ಎಟಿಪಿ ರ್ಯಾಂಕಿಂಗ್ಸ್: ಜೊಕೊವಿಕ್ ರನ್ನು ಹಿಂದಿಕ್ಕಿ 6ನೇ ಸ್ಥಾನಕ್ಕೇರಿದ ಶೆಲ್ಟನ್

ಬೆನ್ ಶೆಲ್ಟನ್ | PC : X \ @ROLEX
ಟೊರಾಂಟೊ, ಆ.8: ಕೆನಡಿಯನ್ ಓಪನ್ ಟೆನಿಸ್ ಟೂರ್ನಿಯಲ್ಲಿ ಪುರುಷರ ಸಿಂಗಲ್ಸ್ ಪ್ರಶಸ್ತಿಯನ್ನು ಗೆದ್ದ ನಂತರ ಶುಕ್ರವಾರ ಬಿಡುಗಡೆಯಾಗಿರುವ ಎಟಿಪಿ ರ್ಯಾಂಕಿಂಗ್ಸ್ ನಲ್ಲಿ ನೊವಾಕ್ ಜೊಕೊವಿಕ್ ರನ್ನು ಹಿಂದಿಕ್ಕಿದ ಅಮೆರಿಕದ ಆಟಗಾರ ಬೆನ್ ಶೆಲ್ಟನ್ ಆರನೇ ಸ್ಥಾನಕ್ಕೇರುವ ಮೂಲಕ ಜೀವನಶ್ರೇಷ್ಠ ಸಾಧನೆ ಮಾಡಿದ್ದಾರೆ.
22ರ ಹರೆಯದ ಶೆಲ್ಟನ್ ಅವರು ರಶ್ಯದ ಕರೆನ್ ಖಚನೋವ್ ರನ್ನು 6-7(5), 6-4, 7-6(3) ಸೆಟ್ ಗಳ ಅಂತರದಿಂದ ಮಣಿಸಿ ಎರಡು ದಶಕಗಳ ನಂತರ ಮಾಸ್ಟರ್ಸ್-1000 ಪ್ರಶಸ್ತಿಯನ್ನು ಗೆದ್ದಿರುವ ಅಮೆರಿಕದ ಯುವ ಆಟಗಾರನೆಂಬ ಹಿರಿಮೆಗೆ ಪಾತ್ರರಾದರು.
ವಿಂಬಲ್ಡನ್ ಚಾಂಪಿಯನ್ ಶಿಪ್ ನಲ್ಲಿ ಇಟಲಿಯ ಜನ್ನಿಕ್ ಸಿನ್ನರ್ ಎದುರು ಸೋತ ನಂತರ ವಿಶ್ವದ ಮಾಜಿ ನಂ.1 ಆಟಗಾರ ಜೊಕೊವಿಕ್ ಸಕ್ರಿಯ ಟೆನಿಸ್ ನಿಂದ ದೂರ ಉಳಿದಿದ್ದರು.
ವಿಶ್ವದ ನಂ.3ನೇ ಆಟಗಾರ ಅಲೆಕ್ಸಾಂಡರ್ ಝ್ವೆರವ್ ರನ್ನು ಸೋಲಿಸಿ ತನ್ನ ವೃತ್ತಿಜೀವನದಲ್ಲಿ ಎರಡನೇ ಬಾರಿ ಮಾಸ್ಟರ್ಸ್-1000 ಟೂರ್ನಿಯಲ್ಲಿ ಫೈನಲ್ ಗೆ ತಲುಪಿರುವ ಖಚನೋವ್ ಇದೀಗ ರ್ಯಾಂಕಿಂಗ್ ನಲ್ಲಿ 4 ಸ್ಥಾನ ಭಡ್ತಿ ಪಡೆದು 12ನೇ ಸ್ಥಾನ ತಲುಪಿದ್ದಾರೆ. 2023ರ ಆಗಸ್ಟ್ ನಂತರ ಗರಿಷ್ಠ ರ್ಯಾಂಕಿಂಗ್ ತಲುಪಿದ್ದಾರೆ.
ಕ್ವಾರ್ಟರ್ ಫೈನಲ್ ನಲ್ಲಿ ಝ್ವೆರೆವ್ ಗೆ ಸೋತ ನಂತರ ತನ್ನ ಪ್ರಶಸ್ತಿಯನ್ನು ಉಳಿಸಿಕೊಳ್ಳುವಲ್ಲಿ ವಿಫಲವಾದ ಹೊರತಾಗಿಯೂ ಅಲೆಕ್ಸಿ ಪೊಪಿರಿನ್ 7 ಸ್ಥಾನ ಭಡ್ತಿ ಪಡೆದು 19ನೇ ಸ್ಥಾನ ತಲುಪಿದ್ದಾರೆ. 26ರ ಹರೆಯದ ಆಸ್ಟ್ರೇಲಿಯದ ಆಟಗಾರ ಮೊದಲ ಬಾರಿ ಟಾಪ್-20ರಲ್ಲಿ ಸ್ಥಾನ ಪಡೆದಿದ್ದಾರೆ.
►ಟಾಪ್-10 ರ್ಯಾಂಕಿಂಗ್
1.ಜನ್ನಿಕ್ ಸಿನ್ನರ್(ಇಟಲಿ)
2.ಕಾರ್ಲೊಸ್ ಅಲ್ಕರಾಝ್(ಸ್ಪೇನ್)
3. ಅಲೆಕ್ಸಾಂಡರ್ ಝ್ವೆರೆವ್(ಜರ್ಮನಿ)
4. ಟೇಲರ್ ಫ್ರಿಟ್ಝ್(ಅಮೆರಿಕ)
5. ಜೇಕ್ ಡ್ರಾಪೆರ್(ಬ್ರಿಟನ್)
6. ಬೆನ್ ಶೆಲ್ಟನ್(ಅಮೆರಿಕ)
7. ನೊವಾಕ್ ಜೊಕೊವಿಕ್(ಸರ್ಬಿಯ)
8. ಅಲೆಕ್ಸ್ ಡಿ ಮಿನೌರ್(ಆಸ್ಟ್ರೇಲಿಯ)
9. ಹೊಲ್ಗರ್ ರೂನ್(ಡೆನ್ಮಾರ್ಕ್)
10. ಲೊರೆಂರೊ ಮುಸೆಟ್ಟಿ(ಇಟಲಿ)







