ಮೂರನೇ ಟೆಸ್ಟ್ | ಇಂಗ್ಲೆಂಡ್ ವಿರುದ್ಧ 82 ರನ್ ಗೆಲುವು: ಆ್ಯಶಸ್ ಕಪ್ ತನ್ನಲ್ಲೇ ಉಳಿಸಿಕೊಂಡ ಆಸ್ಟ್ರೇಲಿಯ ತಂಡ

Photo : PTI
ಅಡಿಲೇಡ್: ಅಡಿಲೇಡ್ ಓವಲ್ ನಲ್ಲಿ ರವಿವಾರ ಕೊನೆಗೊಂಡಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು 82 ರನ್ ಗಳಿಂದ ಮಣಿಸಿರುವ ಆಸ್ಟ್ರೇಲಿಯ ಕ್ರಿಕೆಟ್ ತಂಡವು ಇನ್ನೂ ಎರಡು ಪಂದ್ಯಗಳು ಬಾಕಿ ಇರುವಾಗಲೇ ಪ್ರತಿಷ್ಠಿತ ಆ್ಯಶಸ್ ಕಪ್ ಅನ್ನು ತನ್ನಲ್ಲೇ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಗೆಲ್ಲಲು ವಿಶ್ವ ದಾಖಲೆಯ 435 ರನ್ ಗುರಿ ಪಡೆದಿದ್ದ ಇಂಗ್ಲೆಂಡ್ ತಂಡ ಐದನೇ ದಿನವಾದ ರವಿವಾರ 352 ರನ್ ಗಳಿಸಿ ಆಲೌಟಾಯಿತು. ಎಡಗೈ ವೇಗಿ ಮಿಚೆಲ್ ಸ್ಟಾರ್ಕ್(3-62) ರವಿವಾರ ಮೂರು ವಿಕೆಟ್ಗಳನ್ನು ಉರುಳಿಸಿದ್ದು, ಭೋಜನ ವಿರಾಮಕ್ಕೆ ಮೊದಲು ಜೋಶ್ ಟಾಂಗ್(1 ರನ್) ಅವರ ವಿಕೆಟನ್ನು ಪಡೆದ ಸ್ಕಾಟ್ ಬೋಲ್ಯಾಂಡ್(1-35) ಇಂಗ್ಲೆಂಡ್ ಇನಿಂಗ್ಸ್ ಗೆ ತೆರೆ ಎಳೆದರು.
ನಾಯಕ ಪ್ಯಾಟ್ ಕಮಿನ್ಸ್(3-48) ಹಾಗೂ ಸ್ಪಿನ್ನರ್ ನಾಥನ್ ಲಿಯೊನ್(3-77)ತಲಾ ಮೂರು ವಿಕೆಟ್ಗಳನ್ನು ಉರುಳಿಸಿ ಇಂಗ್ಲೆಂಡ್ ತಂಡಕ್ಕೆ ಸೋಲಿನ ಕಹಿ ಉಣಿಸಿದರು.
‘‘ಹಲವು ಕಾರಣಗಳಿಂದಾಗಿ ಈ ಗೆಲುವು ತೃಪ್ತಿಕರವಾಗಿದೆ. ಸರಣಿಗಿಂತ ಮೊದಲೇ ನಾವು ಮಾತುಕತೆ ನಡೆಸಿದ್ದು, ಅದರಂತೆ ಎಲ್ಲವೂ ನಡೆದಿದೆ’’ಎಂದು ಬೆನ್ನುನೋವಿನಿಂದ ಚೇತರಿಸಿಕೊಂಡು ಮೂರನೇ ಟೆಸ್ಟ್ ಪಂದ್ಯದ ಮೂಲಕ ಆಸ್ಟ್ರೇಲಿಯ ತಂಡಕ್ಕೆ ವಾಪಸಾಗಿ ಆರು ವಿಕೆಟ್ ಗಳನ್ನು ಪಡೆದಿದ್ದ ನಾಯಕ ಪ್ಯಾಟ್ ಕಮಿನ್ಸ್ ಸುದ್ದಿಗಾರರಿಗೆ ತಿಳಿಸಿದರು.
ಪರ್ತ್ ಹಾಗೂ ಬ್ರಿಸ್ಬೇನ್ ನಲ್ಲಿ ನಡೆದಿರುವ ಮೊದಲೆರಡು ಟೆಸ್ಟ್ ಪಂದ್ಯಗಳನ್ನು 8 ವಿಕೆಟ್ ಗಳ ಅಂತರದಿಂದ ಸೋತಿದ್ದ ಇಂಗ್ಲೆಂಡ್ ತಂಡವು ಇದೀಗ ಸತತ ನಾಲ್ಕನೇ ಆಸ್ಟ್ರೇಲಿಯ ಪ್ರವಾಸದಲ್ಲಿ ಮೂರು ಆ್ಯಶಸ್ ಪಂದ್ಯಗಳನ್ನು ಸೋತಿದೆ. ಕಾಂಗರೂ ನಾಡಿನಲ್ಲಿ ಆಡಿರುವ 18 ಟೆಸ್ಟ್ ಪಂದ್ಯಗಳ ಪೈಕಿ 16ನೇ ಸೋಲು ಕಂಡು ಕಳಪೆ ಪ್ರದರ್ಶನ ಮುಂದುವರಿಸಿದೆ.
‘‘ಆಕ್ರಮಣಕಾರಿ ಬ್ಯಾಟಿಂಗ್ ಮೂಲಕ ಇಂಗ್ಲೆಂಡ್ ತಂಡವು 2010-11ರ ನಂತರ ಮೊದಲ ಬಾರಿ ಆಸ್ಟ್ರೇಲಿಯದಲ್ಲಿ ಆ್ಯಶಸ್ ಕಪ್ ಗೆಲ್ಲಲಿದೆ’’ ಎಂದು ನಾಯಕ ಬೆನ್ ಸ್ಟೋಕ್ಸ್ ಸರಣಿಗಿಂತ ಮೊದಲು ವಿಶ್ವಾಸದ ಮಾತುಗಳನ್ನಾಡಿದ್ದರು.
‘‘ನಾವು ಗುರಿ ಇಟ್ಟುಕೊಂಡು ಇಲ್ಲಿಗೆ ಬಂದಿದ್ದೆವು. ಆದರೆ ಅದನ್ನು ಸಾಧಿಸಲು ಅಸಮರ್ಥರಾಗಿದ್ದೇವೆ. ಇದು ನಮಗೆ ತುಂಬಾ ನೋವುಂಟು ಮಾಡಿದೆ’’ ಎಂದು ಇಂಗ್ಲೆಂಡ್ ನಾಯಕ ಸ್ಟೋಕ್ಸ್ ಹೇಳಿದ್ದಾರೆ.
ಐದನೇ ದಿನವಾದ ರವಿವಾರ ಇಂಗ್ಲೆಂಡ್ ತಂಡಕ್ಕೆ 3ನೇ ಟೆಸ್ಟ್ ಪಂದ್ಯದ ಗೆಲುವಿಗೆ 228 ರನ್ ಅಗತ್ಯವಿತ್ತು. 6 ವಿಕೆಟ್ಗಳ ನಷ್ಟಕ್ಕೆ 207 ರನ್ನಿಂದ ಬ್ಯಾಟಿಂಗ್ ಮುಂದುವರಿಸಿದ ಇಂಗ್ಲೆಂಡ್ ತಂಡಕ್ಕೆ ಆಲ್ ರೌಂಡರ್ ವಿಲ್ ಜಾಕ್ಸ್ ಹಾಗೂ ವಿಕೆಟ್ ಕೀಪರ್ ಜಮೀ ಸ್ಮಿತ್ ಆಶಾಕಿರಣವಾಗಿದ್ದರು.
ಜಾಕ್ಸ್ ಹಾಗೂ ಸ್ಮಿತ್ ಏಳನೇ ವಿಕೆಟ್ಗೆ 177 ಎಸೆತಗಳಲ್ಲಿ 91 ರನ್ ಜೊತೆಯಾಟದಲ್ಲಿ ಭಾಗಿಯಾದರು. ಎರಡನೇ ಹೊಸ ಚೆಂಡಿನಲ್ಲಿ ಸ್ಮಿತ್ ಮುನ್ನುಗ್ಗಿ ಆಡಿದ್ದು, ಪ್ಯಾಟ್ ಕಮಿನ್ಸ್ ಹಾಗೂ ಸ್ಟಾರ್ಕ್ ಬೌಲಿಂಗ್ನಲ್ಲಿ ಸತತ ಬೌಂಡರಿ ಗಳಿಸಿದರು.
ಇಂಗ್ಲೆಂಡ್ ಗೆಲುವಿಗೆ 150 ರನ್ ಅಗತ್ಯವಿದ್ದಾಗ ಸ್ಮಿತ್(60 ರನ್,83 ಎಸೆತ, 7 ಬೌಂಡರಿ, 2 ಸಿಕ್ಸರ್) ಅವರು ಸತತ ಮೂರನೇ ಬಾರಿ ಸ್ಟಾರ್ಕ್ಗೆ ವಿಕೆಟ್ ಒಪ್ಪಿಸಿದರು. 137 ಎಸೆತಗಳಲ್ಲಿ 47 ರನ್ ಗಳಿಸಿದ ಆಲ್ರೌಂಡರ್ ಜಾಕ್ಸ್ ಬಾಲಂಗೋಚಿ ಕಾರ್ಸ್(ಔಟಾಗದೆ 39, 64 ಎಸೆತ)ಜೊತೆಗೂಡಿ 8ನೇ ವಿಕೆಟ್ಗೆ 87 ಎಸೆತಗಳಲ್ಲಿ 52 ರನ್ ಸೇರಿಸಿ ಹೋರಾಟ ಮುಂದುವರಿಸಿದರು. ಜಾಕ್ಸ್ ವಿಕೆಟನ್ನು ಉರುಳಿಸಿದ ಸ್ಟಾರ್ಕ್ ಈ ಜೋಡಿಯನ್ನು ಬೇರ್ಪಡಿಸಿದರು.
ಆಸ್ಟ್ರೇಲಿಯದ ವಿಕೆಟ್ಕೀಪರ್ ಅಲೆಕ್ಸ್ ಕ್ಯಾರಿ ಮೊದಲ ಇನಿಂಗ್ಸ್ನಲ್ಲಿ 106 ಹಾಗೂ ಎರಡನೇ ಇನಿಂಗ್ಸ್ನಲ್ಲಿ 72 ರನ್ ಗಳಿಸಿದ ಹಿನ್ನೆಲೆಯಲ್ಲಿ ‘ಪಂದ್ಯಶ್ರೇಷ್ಠ’ ಪ್ರಶಸ್ತಿ ಪಡೆದರು. ಟ್ರಾವಿಸ್ ಹೆಡ್ ಅವರು ಮೂರನೇ ಇನಿಂಗ್ಸ್ನಲ್ಲಿ 170 ರನ್ ಗಳಿಸಿದ್ದು ಅಡಿಲೇಡ್ ಓವಲ್ನಲ್ಲಿ ಸತತ ನಾಲ್ಕನೇ ಟೆಸ್ಟ್ ಶತಕ ಗಳಿಸಿ ಗಮನ ಸೆಳೆದರು.







