ATP ಫೈನಲ್ಸ್: ಅಲ್ಕರಾಝ್ ಚಾಂಪಿಯನ್

ಅಲೆಕ್ಸಾಂಡರ್ ಝ್ವೆರೆವ್ | PhotoCredit : PTI
ಟುರಿನ್, ನ.24: ಜರ್ಮನಿಯ ಆಟಗಾರ ಅಲೆಕ್ಸಾಂಡರ್ ಝ್ವೆರೆವ್ ಅವರನ್ನು ಫೈನಲ್ ಪಂದ್ಯದಲ್ಲಿ ಮಣಿಸಿದ ಸ್ಪೇನ್ ಆಟಗಾರ ಕಾರ್ಲೊಸ್ ಅಲ್ಕರಾಝ್ 2026ರ ಆವೃತ್ತಿಯ ಎಟಿಪಿ ಫೈನಲ್ಸ್ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.
ರವಿವಾರ ನಡೆದ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಅಲ್ಕರಾಝ್ ಅವರು ಝ್ವೆರೆವ್ ಅವರನ್ನು 6-2, 7-6(7) ಸೆಟ್ ಗಳ ಅಂತರದಿಂದ ಮಣಿಸಿದರು.
ಗಾಯದ ಸಮಸ್ಯೆಯಿಂದಾಗಿ ಈ ವರ್ಷ ಏರಿಳಿತ ಕಂಡಿದ್ದ ಅಲ್ಕರಾಝ್, ಇದೀಗ ಪ್ರಶಸ್ತಿ ಗೆಲ್ಲುವ ಮೂಲಕ 2026ರ ಋತುವನ್ನು ಯಶಸ್ವಿಯಾಗಿ ಮುಕ್ತಾಯಗೊಳಿಸಿದ್ದಾರೆ.
ಈ ಮೂಲಕ ಅವರು ವೃತ್ತಿಜೀವನದಲ್ಲಿ ಎಲ್ಲ ನಾಲ್ಕು ಗ್ರ್ಯಾನ್ಸ್ಲಾಮ್ ಪ್ರಶಸ್ತಿಗಳು ಹಾಗೂ ಎಟಿಪಿ ಫೈನಲ್ಸ್ ಪ್ರಶಸ್ತಿ ಗೆದ್ದಿರುವ ಪುರುಷರ ಸಿಂಗಲ್ಸ್ ಆಟಗಾರರ ವಿಶೇಷ ಬಳಗಕ್ಕೆ ಸೇರ್ಪಡೆಯಾಗಿದ್ದಾರೆ. ಈ ಹಿಂದೆ ರೋಜರ್ ಫೆಡರರ್, ಆಂಡ್ರೆ ಅಗಾಸ್ಸಿ ಹಾಗೂ ನೊವಾಕ್ ಜೊಕೊವಿಕ್ ಈ ಸಾಧನೆ ಮಾಡಿದ್ದಾರೆ.
ಅಲ್ಕರಾಝ್ ಅವರು 1998ರ ನಂತರ ಎಟಿಪಿ ಫೈನಲ್ಸ್ ಪ್ರಶಸ್ತಿ ಗೆದ್ದಿರುವ ಸ್ಪೇನ್ ನ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ. ಈ ಮೊದಲು ಅಲೆಕ್ಸ್ ಕೊರೆಟ್ಜಾ ಈ ಸಾಧನೆ ಮಾಡಿದ್ದರು. ಸ್ಪೇನ್ ನ ಮ್ಯಾನುಯೆಲ್ ಒರಾಂಟೆಸ್ 1976ರಲ್ಲಿ ಈ ಪ್ರಶಸ್ತಿ ಗೆದ್ದಿದ್ದರು.
‘‘ಇದು ಅದ್ಭುತವಾದ ವಾರವಾಗಿತ್ತು. ಈ ವಾರವನ್ನು ಇದಕ್ಕಿಂತ ಉತ್ತಮವಾಗಿ ಮುಕ್ತಾಯಗೊಳಿಸಲು ಸಾಧ್ಯವಿರಲಿಲ್ಲ. ಹಾಗಾಗಿ ನನಗೆ ತುಂಬಾ ಹೆಮ್ಮೆ ಇದೆ’’ ಎಂದು ಗೆಲುವಿನ ನಂತರ ಅಲ್ಕರಾಝ್ ಹೇಳಿದ್ದಾರೆ.
‘‘ನಾನು ಸ್ವತಃ ಹಾಗೂ ನನ್ನ ತಂಡದೊಂದಿಗೆ ಬಹಳ ಕಠಿಣ ಕ್ಷಣಗಳನ್ನು ಎದುರಿಸಿದ್ದೇನೆ. ಆದರೆ, ನಾವೆಲ್ಲವನ್ನೂ ಯಶಸ್ವಿಯಾಗಿ ದಾಟಿ ಬಂದಿದ್ದೇವೆ. ನಾನು ಅತ್ಯುತ್ತಮ ಟೆನಿಸ್ ಆಡುತ್ತಿದ್ದೇನೆ. ಬಹಳ ಕಾಲದಿಂದಲೂ ಈ ಟ್ರೋಫಿಯನ್ನು ಎತ್ತಿ ಹಿಡಿಯುವ ಕನಸು ಕಾಣುತ್ತಿದ್ದೆ’’ ಎಂದು ಅಲ್ಕರಾಝ್ ಹೇಳಿದ್ದಾರೆ.
ಝ್ವೆರೆವ್ ಒಂದೂ ಸರ್ವಿಸ್ ಗೇಮ್ ಅನ್ನು ಕೈಚೆಲ್ಲದೆ ಫೈನಲ್ಗೆ ಪ್ರವೇಶಿಸಿದ್ದರು. ಆದರೆ, ಮೊದಲ ಸೆಟ್ನಲ್ಲಿ ಮೂರು ಬ್ರೇಕ್ ಪಾಯಿಂಟ್ಗಳನ್ನು ಉಳಿಸಿಕೊಳ್ಳುವಲ್ಲಿ ವಿಫಲರಾದ ನಂತರ ಒತ್ತಡಕ್ಕೆ ಸಿಲುಕಿದರು. ಆರಂಭಿಕ ಮುನ್ನಡೆ ಪಡೆದ ಅಲ್ಕರಾಝ್ ಕ್ಷಿಪ್ರವಾಗಿ ಮೊದಲ ಸೆಟ್ನ್ನು ಗೆದ್ದುಕೊಂಡರು.
ಎರಡನೇ ಸೆಟ್ ತೀವ್ರ ಪೈಪೋಟಿಯಿಂದ ಕೂಡಿತ್ತು. ಟೈ ಬ್ರೇಕ್ನಲ್ಲಿ ಅಲ್ಕರಾಝ್ 3-0 ಮುನ್ನಡೆ ಪಡೆದರೂ ಝ್ವೆರೆವ್ ಸತತ ಆರು ಅಂಕಗಳನ್ನು ಗಳಿಸಿ ತಿರುಗೇಟು ನೀಡಿದರು.
ಆದರೆ, ಅಲ್ಕರಾಝ್ ನಿರ್ಣಾಯಕ ಹಂತದಲ್ಲಿ ಮೇಲುಗೈ ಸಾಧಿಸಿ 7-6(7) ಅಂತರದಿಂದ ಎರಡನೇ ಸೆಟ್ನ್ನು ಗೆದ್ದುಕೊಂಡರು.






