ಎರಡನೇ ಆ್ಯಶಸ್ ಟೆಸ್ಟ್ | ಆಸ್ಟ್ರೇಲಿಯ ತಂಡದಲ್ಲಿ ಕಮಿನ್ಸ್, ಹೇಝಲ್ ವುಡ್ ಗೆ ಸ್ಥಾನವಿಲ್ಲ

Photo Credit : PTI
ಸಿಡ್ನಿ, ನ.28: ಬ್ರಿಸ್ಬೇನ್ ನಲ್ಲಿ ಡಿಸೆಂಬರ್ 4ರಿಂದ ಹಗಲು-ರಾತ್ರಿ ನಡೆಯಲಿರುವ ಎರಡನೇ ಆ್ಯಶಸ್ ಟೆಸ್ಟ್ ಪಂದ್ಯಕ್ಕೆ ಆಸ್ಟ್ರೇಲಿಯ ಕ್ರಿಕೆಟ್ ತಂಡವನ್ನು ಶುಕ್ರವಾರ ಪ್ರಕಟಿಸಲಾಗಿದೆ. ನಾಯಕ ಪ್ಯಾಟ್ ಕಮಿನ್ಸ್ ತಂಡದಲ್ಲಿ ಸ್ಥಾನ ಪಡೆದಿಲ್ಲ.
ವೇಗದ ಬೌಲರ್ ಬೆನ್ನುನೋವಿನಿಂದ ಚೇತರಿಸಿಕೊಳ್ಳುತ್ತಿದ್ದು ತನ್ನ ತಯಾರಿಯನ್ನು ಮುಂದುವರಿಸಲು ಬ್ರಿಸ್ಬೇನ್ ಗೆ ಪ್ರಯಾಣಿಸಲಿದ್ದಾರೆ ಎಂದು ಕ್ರಿಕೆಟ್ ಆಸ್ಟ್ರೇಲಿಯ ಶುಕ್ರವಾರ ತಿಳಿಸಿದೆ.
ಕಮಿನ್ಸ್ ಅವರು ಪರ್ತ್ನಲ್ಲಿ ನಡೆದಿದ್ದ ಮೊದಲ ಟೆಸ್ಟ್ ಪಂದ್ಯದಿಂದ ವಂಚಿತರಾಗಿದ್ದರು. ಆ ಪಂದ್ಯವನ್ನು ಆಸ್ಟ್ರೇಲಿಯ ತಂಡವು ಎರಡು ದಿನದೊಳಗೆ ಗೆದ್ದುಕೊಂಡಿತ್ತು. ಇತ್ತೀಚೆಗೆ ನೆಟ್ ಪ್ರಾಕ್ಟೀಸ್ ವೇಳೆ ಸಂಪೂರ್ಣ ವೇಗದಲ್ಲಿ ಬೌಲಿಂಗ್ ಮಾಡಿರುವ ಕಮಿನ್ಸ್ ಫಿಟ್ನೆಸ್ ಗೆ ಮರಳುವ ಹಾದಿಯಲ್ಲಿದ್ದಾರೆ.
ಆಸ್ಟ್ರೇಲಿಯದ ಇನ್ನೋರ್ವ ವೇಗದ ಬೌಲರ್ ಜೋಶ್ ಹೇಝಲ್ ವುಡ್ ತಂಡದಲ್ಲಿ ಸೇರ್ಪಡೆಯಾಗಿಲ್ಲ. ನಿರೀಕ್ಷೆಯಂತೆಯೆ ಅವರು ಮಂಡಿರಜ್ಜು ಸಮಸ್ಯೆಯಿಂದ ಚೇತರಿಸಿಕೊಳ್ಳುತ್ತಿದ್ದಾರೆ.
ಮೊದಲ ಟೆಸ್ಟ್ ಪಂದ್ಯವನ್ನಾಡಿರುವ 14 ಸದಸ್ಯರನ್ನು ಒಳಗೊಂಡ ಆಸ್ಟ್ರೇಲಿಯ ಕ್ರಿಕೆಟ್ ತಂಡವನ್ನೇ ಮುಂದುವರಿಸಲಾಗಿದ್ದು, ಸ್ಟೀವ್ ಸ್ಮಿತ್ ನಾಯಕನಾಗಿದ್ದಾರೆ. ಕಳಪೆ ಫಾರ್ಮ್ನಿಂದಾಗಿ ಒತ್ತಡದಲ್ಲಿರುವ ಉಸ್ಮಾನ್ ಖ್ವಾಜಾ ತನ್ನ ಸ್ಥಾನ ಉಳಿಸಿಕೊಂಡಿದ್ದಾರೆ.
ಇಂಗ್ಲೆಂಡ್ ತಂಡವು ಗುರುವಾರ ಬ್ರಿಸ್ಬೇನ್ ಗೆ ಆಗಮಿಸಿದೆ. ಆಡುವ 11ರ ಬಳಗವು ಪಿಂಕ್-ಬಾಲ್ ಪಂದ್ಯಕ್ಕಾಗಿ ಅಭ್ಯಾಸ ನಡೆಸುತ್ತಿದೆ.
*ಆಸ್ಟ್ರೇಲಿಯ ತಂಡ: ಸ್ಟೀವ್ ಸ್ಮಿತ್(ನಾಯಕ), ಸ್ಕಾಟ್ ಬೋಲ್ಯಾಂಡ್, ಅಲೆಕ್ಸ್ ಕ್ಯಾರಿ, ಬ್ರೆಂಡನ್ ಡೊಗೆಟ್, ಕ್ಯಾಮರೂನ್ ಗ್ರೀನ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಉಸ್ಮಾನ್ ಖ್ವಾಜಾ, ಮಾರ್ನಸ್ ಲ್ಯಾಬುಶೇನ್, ನಾಥನ್ ಲಿಯೊನ್, ಮೈಕಲ್ ನೆಸೆರ್, ಮಿಚೆಲ್ ಸ್ಟಾರ್ಕ್, ಜೇಕ್ ವೆದರಾಲ್ಡ್, ಬೀಯು ವೆಬ್ಸ್ಟರ್.







