Asian Games | ವುಶು: ಭಾರತದ ರೋಶಿಬಿನಾ ದೇವಿ ಫೈನಲ್ಗೆ

ರೋಶಿಬಿನಾ ದೇವಿ |Photo Credit : PTI
ನಗೋಯ: ಭಾರತದ ವುಶು ಆಟಗಾರ್ತಿ ರೋಶಿಬಿನಾ ದೇವಿ ಏಶ್ಯನ್ ಗೇಮ್ಸ್ನಲ್ಲಿ ಬುಧವಾರ ಮಹಿಳೆಯರ 60 ಕೆಜಿ ಸಾಂಡಾ ಸ್ಪರ್ಧೆಯಲ್ಲಿ ಫೈನಲ್ಗೆ ಪ್ರವೇಶಿಸಿದರು. ಈ ಮೂಲಕ ಏಶ್ಯನ್ ಗೇಮ್ಸ್ನಲ್ಲಿ ಮೊದಲ ಬಾರಿ ವುಶು ಸ್ಪರ್ಧೆಯಲ್ಲಿ ದೇಶಕ್ಕೆ ಕನಿಷ್ಠ ಬೆಳ್ಳಿ ಪದಕವನ್ನು ದೃಢಪಡಿಸಿದರು.
ರೋಶಿಬಿನಾ ಸೆಮಿ ಫೈನಲ್ನಲ್ಲಿ ಇಂಡೋನೇಶ್ಯದ ಥಾನಿಯಾ ಕುಸುಮಾರನ್ನು 2-0 ಅಂತರದಿಂದ ಮಣಿಸಿ ಫೈನಲ್ನಲ್ಲಿ ಸ್ಥಾನ ಪಡೆದರು.
25ರ ವಯಸ್ಸಿನ ರೋಶಿಬಿನಾ ಏಶ್ಯನ್ ಗೇಮ್ಸ್ಗಾಗಿ ಭಾರತ ಪ್ರಕಟಿಸಿದ್ದ ಮೂಲ ತಂಡದಲ್ಲಿರಲಿಲ್ಲ. ದಿವ್ಯಾಂಶಿ ಗಾಯಗೊಂಡ ಕಾರಣ ತಂಡದಲ್ಲಿ ಸ್ಥಾನ ಪಡೆದಿದ್ದರು.
ರೋಶಿಬಿನಾ ಹಾಂಗ್ಝೌನಲ್ಲಿ ನಡೆದಿದ್ದ ಹಿಂದಿನ ಏಶ್ಯನ್ ಗೇಮ್ಸ್ನಲ್ಲಿ ಬೆಳ್ಳಿ ಪದಕ ಜಯಿಸಿದ್ದರು. ಈ ಬಾರಿ ಫೈನಲ್ನಲ್ಲಿ ಸ್ಥಾನ ಪಡೆದಿರುವ ರೋಶಿಬಿನಾ ಕನಿಷ್ಠ ಬೆಳ್ಳಿ ಪದಕ ಖಾತ್ರಿಪಡಿಸಿದ್ದು, ಚಿನ್ನಕ್ಕಾಗಿ ಹೋರಾಡಲಿದ್ದಾರೆ.
ಗುರುವಾರ ನಡೆಯಲಿರುವ ಮಹಿಳೆಯರ 60 ಕೆಜಿ ಸಾಂಡಾ ಫೈನಲ್ನಲ್ಲಿ ಚೀನಾದ ಝಾಂಗ್ ಕ್ಸಿಯಾಯೊಯುರನ್ನು ಎದುರಿಸಲಿದೆ.
ರೋಶಿಬಿನಾ ಇದೀಗ ಏಶ್ಯನ್ ಗೇಮ್ಸ್ನಲ್ಲಿ ಸತತ ಮೂರು ಆವೃತ್ತಿಗಳಲ್ಲಿ ಪದಕಗಳನ್ನು ಗೆದ್ದಂತಾಗಿದೆ. ಈ ಹಿಂದಿನ ಎರಡು ಆವೃತ್ತಿಗಳಲ್ಲಿ ಕಂಚು ಹಾಗೂ ಬೆಳ್ಳಿ ಪದಕ ಜಯಿಸಿದ್ದರು.
ಮಣಿಪುರದ ಆಟಗಾರ್ತಿ ರೋಶಿಬಿನಾ 2018ರಲ್ಲಿ ಜಕಾರ್ತದಲ್ಲಿ ನಡೆದಿದ್ದ ಏಶ್ಯನ್ ಗೇಮ್ಸ್ನಲ್ಲಿ ಮೊದಲ ಬಾರಿ ಬೆಳಕಿಗೆ ಬಂದಿದ್ದು, ಆಗ ಅವರು 60 ಕೆಜಿ ಸಾಂಡಾ ವಿಭಾಗದಲ್ಲಿ ಸ್ಪರ್ಧಿಸಿದ್ದರು. ಸೆಮಿ ಫೈನಲ್ನಲ್ಲಿ ಚೀನಾ ಸ್ಪರ್ಧಿಯ ಎದುರು ಸೋಲನುಭವಿಸಿ ಕಂಚು ಜಯಿಸಿದ್ದರು.
ಐದು ವರ್ಷಗಳ ನಂತರ ಹಾಂಗ್ಝೌ ಏಶ್ಯನ್ ಗೇಮ್ಸ್ನಲ್ಲಿ ಮಹಿಳೆಯರ 60 ಕೆಜಿ ವಿಭಾಗದಲ್ಲಿ ಫೈನಲ್ಗೆ ತಲುಪಿದ್ದ ರೋಶಿಬಿನಾ ಚೀನಾದ ವು ಕ್ಸಿಯೊವೀ ವಿರುದ್ಧ ಸೋಲನುಭವಿಸಿ ಬೆಳ್ಳಿ ಜಯಿಸಿದ್ದರು.






