ಏಶ್ಯನ್ ಶೂಟಿಂಗ್ ಚಾಂಪಿಯನ್ಶಿಪ್| ಸುರುಚಿ ಸಿಂಗ್, ಸಾಮ್ರಾಟ್ ರಾಣಾಗೆ ಬೆಳ್ಳಿ

Photo: PTI
ಹೊಸದಿಲ್ಲಿ,ಫೆ.5: ಏಶ್ಯನ್ ಶೂಟಿಂಗ್ ಚಾಂಪಿಯನ್ಶಿಪ್ನ 10 ಮೀ. ಏರ್ ಪಿಸ್ತೂಲ್ ಮಿಕ್ಸೆಡ್ ಟೀಮ್ ಸ್ಪರ್ಧೆಯ ಫೈನಲ್ನಲ್ಲಿ 479.6 ಅಂಕ ಗಳಿಸಿದ ಭಾರತದ ಸುರುಚಿ ಸಿಂಗ್ ಹಾಗೂ ಸಾಮ್ರಾಟ್ ರಾಣಾ ಬೆಳ್ಳಿ ಪದಕ ಗೆದ್ದಿದ್ದಾರೆ.
481.3 ಅಂಕ ಗಳಿಸಿ ಚಿನ್ನದ ಪದಕ ಜಯಿಸಿದ ಉಜ್ಬೇಕಿಸ್ತಾನದ ನಿಗಿನ ಸೈದ್ಕುಲೋವ ಹಾಗೂ ಮುಖಮ್ಮದ್ ಕಮಲೋವ್ ಅವರು ಭಾರತೀಯ ಜೋಡಿಯನ್ನು ಮಣಿಸಿತು. ಚೈನೀಸ್ ತೈಪೆಯನ್ನು ಪ್ರತಿನಿಧಿಸಿದ ಚೆಂಗ್ ಯೆನ್-ಚಿಂಗ್ ಹಾಗೂ ಸೀಹ್ ಸಿಯಾಂಗ್-ಚೆಂಗ್ 412.2 ಅಂಕ ಗಳಿಸಿ ಕಂಚಿನ ಪದಕ ಜಯಿಸಿದರು.
ಮೊದಲೆರಡು ಸೀರೀಸ್ನಲ್ಲಿ ಮುನ್ನಡೆ ಪಡೆದು ಉತ್ತಮ ಆರಂಭ ಪಡೆದ ಭಾರತವು ಉಜ್ಬೇಕಿಸ್ತಾನ ತಂಡವನ್ನು ಒತ್ತಡಕ್ಕೆ ಸಿಲುಕಿಸಿತು. ಆದರೆ ಉಜ್ಬೇಕಿಸ್ತಾನ ತಂಡವು ಮೂರನೇ ಸೀರೀಸ್ ನಂತರ ಸ್ಪರ್ಧೆಯೊಡ್ಡಲಾರಂಭಿಸಿತು.
583 ಅಂಕ ಗಳಿಸಿದ ಸುರುಚಿ ಹಾಗೂ ಸಾಮ್ರಾಟ್ ಅರ್ಹತಾ ಸುತ್ತಿನಲ್ಲಿ ಅಗ್ರ ಸ್ಥಾನದೊಂದಿಗೆ ಫೈನಲ್ಗೆ ಅರ್ಹತೆ ಪಡೆದಿದ್ದಾರೆ.
ಮಹಿಳೆಯರ ಜೂನಿಯರ್ 10 ಮೀ. ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಭಾರತ ತಂಡವು ಚಿನ್ನ ಹಾಗೂ ಬೆಳ್ಳಿ ಪದಕವನ್ನು ಜಯಿಸಿವೆ. ಫೈನಲ್ನಲ್ಲಿ ರಶ್ಮಿಕಾ ಸಹಗಲ್(237.9)ಹಾಗೂ ವಂಶಿಕಾ ಚೌಧರಿ(236.7)ಕ್ರಮವಾಗಿ ಮೊದಲನೇ ಹಾಗೂ ಎರಡನೇ ಸ್ಥಾನ ಪಡೆದಿದ್ದಾರೆ.







