ಏಶ್ಯನ್ ಪ್ಯಾರಾ ಗೇಮ್ಸ್| 114 ಪದಕದೊಂದಿಗೆ ಅತ್ಯುತ್ತಮ ಪ್ರದರ್ಶನ ನೀಡಿದ ಭಾರತ
ಒಂದೇ ದಿನ 9 ಚಿನ್ನದ ಪದಕಗಳು

Photo Credit : PTI
ನಗೋಯ: ಏಶ್ಯನ್ ಪ್ಯಾರಾ ಗೇಮ್ಸ್ನಲ್ಲಿ 30 ಚಿನ್ನ ಸಹಿತ ಒಟ್ಟು 114 ಪದಕಗಳನ್ನು ಗೆದ್ದಿರುವ ಭಾರತದ ಪ್ಯಾರಾ ಅತ್ಲೀಟ್ಗಳು ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ.
ಭಾರತವು ಶುಕ್ರವಾರ ಒಂದೇ ದಿನ 9 ಚಿನ್ನದ ಪದಕಗಳನ್ನು ಬಾಚಿಕೊಂಡಿತು. ಪ್ರಸಕ್ತ ಗೇಮ್ಸ್ನಲ್ಲಿ ಒಂದೇ ದಿನ ಶ್ರೇಷ್ಠ ಪ್ರದರ್ಶನ ನೀಡಿದೆ. ಬ್ಯಾಡ್ಮಿಂಟನ್, ಆರ್ಚರಿ, ಶೂಟಿಂಗ್ ಹಾಗೂ ಅತ್ಲೆಟಿಕ್ಸ್ ಸ್ಪರ್ಧೆಗಳಲ್ಲಿ ಚಾಂಪಿಯನ್ಗಳು ಹೊರಹೊಮ್ಮಿದರು.
ಭಾರತವು 30 ಚಿನ್ನ, 35 ಬೆಳ್ಳಿ ಹಾಗೂ 49 ಕಂಚಿನ ಪದಕಗಳನ್ನು ಜಯಿಸಿದೆ. 2023ರ ಹಾಂಗ್ಝೌ ಗೇಮ್ಸ್ನಲ್ಲಿ ನೀಡಿರುವ ಶ್ರೇಷ್ಠ ಪ್ರದರ್ಶನವನ್ನು ಮೀರಿ ನಿಂತಿದೆ. 2023ರಲ್ಲಿ ಭಾರತವು 27 ಚಿನ್ನ ಸಹಿತ ಒಟ್ಟು 108 ಪದಕಗಳನ್ನು ಜಯಿಸಿತ್ತು.
168 ಅತ್ಲೀಟ್ಗಳೊಂದಿಗೆ ಸ್ಪರ್ಧಿಸಿರುವ ಭಾರತದ ಈ ಸಾಧನೆಯು ಅತ್ಯಂತ ಮಹತ್ವದ್ದಾಗಿದೆ. ಸುಮಾರು ಅರ್ಧದಷ್ಟು ತಂಡವು ಹಾಂಗ್ಝೌ ಗೇಮ್ಸ್ನಲ್ಲಿ ದೇಶವನ್ನು ಪ್ರತಿನಿಧಿಸಿತ್ತು.
ತನ್ನ ಅಭಿಯಾನದ ಅಂತ್ಯದಲ್ಲಿ ಭಾರತ ತಂಡವು ಪದಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲೇ ಉಳಿದುಕೊಂಡಿದೆ. ಶನಿವಾರ ಕೆಲವು ಸ್ಪರ್ಧೆಗಳು ನಡೆಯಲಿದ್ದು, ಸ್ಥಾನ ಬದಲಾಗುವ ಸಾಧ್ಯತೆಯಿದೆ.
ಅತ್ಲೆಟಿಕ್ಸ್ ಸ್ಪರ್ಧೆಯಲ್ಲಿ ಭಾರತವು ಒಟ್ಟು 65 ಪದಕಗಳನ್ನು ಜಯಿಸಿದ್ದು, ಕಳೆದ ಬಾರಿಗಿಂತ 12 ಅಧಿಕ ಪದಕ ಜಯಿಸಿದೆ. ಶುಕ್ರವಾರ ಬ್ಯಾಡ್ಮಿಂಟನ್, ಶೂಟಿಂಗ್ ಹಾಗೂ ಆರ್ಚರಿಯಲ್ಲಿ ಚಿನ್ನದ ಪದಕಗಳು ಹರಿದು ಬಂದವು.
ಭಾರತೀಯ ಸ್ವಿಮ್ಮರ್ಗಳು ನಿರೀಕ್ಷೆಗೂ ಮೀರಿ ಪ್ರದರ್ಶನ ನೀಡಿದ್ದು, ಮೂರು ಬೆಳ್ಳಿ ಸಹಿತ 11 ಪದಕಗಳನ್ನು ಜಯಿಸಿದೆ.
ಸ್ಟಾರ್ ಜಾವೆಲಿನ್ ಎಸೆತಗಾರ ಸುಮಿತ್ ಅಂತಿಲ್, ಪ್ರಣವ್ ಸೂರ್ಮಾ, ಸಂದೀಪ್(ಪುರುಷರ 400 ಮೀ. ಓಟ), ಹನಿ(ಪುರುಷರ ಜಾವೆಲಿನ್ ಎಸೆತ), ನಿತೇಶ್ ಕುಮಾರ್, ನವೀನ್ ಶಿವಕುಮಾರ್, ತುಳಸಿಮತಿ-ಮಾನಸಿ ಜೋಶಿ(ಬ್ಯಾಡ್ಮಿಂಟನ್), ಮೋನಾ ಅಗರ್ವಾಲ್(ಶೂಟಿಂಗ್), ಹರ್ವಿಂದರ್ ಸಿಂಗ್-ವಿಜಯ್(ಆರ್ಚರಿ) ಶುಕ್ರವಾರ ಚಿನ್ನದ ಪದಕ ಜಯಿಸಿದ್ದಾರೆ.






