ನಾಳೆ ಆಸ್ಟ್ರೇಲಿಯ-ಅಫ್ಘಾನಿಸ್ತಾನ ಹಣಾಹಣಿ

Photo : PTI
ಮುಂಬೈ: ಅಫ್ಘಾನಿಸ್ತಾನ ತಂಡ ಮಂಗಳವಾರ ನಡೆಯಲಿರುವ ಕ್ರಿಕೆಟ್ ವಿಶ್ವಕಪ್ ನ ಲೀಗ್ ಹಂತದಲ್ಲಿ ತನ್ನ 8ನೇ ಪಂದ್ಯದಲ್ಲಿ ಆಸ್ಟ್ರೇಲಿಯ ತಂಡವನ್ನು ಎದುರಿಸಲಿದೆ. ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿರುವ ಆಸ್ಟ್ರೇಲಿಯವು ಸೆಮಿ ಫೈನಲ್ ತಲುಪುವ ಹಾದಿಯಲ್ಲಿದೆ.
ಟೂರ್ನಿಯ ಮೊದಲೆರಡು ಪಂದ್ಯಗಳಲ್ಲಿ ಸೋತಿದ್ದ ಆಸೀಸ್ ಆ ನಂತರ ಸತತ 5 ಪಂದ್ಯಗಳಲ್ಲಿ ಜಯ ಸಾಧಿಸಿ ಅದ್ಭುತ ಪ್ರತಿಹೋರಾಟ ನೀಡಿದೆ. ಇತ್ತೀಚೆಗೆ ಇಂಗ್ಲೆಂಡ್ ವಿರುದ್ಧ 33 ರನ್ ಗಳ ಜಯ ಸಾಧಿಸಿತ್ತು.
ಪಂದ್ಯವು ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿದ್ದು, ಕೆಲವು ಚಿತ್ತಾಕರ್ಷಕ ಪ್ರದರ್ಶನದ ಮೂಲಕ ಅಫ್ಘಾನ್ ಕ್ರಿಕೆಟ್ ತಂಡ ನಿರೀಕ್ಷೆಗೂ ಮೀರಿ ಆಡುತ್ತಿದೆ. 7 ಪಂದ್ಯಗಳ ಪೈಕಿ 4ರಲ್ಲಿ ಜಯ ಸಾಧಿಸಿದೆ. ಸೆಮಿ ಫೈನಲ್ ತಲುಪುವ ಅಲ್ಪ ಅವಕಾಶವನ್ನು ಹೊಂದಿದೆ. ಹಿಂದಿನ ಪಂದ್ಯದಲ್ಲಿ ನೆದರ್ಲ್ಯಾಂಡ್ಸ್ ತಂಡವನ್ನು 7 ವಿಕೆಟ್ಗಳಿಂದ ಮಣಿಸಿದ್ದ ಅಫ್ಘಾನ್ ತಂಡ ಸತತ ಮೂರನೇ ಗೆಲುವು ದಾಖಲಿಸಿತ್ತು.
ಮುಹಮ್ಮದ್ ನಬಿ(2-28) ಹಾಗೂ ನಾಯಕ ಹಶ್ಮತುಲ್ಲಾ ಶಾಹಿದಿ(ಔಟಾಗದೆ 56, 64 ಎಸೆತ)ಕ್ರಮವಾಗಿ ಬೌಲಿಂಗ್ ಹಾಗೂ ಬ್ಯಾಟಿಂಗ್ ನಲ್ಲಿ ಮಿಂಚಿದ್ದರು.
ಆಸೀಸ್ ವಿರುದ್ಧದ ಪಂದ್ಯಕ್ಕಿಂತ ಮೊದಲು ಅಫ್ಘಾನ್ ತಂಡ ತನ್ನ ತಂಡದಲ್ಲಿ ಯಾವುದೇ ಪ್ರಯೋಗ ಮಾಡುವ ಸಾಧ್ಯತೆಯಿಲ್ಲ. ಕಳೆದ ಪಂದ್ಯದಲ್ಲಿ ಆಡಿರುವ ತಂಡವನ್ನೇ ಕಣಕ್ಕಿಳಿಸುವ ಸಾಧ್ಯತೆಯಿದೆ.
ಅಫ್ಘಾನಿಸ್ತಾನದ ಆರಂಭಿಕ ಬ್ಯಾಟರ್ ರಹಮಾನುಲ್ಲಾ ಗುರ್ಬಾಜ್ ವಿಶ್ವಕಪ್ ನಲ್ಲಿ 2 ಅರ್ಧಶತಕಗಳ ಸಹಿತ 234 ರನ್ ಗಳಿಸಿದ್ದಾರೆ. ನಿರ್ಣಾಯಕ ಹಂತದಲ್ಲಿ ಜೊತೆಯಾಟ ನಡೆಸುತ್ತಿದ್ದಾರೆ. ಗುರ್ಬಾಝ್ ರ ಆರಂಭಿಕ ಜೊತೆಗಾರ ಇಬ್ರಾಹೀಂ ಝದ್ರಾನ್ ಒಟ್ಟು 232 ರನ್ ಗಳಿಸಿದ್ದಾರೆ. ಒತ್ತಡದ ಪರಿಸ್ಥಿತಿಯನ್ನು ನಿಭಾಯಿಸುವ ಸಾಮರ್ಥ್ಯವಿರುವ ಝದ್ರಾನ್ ಅಫ್ಘಾನ್ ಬ್ಯಾಟಿಂಗ್ ಸರದಿಗೆ ಆಧಾರವಾಗಿದ್ದಾರೆ.
ರಹಮತ್ ಶಾ ಕ್ರಿಕೆಟ್ ವಿಶ್ವಕಪ್ ನಲ್ಲಿ 264 ರನ್ ಗಳಿಸಿ ಸ್ಥಿರ ಪ್ರದರ್ಶನ ನೀಡುತ್ತಾ ಮಧ್ಯಮ ಸರದಿಗೆ ಶಕ್ತಿ ತುಂಬುತ್ತಿದ್ದಾರೆ. ನಾಯಕ, ಮಧ್ಯಮ ಕ್ರಮಾಂಕದ ಬ್ಯಾಟರ್ ಶಾಹಿದಿ 7 ಪಂದ್ಯಗಳಲ್ಲಿ 282 ರನ್ ಗಳಿಸಿದ್ದಾರೆ. ಇಂಗ್ಲೆಂಡ್ ವಿರುದ್ಧ 58 ರನ್ ಗಳಿಸಿದ್ದ ವಿಕೆಟ್ಕೀಪರ್-ಬ್ಯಾಟರ್ ಇಕ್ರಂ ಅಲಿಖಿಲ್ ವಿಕೆಟ್ಕೀಪಿಂಗ್ ನಲ್ಲಿ ಗಮನ ಸೆಳೆಯುತ್ತಿದ್ದು, 5 ಪಂದ್ಯಗಳಲ್ಲಿ 4 ಕ್ಯಾಚ್ ಹಾಗೂ ಸ್ಟಂಪಿಂಗ್ ಮಾಡಿದ್ದಾರೆ.
ಆಲ್ರೌಂಡರ್ ಗಳಾದ ಅಝ್ಮತುಲ್ಲಾ ಒಮರ್ಝೈ(234 ರನ್, 5 ವಿಕೆಟ್)ಹಾಗೂ ಮುಹಮ್ಮದ್ ನಬಿ(7 ಪಂದ್ಯಗಳಲ್ಲಿ 6 ವಿಕೆಟ್, 4 ಇನಿಂಗ್ಸ್ಗಳಲ್ಲಿ 41 ರನ್) ಅಫ್ಘಾನ್ ಗೆ ಆಸರೆಯಾಗುತ್ತಿದ್ದಾರೆ. ಅಫ್ಘಾನ್ ನ ಸಾರ್ವಕಾಲಿಕ ಶ್ರೇಷ್ಠ ಬೌಲರ್ ರಶೀದ್ ಖಾನ್ ಈ ತನಕ 7 ಪಂದ್ಯಗಳಲ್ಲಿ 7 ವಿಕೆಟ್ ಪಡೆದಿದ್ದಾರೆ.
ಆಸ್ಟ್ರೇಲಿಯ ತಂಡದಲ್ಲಿ ಆರಂಭಿಕ ಬ್ಯಾಟರ್ ಡೇವಿಡ್ ವಾರ್ನರ್ ಟೂರ್ನಿಯಲ್ಲಿ 2 ಶತಕ, ಅರ್ಧಶತಕ ಸಹಿತ ಒಟ್ಟು 428 ರನ್ ಗಳಿಸಿದ್ದಾರೆ. ಆಲ್ರೌಂಡರ್ ಮಿಚೆಲ್ ಮಾರ್ಷ್ ಬೌಲಿಂಗ್ನಲ್ಲಿ 2 ವಿಕೆಟ್ ಪಡೆದರೆ, ಬ್ಯಾಟಿಂಗ್ ನಲ್ಲಿ ಒಟ್ಟು 225 ರನ್ ಗಳಿಸಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಸ್ಟೀವ್ ಸ್ಮಿತ್(205 ರನ್) ಹಾಗೂ ಮಾರ್ನಸ್ ಲಾಬುಶೇನ್(272 ರನ್)ತಂಡವನ್ನು ಆಧರಿಸುತ್ತಿದ್ದಾರೆ.
ಗಾಯಾಳು ಮ್ಯಾಕ್ಸ್ವೆಲ್ ಬದಲಿಗೆ ಇಂಗ್ಲೆಂಡ್ ವಿರುದ್ಧ ಆಡಿದ್ದ ಕ್ಯಾಮರೂನ್ ಗ್ರೀನ್ 52 ಎಸೆತಗಳಲ್ಲಿ 47 ರನ್ ಗಳಿಸಿದ್ದರು.
ಬೌಲಿಂಗ್ ವಿಭಾಗದಲ್ಲಿ ಆಸೀಸ್ ನಾಯಕ ಪ್ಯಾಟ್ ಕಮಿನ್ಸ್ ಹಾಗೂ ಜೋಶ್ ಹೇಝಲ್ವುಡ್ ತಲಾ 10 ವಿಕೆಟ್ಗಳನ್ನು ಪಡೆದಿದ್ದಾರೆ. ಮಿಚೆಲ್ ಸ್ಟಾರ್ಕ್(9 ವಿಕೆಟ್) ವೇಗದ ದಾಳಿಯನ್ನು ಮುನ್ನಡೆಸುತ್ತಿದ್ದಾರೆ.
ಸ್ಪಿನ್ನರ್ ಆಡಮ್ ಝಾಂಪಾ ಒಟ್ಟು 19 ವಿಕೆಟ್ ಗಳನ್ನು ಕಬಳಿಸಿ ಪ್ರಸಕ್ತ ವಿಶ್ವಕಪ್ನಲ್ಲಿ ಗರಿಷ್ಠ ವಿಕೆಟ್ ಪಡೆದ ಬೌಲರ್ ಆಗಿದ್ದಾರೆ.







