ಆಸ್ಟ್ರೇಲಿಯ ವಿರುದ್ಧ ಏಕದಿನ ಸರಣಿಯಿಂದ ಜೆಮಿಮಾ ಔಟ್

ಜೆಮಿಮಾ ರೊಡ್ರಿಗಸ್ | PC : X
ನ್ಯೂ ಚಂಡಿಗಡ, ಸೆ.17: ಭಾರತೀಯ ಮಹಿಳೆಯರ ಕ್ರಿಕೆಟ್ ತಂಡಕ್ಕೆ ದೊಡ್ಡ ಹಿನ್ನಡೆವುಂಟಾಗಿದ್ದು, ಮಧ್ಯಮ ಸರದಿಯ ಬ್ಯಾಟರ್ ಜೆಮಿಮಾ ರೊಡ್ರಿಗಸ್ ವೈರಲ್ ಸೋಂಕು ಹಾಗೂ ನಿಶ್ಶಕ್ತಿಯಿಂದಾಗಿ ಆಸ್ಟ್ರೇಲಿಯ ತಂಡದ ವಿರುದ್ಧ ಕೊನೆಯ ಎರಡು ಏಕದಿನ ಪಂದ್ಯಗಳಿಂದ ಹೊರಗುಳಿದಿದ್ದಾರೆ.
ಮೀಸಲು ಆಟಗಾರ್ತಿಯಾಗಿದ್ದ ತೇಜಲ್ ಹಸಬ್ನಿಸ್ ಅವರು ಜೆಮಿಮಾ ಬದಲಿಗೆ ಭಾರತದ ಮಹಿಳಾ ತಂಡವನ್ನು ಸೇರಿದ್ದಾರೆ. 28ರ ಹರೆಯದ ತೇಜಲ್ ಈ ತನಕ 6 ಏಕದಿನ ಪಂದ್ಯಗಳನ್ನು ಆಡಿದ್ದು, 46.66ರ ಸರಾಸರಿಯಲ್ಲಿ 140 ರನ್ ಗಳಿಸಿದ್ದಾರೆ.
ಮುಲ್ಲನ್ಪುರದಲ್ಲಿ ನಡೆದಿದ್ದ ಮೊದಲ ಏಕದಿನ ಪಂದ್ಯವನ್ನು 6 ವಿಕೆಟ್ಗಳಿಂದ ಸೋತಿರುವ ಭಾರತ ತಂಡವು ಸದ್ಯ ಸರಣಿಯಲ್ಲಿ 0-1ರಿಂದ ಹಿನ್ನಡೆಯಲ್ಲಿದೆ. ಬುಧವಾರ 2ನೇ ಪಂದ್ಯ ನಡೆಯಲಿದೆ.
ಮೊದಲ ಏಕದಿನ ಪಂದ್ಯದಲ್ಲಿ ಜೆಮಿಮಾ 26 ಎಸೆತಗಳಲ್ಲಿ 18 ರನ್ ಗಳಿಸಿ ಔಟಾಗಿದ್ದರು. ಆ ನಂತರ ಆಸ್ಟ್ರೇಲಿಯದ ಓಪನರ್ಲಿಚ್ಫೀಲ್ಡ್ ನೀಡಿದ್ದ ಕ್ಯಾಚನ್ನು ಕೈಬಿಟ್ಟಿದ್ದರು. ಇದರ ಲಾಭ ಪಡೆದ ಲಿಚ್ಫೀಲ್ಡ್ 88 ರನ್ ಗಳಿಸಿದ್ದರು.
25ರ ಹರೆಯದ ಮುಂಬೈಕರ್ ಜೆಮಿಮಾ ಸೆ.30ರಂದು ಭಾರತ ಹಾಗೂ ಶ್ರೀಲಂಕಾದ ನಡುವೆ ಗುವಾಹಟಿಯಲ್ಲಿ ನಡೆಯಲಿರುವ ಮಹಿಳೆಯರ ಏಕದಿನ ವಿಶ್ವಕಪ್ ಪಂದ್ಯದ ವೇಳೆಗೆ ಚೇತರಿಸಿಕೊಳ್ಳುವ ನಿರೀಕ್ಷೆ ಇದೆ.





