ಏಶ್ಯನ್ ಶೂಟಿಂಗ್ ಚಾಂಪಿಯನ್ಶಿಪ್ಸ್-2025: ಚಿನ್ನ ಗೆದ್ದ ರಶ್ಮಿಕಾ, ಮನು ಭಾಕರ್ಗೆ ಕಂಚು

ಮನು ಭಾಕರ್ | PC : PTI
ಹೊಸದಿಲ್ಲಿ: ಕಝಕಿಸ್ತಾನದ ಶಿಮ್ಕೆಂಟ್ನಲ್ಲಿ ಮಂಗಳವಾರ ನಡೆದ ಏಶ್ಯನ್ ಶೂಟಿಂಗ್ ಚಾಂಪಿಯನ್ಶಿಪ್ಸ್ನ ಜೂನಿಯರ್ ಮಹಿಳೆಯರ ಸ್ಪರ್ಧೆಯಲ್ಲಿ ರಶ್ಮಿಕಾ ಸಹಗಲ್ ಚಿನ್ನದ ಪದಕ ಜಯಿಸಿದರೆ, 10 ಮೀ. ಏರ್ ಪಿಸ್ತೂಲ್ ಮಹಿಳೆಯರ ಸ್ಪರ್ಧೆಯಲ್ಲಿ ಭಾರತೀಯ ಶೂಟರ್ ಮನು ಭಾಕರ್ ಕಂಚಿನ ಪದಕ ಗೆದ್ದಿದ್ದಾರೆ.
8 ಆಟಗಾರ್ತಿಯರಿದ್ದ ಫೈನಲ್ನಲ್ಲಿ ಮನು 219.7 ಅಂಕ ಗಳಿಸಿ 3ನೇ ಸ್ಥಾನ ಪಡೆದರು. ದಕ್ಷಿಣ ಕೊರಿಯಾದ ಜಿನ್ ಯಾಂಗ್(241.6)ಹಾಗೂ ಚೀನಾದ ಕ್ವಿಯಾಂಕ್ ಮಾ(243.2)ಮೊದಲೆರಡು ಸ್ಥಾನ ಪಡೆದಿದ್ದಾರೆ.
ಜೂನಿಯರ್ ಸ್ಪರ್ಧಾವಳಿಯಲ್ಲಿ ರಶ್ಮಿಕಾ 241.9 ಅಂಕ ಗಳಿಸಿ ಮೊದಲ ಸ್ಥಾನ ಪಡೆದರು. ಕೊರಿಯಾದ ಸೆವುಂಗ್ಯುನ್ ಹಾನ್(237.6)ಹಾಗೂ ಯೆಜಿನ್ ಕಿಮ್(215.1)ಕ್ರಮವಾಗಿ 2ನೇ ಹಾಗೂ 3ನೇ ಸ್ಥಾನ ಪಡೆದಿದ್ದಾರೆ.
ರಶ್ಮಿಕಾ ಅವರು ವಂಶಿಕಾ ಚೌಧರಿ ಹಾಗೂ ಮೋಹಿನಿ ಸಿಂಗ್ ಜೊತೆಗೂಡಿ 1,720 ಅಂಕ ಕಲೆ ಹಾಕಿ ಟೀಮ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಜಯಿಸಿದ್ದಾರೆ. ದಕ್ಷಿಣ ಕೊರಿಯಾ(1,698)ಹಾಗೂ ಕಝಕ್ಸ್ತಾನ(1,662)ಉಳಿದೆರಡು ಸ್ಥಾನ ಪಡೆದಿವೆ.
ಭಾರತವು ಸೀನಿಯರ್ ಟೀಮ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದುಕೊಂಡಿದೆ. ಮನು, ಸುರುಚಿ ಸಿಂಗ್ ಹಾಗೂ ಪಾಲಕ್ ಗುಲಿಯಾ ಅವರಿದ್ದ ಸೀನಿಯರ್ ತಂಡವು 1,730 ಅಂಕ ಗಳಿಸಿತು. 2ನೇ ಸ್ಥಾನದಲ್ಲಿರುವ ಕೊರಿಯಾ(1,731)ಗಿಂತ 1 ಅಂಕ, ಚಿನ್ನ ಗೆದ್ದಿರುವ ಚೀನಾ(1,740)ಗಿಂತ 10 ಅಂಕದಿಂದ ಹಿಂದಿದೆ.
ಇದಕ್ಕೂ ಮೊದಲು ಅರ್ಹತಾ ಸುತ್ತಿನಲ್ಲಿ 583 ಅಂಕ ಗಳಿಸಿ ಅಂಕಪಟ್ಟಿಯಲ್ಲಿ 2ನೇ ಸ್ಥಾನ ಪಡೆದ ಮನು ಭಾಕರ್ ಫೈನಲ್ ಸುತ್ತಿಗೇರಿದರು. ಮತ್ತೊಂದೆಡೆ ಸುರುಚಿ ಹಾಗೂ ಪಾಲಕ್ ಫೈನಲ್ಗೆ ತಲುಪುವಲ್ಲಿ ವಿಫಲರಾದರು.







