ಏಶ್ಯನ್ ಅತ್ಲೆಟಿಕ್ಸ್ ಚಾಂಪಿಯನ್ ಶಿಪ್: ರಾಷ್ಟ್ರೀಯ ದಾಖಲೆ ಮುರಿದು ಚಿನ್ನ ಗೆದ್ದ ಜ್ಯೋತಿ

Photo Credit: PTI
ಚೆನ್ನೈ: ಟೆಹರಾನ್ನಲ್ಲಿ ಶನಿವಾರ ನಡೆದ ಏಶ್ಯನ್ ಇಂಡೋರ್ ಅತ್ಲೆಟಿಕ್ಸ್ ಚಾಂಪಿಯನ್ ಶಿಪ್ನಲ್ಲಿ ಭಾರತದ ಜ್ಯೋತಿ ಯುರ್ರಾಜಿ ಮಹಿಳೆಯರ 60 ಮೀ. ಹರ್ಡಲ್ಸ್ ಸ್ಪರ್ಧೆಯಲ್ಲಿ ರಾಷ್ಟ್ರೀಯ ದಾಖಲೆಯನ್ನು ಮುರಿದು ಚಿನ್ನದ ಪದಕ ಗೆದ್ದುಕೊಂಡಿದ್ದಾರೆ.
ಎರಡು ಬಾರಿ ಏಶ್ಯನ್ ಗೇಮ್ಸ್ನಲ್ಲಿ ಬೆಳ್ಳಿ ಪದಕ ಜಯಿಸಿರುವ ಹರ್ಮಿಲನ್ ಬೈನ್ಸ್ ಮಹಿಳೆಯರ 1,500 ಮೀ. ಓಟದಲ್ಲಿ 4:29.55 ಸೆಕೆಂಡ್ ನಲ್ಲಿ ಗುರಿ ತಲುಪಿ ಭಾರತಕ್ಕೆ ಮೊದಲ ಬಾರಿ ಚಿನ್ನದ ಪದಕ ಗೆದ್ದುಕೊಟ್ಟಿದ್ದಾರೆ.
ಜ್ಯೋತಿ ಫೈನಲ್ ನಲ್ಲಿ 8.12 ಸೆಕೆಂಡ್ ನಲ್ಲಿ ಗುರಿ ತಲುಪಿ ತನ್ನದೇ ರಾಷ್ಟ್ರೀಯ ದಾಖಲೆಯನ್ನು ಮುರಿದರು. ಭಾರತಕ್ಕೆ ಸ್ಪರ್ಧಾವಳಿಯಲ್ಲಿ ಎರಡನೇ ಚಿನ್ನದ ಪದಕ ಗೆದ್ದುಕೊಟ್ಟರು.
ಎರಡು ಚಿನ್ನದ ಪದಕ ಜಯಿಸಿರುವ ಭಾರತ ಕಳೆದ ವರ್ಷದ ಸಾಧನೆಯನ್ನು ಉತ್ತಮಪಡಿಸಿಕೊಂಡಿದೆ. ಕಳೆದ ವರ್ಷ ತಜಿಂದರ್ಪಾಲ್ ಸಿಂಗ್ ತೂರ್ ಅವರು ದೇಶದ ಪರ ಏಕೈಕ ಚಿನ್ನದ ದಪಕ ಗೆದ್ದುಕೊಟ್ಟಿದ್ದರು.
ಜ್ಯೋತಿ ಹೀಟ್ನಲ್ಲಿ 8.22 ಸೆಕೆಂಡ್ ಸಮಯದಲ್ಲಿ ಗುರಿ ತಲುಪಿ ಜಪಾನ್ನ ಅಸುಕಾ ಟೆರಾಡಾ(8.21)ರನ್ನು ಹಿಂದಿಕ್ಕಿದರು. ಹಾಂಕಾಂಗ್ ನ ಲುಯ್ ಲೈ ಯಿಯು 8.26 ಸೆಕೆಂಡ್ ನಲ್ಲಿ ಗುರಿ ತಲುಪಿ ಮೂರನೇ ಸ್ಥಾನ ಪಡೆದಿದ್ದರು.
24ರ ಹರೆಯದ ಜ್ಯೋತಿ 100 ಮೀ. ಹರ್ಡಲ್ಸ್ನಲ್ಲಿ ಹಾಲಿ ಏಶ್ಯನ್ ಇಂಡೋರ್ ಚಾಂಪಿಯನ್ ಆಗಿದ್ದಾರೆ. ಕಳೆದ ವರ್ಷ ಬ್ಯಾಂಕಾಕ್ನಲ್ಲಿ ಅವರು ಪ್ರಶಸ್ತಿ ಜಯಿಸಿದ್ದರು. ಹಾಂಗ್ಝೌ ಏಶ್ಯನ್ ಗೇಮ್ಸ್ನಲ್ಲಿ 100 ಮೀ. ಹರ್ಡಲ್ಸ್ನಲ್ಲಿ ಬೆಳ್ಳಿ ಪದಕ ಜಯಿಸಿದ್ದರು.







