ಏಶ್ಯ ಮಿಕ್ಸೆಡ್ ಟೀಮ್ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ | ಗುವಾಹಟಿಯಲ್ಲಿ ಭಾರತೀಯ ತಂಡದಿಂದ ಪೂರ್ವ ತಯಾರಿ ಶಿಬಿರ

Photo Credit: PTI
ಹೊಸದಿಲ್ಲಿ: ಏಶ್ಯ ಮಿಕ್ಸೆಡ್ ಟೀಮ್ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ಗೆ ತೆರಳಲಿರುವ ಭಾರತೀಯ ಶಟ್ಲರ್ಗಳು ಗುವಾಹಟಿಯಲ್ಲಿ ಫೆಬ್ರವರಿ 4ರಿಂದ 8ರ ತನಕ ಐದು ದಿನಗಳ ಕಾಲ ಪೂರ್ವ ತಯಾರಿ ಶಿಬಿರದಲ್ಲಿ ಭಾಗವಹಿಸಲಿದ್ದಾರೆ.
ಏಶ್ಯ ಮಿಕ್ಸೆಡ್ ಟೀಮ್ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ ಚೀನಾದ ಕ್ವಿಂಗ್ಡಾವೊದಲ್ಲಿ ಫೆಬ್ರವರಿ 11ರಿಂದ 16ರ ತನಕ ನಡೆಯಲಿದೆ.
ಎರಡು ಬಾರಿಯ ಒಲಿಂಪಿಕ್ಸ್ ಚಾಂಪಿಯನ್ ಪಿ.ವಿ. ಸಿಂಧು ಹಾಗೂ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಸೆಮಿ ಫೈನಲ್ಗೆ ತಲುಪಿರುವ ಲಕ್ಷ್ಯ ಸೇನ್ 14 ಸದಸ್ಯರ ಭಾರತೀಯ ಬ್ಯಾಡ್ಮಿಂಟನ್ ತಂಡವನ್ನು ಮುನ್ನಡೆಸಲಿದ್ದಾರೆ. 2023ರಲ್ಲಿ ನಡೆದಿದ್ದ ಹಿಂದಿನ ಆವೃತ್ತಿಯ ಚಾಂಪಿಯನ್ಶಿಪ್ನಲ್ಲಿ ಭಾರತವು ಕಂಚಿನ ಪದಕ ಜಯಿಸಿತ್ತು.
ಸಿಂಧು ಹಾಗೂ ಸೇನ್ರಲ್ಲದೆ, ತಂಡದಲ್ಲಿ ಏಶ್ಯನ್ ಗೇಮ್ಸ್ನಲ್ಲಿ ಚಿನ್ನದ ಪದಕ ವಿಜೇತರಾದ ಸಾತ್ವಿಕ್ಸಾಯಿರಾಜ್ ರಾಂಕಿರೆಡ್ಡಿ ಹಾಗೂ ಚಿರಾಗ್ ಶೆಟ್ಟಿ ಜೊತೆಗೆ ಒಲಿಂಪಿಯನ್ ಎಚ್.ಎಸ್. ಪ್ರಣಯ ಸಹಿತ ಇನ್ನಿತರರು ಇದ್ದಾರೆ.
ಭಾರತ ತಂಡವು ಫೆಬ್ರವರಿ 8ರಂದು ರಾತ್ರಿ ಚೀನಾಕ್ಕೆ ಪ್ರಯಾಣ ಬೆಳೆಸಲಿದೆ.