಗೆ ಚಿನ್ನ ಗೆದ್ದುಕೊಂಡರು. ಈ ಮೂಲಕ ಅವರು 2018ರಲ್ಲಿ ತೂರ್ ನಿರ್ಮಿಸಿದ್ದ 20.75 ಮೀಟರ್ ದಾಖಲೆಯನ್ನು ಮುರಿದರು. ಸೌದಿ ಅರೇಬಿಯದ ಮುಹಮ್ಮದ್ ತೋಲು 20.48 ಮೀಟರ್ ಸಾಧನೆಯೊಂದಿಗೆ ಕಂಚಿನ ಪದಕ ಪಡೆದರು.
ತೂರ್ ಈ ಹಿಂದೆ 2018ರ ಜಕಾರ್ತ ಮತ್ತು 2022ರ ಹ್ಯಾಂಗ್ಝೂ ಕೂಟಗಳಲ್ಲಿ ಚಿನ್ನ ಗೆದ್ದಿದ್ದಾರೆ.
‘‘ಸ್ಪರ್ಧೆಗೆ ಪ್ರವೇಶಿಸುವಾಗ 21 ಮೀಟರ್ ಗಡಿ ದಾಟುವ ಮತ್ತು ಅತ್ಯುತ್ತಮ ಪ್ರದರ್ಶನ ನೀಡುವ ಆತ್ಮವಿಶ್ವಾಸವಿತ್ತು. ಆದರೆ ಫಲಿತಾಂಶ ನಿರಾಶೆ ತಂದಿದೆ’’ ಎಂದು ತೂರ್ ಬಳಿಕ ಹೇಳಿದರು.






