ಎಟಿಪಿ ರ್ಯಾಂಕಿಂಗ್: ಅಗ್ರ 2 ಸ್ಥಾನ ಕಾಯ್ದುಕೊಂಡ ಸಿನ್ನರ್, ಅಲ್ಕರಾಝ್

Photo: X.com/@Eurosport_IT
ಪ್ಯಾರಿಸ್, ಜು.14: ವಿಂಬಲ್ಡನ್ ಫೈನಲ್ ನಲ್ಲಿ ಪರಸ್ಪರ ಸ್ಪರ್ಧಿಸಿದ ನಂತರ ಸೋಮವಾರ ಬಿಡುಗಡೆಯಾಗಿರುವ ಹೊಸ ಎಟಿಪಿ ರ್ಯಾಂಕಿಂಗ್ನಲ್ಲಿ ಜನ್ನಿಕ್ ಸಿನ್ನರ್ ಹಾಗೂ ಕಾರ್ಲೊಸ್ ಅಲ್ಕರಾಝ್ ಅಗ್ರ-2 ಸ್ಥಾನದಲ್ಲಿ ಮುಂದುವರಿದಿದ್ದಾರೆ.
ಇಟಲಿಯ ಆಟಗಾರ ಸಿನ್ನರ್ ಎರಡು ಬಾರಿಯ ಹಾಲಿ ಚಾಂಪಿಯನ್ ಅಲ್ಕರಾಝ್ರನ್ನು 4-6, 6-4,6-4, 6-4 ಸೆಟ್ಗಳ ಅಂತರದಿಂದ ಮಣಿಸಿ ವಿಂಬಲ್ಡನ್ ಟೆನಿಸ್ ಟೂರ್ನಿಯಲ್ಲಿ ಮೊತ್ತ ಮೊದಲ ಬಾರಿ ಪ್ರಶಸ್ತಿ ಜಯಿಸಿದರು.
23ರ ಹರೆಯದ ಸಿನ್ನರ್ ಅವರು 1990ರ ಬಳಿಕ ರೋಜರ್ ಫೆಡರರ್, ರಫೆಲ್ ನಡಾಲ್, ನೊವಾಕ್ ಜೊಕೊವಿಕ್ ಹಾಗೂ ಆ್ಯಂಡಿ ಮರ್ರೆಯ ನಂತರ 12,000 ರ್ಯಾಂಕಿಂಗ್ ಪಾಯಿಂಟ್ಸ್ ಪಡೆದಿರುವ 5ನೇ ಆಟಗಾರನಾಗಿದ್ದಾರೆ. ಇದೀಗ ಸಿನ್ನರ್ ಅವರು ಅಲ್ಕರಾಝ್ಗಿಂತ 3,430 ರ್ಯಾಂಕಿಂಗ್ ಪಾಯಿಂಟ್ಸ್ ಗಳಿಂದ ಮುಂದಿದ್ದಾರೆ.
ಸೆಮಿ ಫೈನಲ್ ನಲ್ಲಿ ಅಲ್ಕರಾಝ್ ಗೆ ಸೋತಿದ್ದ ಅಮೆರಿಕದ ಟೇಲರ್ ಫ್ರಿಟ್ಝ್ ಅವರು 4ನೇ ಸ್ಥಾನಕ್ಕೇರಿ ಮತ್ತೊಮ್ಮೆ ಜೀವನಶ್ರೇಷ್ಠ ಸಾಧನೆ ಮಾಡಿದರು. 2ನೇ ಸುತ್ತಿನಲ್ಲಿ ಮಾಜಿ ರನ್ನರ್ ಅಪ್ ಮರಿನ್ ಸಿಲಿಕ್ಗೆ ಸೋತಿದ್ದ ಬ್ರಿಟನ್ನ ಜಾಕ್ ಡ್ರಾಪರ್ 5ನೇ ಸ್ಥಾನಕ್ಕೆ ಕುಸಿದಿದ್ದಾರೆ.
ಅಮೆರಿಕದ ಉದಯೋನ್ಮುಖ ಆಟಗಾರ ಬೆನ್ ಶೆಲ್ಟನ್ ವಿಂಬಲ್ಡನ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್ ತನಕ ತಲುಪಿ, 9ನೇ ಸ್ಥಾನಕ್ಕೇರಿ ಜೀವನಶ್ರೇಷ್ಠ ಸಾಧನೆ ಮಾಡಿದರು. ವಿಂಬಲ್ಡನ್ನಲ್ಲಿ 4ನೇ ಸುತ್ತು ತಲುಪಿದ್ದ ಆಂಡ್ರೆ ರುಬ್ಲೇವ್ ಅಗ್ರ-10ಕ್ಕೆ ಮರಳಿದ್ದಾರೆ.
ಟಾಪ್-10(ರ್ಯಾಂಕಿಂಗ್ ಪಾಯಿಂಟ್ಸ್ಸ್ ಸಹಿತ)
1.ಜನ್ನಿಕ್ ಸಿನ್ನರ್(ಇಟಲಿ)-12,030
2.ಕಾರ್ಲೊಸ್ ಅಲ್ಕರಾಝ್(ಸ್ಪೇನ್)-8,600
3.ಅಲೆಕ್ಸಾಂಡರ್ ಝ್ವೆರೆವ್(ಜರ್ಮನಿ)-6,310
4.ಟೇಲರ್ ಫ್ರಿಟ್ಝ್(ಅಮೆರಿಕ)-5,035
5.ಜಾಕ್ ಡ್ರೇಪರ್(ಬ್ರಿಟನ್)-4,650
6. ನೊವಾಕ್ ಜೊಕೊವಿಕ್(ಸರ್ಬಿಯ)-4,130
7.ಲೊರೆಂರೊ ಮುಸೆಟ್ಟಿ(ಇಟಲಿ)-3,350
8. ಹೋಲ್ಗರ್ ರೂನ್(ಡೆನ್ಮಾರ್ಕ್)-3,340
9. ಬೆನ್ ಶೆಲ್ಟನ್(ಅಮೆರಿಕ)-3,330
10. ಆಂಡ್ರೆ ರುಬ್ಲೆವ್-3,110







