ಏಶ್ಯನ್ ಶೂಟಿಂಗ್ ಚಾಂಪಿಯನ್ ಶಿಪ್ಸ್ 2025 | ಪುರುಷರ 10ಮೀ ಏರ್ ರೈಫಲ್ ತಂಡ ಸ್ಪರ್ಧೆಯಲ್ಲಿ ಭಾರತಕ್ಕೆ ಚಿನ್ನ

PC : olympics.com
ಹೊಸದಿಲ್ಲಿ, ಆ. 21: ಕಝಖ್ ಸ್ತಾನದ ಶೈಮ್ ಕೆಂಟ್ ನಲ್ಲಿ ನಡೆಯುತ್ತಿರುವ ಏಶ್ಯನ್ ಶೂಟಿಂಗ್ ಚಾಂಪಿಯನ್ ಶಿಪ್ಸ್ ನಲ್ಲಿ, ಪುರುಷರ 10 ಮೀಟರ್ ಏರ್ ರೈಫಲ್ ತಂಡ ಸ್ಪರ್ಧೆಯಲ್ಲಿ ಭಾರತದ ಅರ್ಜುನ್ ಬಬುಟ, ರುದ್ರಾಂಕ್ಷ್ ಪಾಟೀಲ್ ಮತ್ತು ಕಿರಣ್ ಜಾಧವ್ ಚಿನ್ನ ಗೆದ್ದಿದ್ದಾರೆ.
ಮೂವರು ಶೂಟರ್ಗಳು ಒಟ್ಟು 1892.5 ಅಂಕಗಳನ್ನು ಕಲೆ ಹಾಕಿದರು ಹಾಗೂ ಚೀನಾವನ್ನು ಹಿಂದಿಕ್ಕಿದರು. ಚೀನಾದ ಪರವಾಗಿ ಲಿ ಕ್ಸಿಯಾನ್ಹಾವೊ, ಲು ಡಿಂಗ್ಕೆ ಮತ್ತು ವಾಂಗ್ ಹೊಂಘಾವೊ ಒಟ್ಟು 1889.2 ಅಂಕಗಳನ್ನು ಗಳಿಸಿ ಬೆಳ್ಳಿ ಪದಕ ಗೆದ್ದರು. ದಕ್ಷಿಣ ಕೊರಿಯದ ಪಾರ್ಕ್ ಹಾ-ಜೂನ್, ಲೀ ಜುನ್-ಹ್ವಾನ್ ಮತ್ತು ಸಿಯೊ ಜೂನ್-ವೊನ್ ಒಟ್ಟು 1885.7 ಅಂಕಗಳನ್ನು ಗಳಿಸಿ ಕಂಚಿನ ಪದಕ ಪಡೆದರು.
ಜೂನಿಯರ್ ಮಹಿಳೆಯರ ಸ್ಕೀಟ್ ನಲ್ಲಿ ಮಾನಸಿ ಚಿನ್ನ ಪಡೆದರು. ಜೂನಿಯರ್ ಪುರುಷರ 10 ಮೀಟರ್ ಏರ್ ರೈಫಲ್ನಲ್ಲಿ ಅಭಿನವ್ ಚಿನ್ನದ ಪದಕ ಗೆದ್ದರು.
ಮಹಿಳೆಯರ ಜೂನಿಯರ್ ಸ್ಕೀಟ್ ಸ್ಪರ್ಧೆಯಲ್ಲಿ, ಭಾರತದ ಮಾನಸಿ ರಘುವಂಶಿ ಚಿನ್ನ ಗೆದ್ದರೆ, ಭಾರತದವರೇ ಆದ ಯಶಸ್ವಿ ರಾಥೋಡ್ ಬೆಳ್ಳಿ ಪಡೆದರು.
ಜೂನಿಯರ್ ಪುರುಷರ 10 ಮೀಟರ್ ಏರ್ ರೈಫಲ್ ತಂಡ ಸ್ಪರ್ಧೆಯಲ್ಲಿ, ಭಾರತದ ಅಭಿನವ್, ಹಿಮಾಂಶು ತಲನ್ ಮತ್ತು ನಾರಾಯಣ್ ಸುರೇಶ್ ಚಿನ್ನ ಗೆದ್ದರು. ಒಟ್ಟು 1890.1 ಅಂಕಗಳನ್ನು ಗಳಿಸಿರುವ ಭಾರತೀಯ ತಂಡವು ವಿಶ್ವ ಮತ್ತು ಏಶ್ಯನ್ ಜೂನಿಯರ್ ದಾಖಲೆಗಳನ್ನು ಮುರಿಯಿತು. 1885.1 ಅಂಕಗಳನ್ನು ಗಳಿಸಿದ ಚೀನಾದ ಮಾ ಸಿಹಾನ್, ಹಾನ್ ಯಿನಾಹ್ ಮತ್ತು ಲಿಯು ಜುನ್ಹಾವ್ ಬೆಳ್ಳಿ ಗೆದ್ದರೆ, ಲೀ ಹ್ಯೂನ್-ಸಿಯೊ, ಕಿಮ್ ಟೇಗ್ಯೆ-ಒಂಗ್ ಮತ್ತು ಲೀ ಜೊಂಗ್-ಹ್ಯೂಕ್ ಅವರನ್ನೊಳಗೊಂಡ ದಕ್ಷಿಣ ಕೊರಿಯ ತಂಡ ಕಂಚು ಗೆದ್ದಿತು.







