ಏಶ್ಯನ್ ಹಾಕಿ 5ಎಸ್ ವಿಶ್ವಕಪ್ ಕ್ವಾಲಿಫೈಯರ್; ಪಾಕಿಸ್ತಾನದ ವಿರುದ್ಧ ಭಾರತಕ್ಕೆ ಸೋಲು

Photo: twitter/@TheHockeyIndia
ಸಲಲಾಹ್ (ಒಮಾನ್): ಒಮಾನ್ ನ ಸಲಲಾಹ್ನಲ್ಲಿ ನಡೆಯುತ್ತಿರುವ ಪುರುಷರ ಏಶ್ಯನ್ ಹಾಕಿ 5ಎಸ್ ವಿಶ್ವ ಕಪ್ ಕ್ವಾಲಿಫೈಯರ್ ಪಂದ್ಯಾವಳಿಯಲ್ಲಿ ಬುಧವಾರ ಭಾರತವು ಒಮಾನ್ ತಂಡವನ್ನು 12-2ರ ಭರ್ಜರಿ ಅಂತರದಿಂದ ಸೋಲಿಸಿದೆ. ಆದರೆ, ಬಳಿಕ ನಡೆದ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಅದು 4-5 ಗೋಲುಗಳ ಅಂತರದಿಂದ ಸೋತಿದೆ.
ಈ ಪಂದ್ಯದಲ್ಲಿ ಭಾರತದ ಪರವಾಗಿ ಮಣಿಂದರ್ ಸಿಂಗ್ (17 ಮತ್ತು 29ನೇ ನಿಮಿಷಗಳಲ್ಲಿ), ಗುರ್ಜೋತ್ ಸಿಂಗ್ (12ನೇ ನಿಮಿಷದಲ್ಲಿ) ಮತ್ತು ಮುಹಮ್ಮದ್ ರಹೀಲ್ (21ನೇ ನಿಮಿಷದಲ್ಲಿ) ಗೋಲುಗಳನ್ನು ಬಾರಿಸಿದರು.
ಪಾಕಿಸ್ತಾನದ ಪರವಾಗಿ, ಅಹ್ತಿಶಾಮ್ ಅಸ್ಲಮ್ (2 ಮತ್ತು 3ನೇ ನಿಮಿಷಗಳಲ್ಲಿ), ಝಿಕ್ರಿಯ ಹಯಾತ್ (5ನೇ ನಿಮಿಷದಲ್ಲಿ), ಅಬ್ದುಲ್ ರೆಹ್ಮಾನ್ (13ನೇ ನಿಮಿಷದಲ್ಲಿ), ಮತ್ತು ಅಬ್ದುಲ್ ರಾಣಾ (26ನೇ ನಿಮಿಷದಲ್ಲಿ) ಗೋಲುಗಳನ್ನು ಬಾರಿಸಿ ತಂಡಕ್ಕೆ ಗೆಲುವನ್ನು ತಂದುಕೊಟ್ಟರು.
ಇದಕ್ಕೂ ಮೊದಲು ನಡೆದ ಪಂದ್ಯದಲ್ಲಿ, ಭಾರತವು ಆತಿಥೇಯ ಒಮಾನ್ ತಂಡವನ್ನು 12-2 ಗೋಲುಗಳಿಂದ ಭರ್ಜರಿಯಾಗಿ ಸೋಲಿಸಿತು.
ಭಾರತದ ಪರವಾಗಿ ರಹೀಲ್ (2, 9 ಮತ್ತು 30ನೇ ನಿಮಿಷಗಳಲ್ಲಿ), ರಾಜ್ಭರ್ (9, 10 ಮತ್ತು 21ನೇ ನಿಮಿಷಗಳಲ್ಲಿ) ಮತ್ತು ಮಣಿಂದರ್ (16, 23 ಮತ್ತು 26ನೇ ನಿಮಿಷಗಳಲ್ಲಿ) ಹ್ಯಾಟ್ರಿಕ್ ಗೋಲುಗಳನ್ನು ಬಾರಿಸಿದರು. ಅದೇ ವೇಳೆ, ಜುಗ್ರಾಜ್ ಸಿಂಗ್ 3 ಮತ್ತು 28ನೇ ನಿಮಿಷಗಳಲ್ಲಿ ಅವಳಿ ಗೋಲುಗಳನ್ನು ಹೊಡೆದರು. ಸುಖ್ವಿಂದರ್ ಸಿಂಗ್ 29ನೇ ನಿಮಿಷದಲ್ಲಿ ಗೋಲು ಬಾರಿಸಿದರು.
ಒಮಾನ್ನ ಎರಡು ಗೋಲುಗಳನ್ನು ಫಾಹದ್ ಅಲ್ ಲವತಿ 16ನೇ ನಿಮಿಷದಲ್ಲಿ ಮತ್ತು ರಶಾದ್ ಅಲ್ ಫಝರಿ 18ನೇ ನಿಮಿಷದಲ್ಲಿ ಬಾರಿಸಿದರು.
ಮಂಗಳವಾರ ರಾತ್ರಿ ನಡೆದಿದ್ದ ತನ್ನ ಮೊದಲ ಪಂದ್ಯದಲ್ಲಿ ಭಾರತ ಬಾಂಗ್ಲಾದೇಶವನ್ನು 15-1 ಗೋಲುಗಳಿಂದ ಮಣಿಸಿತ್ತು.