ಏಶ್ಯನ್ ಶೂಟಿಂಗ್ ಚಾಂಪಿಯನ್ ಶಿಪ್ | ಭಾರತ ತಂಡಕ್ಕೆ ಮನು ಭಾಕರ್ ಸಾರಥ್ಯ

ಮನು ಭಾಕರ್ | PC ; X \ @IndianTechGuide
ಹೊಸದಿಲ್ಲಿ: ಕಝಕ್ ಸ್ತಾನದ ಶಿಮ್ ಕೆಂಟ್ ನಲ್ಲಿ ಆಗಸ್ಟ್ 16ರಿಂದ 30ರ ತನಕ ನಡೆಯಲಿರುವ 16ನೇ ಆವೃತ್ತಿಯ ಏಶ್ಯನ್ ಚಾಂಪಿಯನ್ಶಿಪ್ಗಾಗಿ 35 ಸದಸ್ಯರನ್ನು ಒಳಗೊಂಡ ಭಾರತೀಯ ಶೂಟಿಂಗ್ ತಂಡವನ್ನು ಸೋಮವಾರ ಪ್ರಕಟಿಸಲಾಗಿದೆ. ಡಬಲ್ ಒಲಿಂಪಿಯನ್ ಮನು ಭಾಕರ್ ವೈಯಕ್ತಿಕ ವಿಭಾಗದಲ್ಲಿ ಸ್ಪರ್ಧಿಸುತ್ತಿರುವ ಭಾರತದ ಏಕೈಕ ಶೂಟರ್ ಆಗಿದ್ದಾರೆ.
ಸೆಪ್ಟಂಬರ್-ಅಕ್ಟೋಬರ್ನಲ್ಲಿ ಭಾರತದಲ್ಲಿ ನಡೆಯಲಿರುವ ಐಎಸ್ಎಸ್ಎಫ್ ಜೂನಿಯರ್ ವಿಶ್ವಕಪ್ ಹಾಗೂ ಜೂನಿಯರ್ ಏಶ್ಯನ್ ಚಾಂಪಿಯನ್ಶಿಪ್ಗಾಗಿ ತಂಡಗಳನ್ನು ರಾಷ್ಟ್ರೀಯ ರೈಫಲ್ ಅಸೋಸಿಯೇಶನ್(ಎನ್ಆರ್ಎಐ) ಪ್ರಕಟಿಸಿದೆ.
ಚೀನಾದ ನಿಂಗ್ಬೊದಲ್ಲಿ ನಡೆಯಲಿರುವ ಐ ಎಸ್ ಎಸ್ ಎಫ್ ವರ್ಲ್ಡ್ ಕಪ್ ಗಾಗಿ(ರೈಫಲ್/ಪಿಸ್ತೂಲ್) ಹಿರಿಯರ ತಂಡವನ್ನು ಎನ್ಆರ್ಎಐ ಪ್ರಕಟಿಸಿದೆ. ಈ ಟೂರ್ನಿಯು ಸೆಪ್ಟಂಬರ್ 7ರಿಂದ 15ರ ತನಕ ನಡೆಯಲಿದೆ.
ಏಶ್ಯನ್ ಸ್ಪರ್ಧಾವಳಿಗೆ 15 ಇವೆಂಟ್ ಗಳಿಗೆ 35 ಸದಸ್ಯರ ಹಿರಿಯ ತಂಡವನ್ನು ಆಯ್ಕೆ ಮಾಡಲಾಗಿದ್ದು, ಇದರಲ್ಲಿ ಮೂರು ಮಿಕ್ಸೆಡ್ ಟೀಮ್ ಸ್ಪರ್ಧಾವಳಿಗಳು ಇವೆ.
ಮನು ಭಾಕರ್ ಮಹಿಳೆಯರ 10 ಮೀ. ಏರ್ ಪಿಸ್ತೂಲ್ ಹಾಗೂ ಮಹಿಳೆಯರ 25 ಮೀ. ಪಿಸ್ತೂಲ್ ಸ್ಪರ್ಧೆಗಳಲ್ಲಿ ಭಾಗವಹಿಸಲಿದ್ದಾರೆ.
ಸೀನಿಯರ್ ತಂಡಕ್ಕೆ ಪುರುಷರ ಏರ್ ರೈಫಲ್ ವರ್ಲ್ಡ್ ಚಾಂಪಿಯನ್ ರುದ್ರಾಂಕ್ಷ್ ಪಾಟೀಲ್ ಹಾಗೂ ಒಲಿಂಪಿಯನ್ಗಳಾದ ಅಂಜುಮ್ ಮೌದ್ಗಿಲ್(ಮಹಿಳೆಯರ 50 ಮೀ. ರೈಫಲ್ 3 ಪೊಸಿಶನ್ಸ್), ಐಶ್ವರ್ಯಾ ಪ್ರತಾಪ್ ಸಿಂಗ್ ತೋಮರ್(ಪುರುಷರ 50 ಮೀ. ರೈಫಲ್ 3 ಪೊಸಿಶನ್ಸ್), ಸೌರಭ್ ಚೌಧರಿ(ಪುರುಷರ 10 ಮೀ. ಏರ್ ಪಿಸ್ತೂಲ್) ಹಾಗೂ ಕಿನನ್ ಚೆನೈ(ಪುರುಷರ ಟ್ರ್ಯಾಪ್)ಅವರು ವಾಪಸಾಗಿದ್ದಾರೆ.
ಇಶಾ ಸಿಂಗ್(25 ಮೀ. ಪಿಸ್ತೂಲ್), ಮೆಹುಲಿ ಘೋಷ್(ಏರ್ ರೈಫಲ್) ಹಾಗೂ ಕಿರಣ್ ಅಂಕುಶ್ ಜಾಧವ್(ಏರ್ ರೈಫಲ್) ಎರಡೂ ಸೀನಿಯರ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಒಲಿಂಪಿಕ್ಸ್ನಲ್ಲಿ ಕಂಚಿನ ಪದಕ ವಿಜೇತ ಸ್ವಪ್ನಿಲ್ ಕುಸಾಲೆ ಹಾಗೂ ಮಾಜಿ ಏಶ್ಯನ್ ಗೇಮ್ಸ್ ಚಾಂಪಿಯನ್ ಹಾಗೂ ಒಲಿಂಪಿಯನ್ ರಾಹಿ ಸರ್ನೊಬಾಟ್ ನಿಂಗ್ಬೊ ವಿಶ್ವಕಪ್ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.







