ನ.21ರಿಂದ ಆ್ಯಶಸ್ ಸರಣಿ ಆರಂಭ | ಮೊದಲ ಟೆಸ್ಟ್ ನಲ್ಲಿ ಆಸ್ಟ್ರೇಲಿಯ-ಇಂಗ್ಲೆಂಡ್ ಮುಖಾಮುಖಿ

Photo Credit : X \ @AtishayyJain96
ಪರ್ತ್, ನ.20: ಆಸ್ಟ್ರೇಲಿಯ ಹಾಗೂ ಇಂಗ್ಲೆಂಡ್ ಕ್ರಿಕೆಟ್ ತಂಡಗಳ ನಡುವಿನ 2025-26ರ ಸಾಲಿನ ಪ್ರತಿಷ್ಠಿತ ಆ್ಯಶಸ್ ಸರಣಿಯು ಒಪ್ಟಸ್ ಸ್ಟೇಡಿಯಂನಲ್ಲಿ ಶುಕ್ರವಾರದಿಂದ ಆರಂಭವಾಗಲಿದೆ.
ಉಭಯ ತಂಡಗಳು ಐದು ಪಂದ್ಯಗಳ ಸರಣಿಯಲ್ಲಿ ಶುಭಾರಂಭ ಮಾಡುವ ಉತ್ಸಾಹದಲ್ಲಿವೆ. ಆಸ್ಟ್ರೇಲಿಯ ತಂಡವು ಪ್ರಮುಖ ವೇಗಿಗಳಾದ ಪ್ಯಾಟ್ ಕಮಿನ್ಸ್ ಹಾಗೂ ಜೋಶ್ ಹೇಝಲ್ವುಡ್ ಅನುಪಸ್ಥಿತಿಯಲ್ಲಿ ಕಣಕ್ಕಿಳಿಯುತ್ತಿದೆ. ಈ ಇಬ್ಬರು ಗಾಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಮಾರ್ಕ್ ವುಡ್ ಜೊತೆಗೆ ಜೋಪ್ರಾ ಆರ್ಚರ್ ಮರಳಿಕೆಯಿಂದಾಗಿ ಇಂಗ್ಲೆಂಡ್ ತಂಡ ಬಲಿಷ್ಠವಾಗಿದೆ.
ಆತಿಥೇಯ ಆಸ್ಟ್ರೇಲಿಯ ತಂಡವು ಆರಂಭಿಕ ಬ್ಯಾಟರ್ ಜಾಕ್ ವೆದರಾಲ್ಡ್ ಹಾಗೂ ವೇಗದ ಬೌಲರ್ ಬ್ರೆಂಡನ್ ಡೊಗೆಟ್ ಗೆ ಚೊಚ್ಚಲ ಪಂದ್ಯ ಆಡುವ ಅವಕಾಶ ನೀಡಿದೆ. ಡೊಗೆಟ್ ನಾಲ್ಕು ವರ್ಷಗಳಲ್ಲಿ ಮೊದಲ ಬಾರಿ ಚೊಚ್ಚಲ ಪಂದ್ಯವನ್ನಾಡಲಿರುವ ಆಸ್ಟ್ರೇಲಿಯದ ಮೊದಲ ವೇಗದ ಬೌಲರ್ ಆಗಿದ್ದಾರೆ.
ಕಮಿನ್ಸ್ ಅನುಪಸ್ಥಿತಿಯಲ್ಲಿ ಸ್ಟೀವ್ ಸ್ಮಿತ್ ಆಸ್ಟ್ರೇಲಿಯ ತಂಡವನ್ನು ನಾಯಕನಾಗಿ ಮುನ್ನಡೆಸಲಿದ್ದಾರೆ.
ಬೆನ್ ಸ್ಟೋಕ್ಸ್ ನಾಯಕತ್ವದಲ್ಲಿ ಇಂಗ್ಲೆಂಡ್ ತಂಡವು ಅವಕಾಶವನ್ನು ಬಳಸಿಕೊಂಡು ಸರಣಿಯಲ್ಲಿ ಆರಂಭದಲ್ಲೇ ಮುನ್ನಡೆ ಪಡೆಯುವ ವಿಶ್ವಾಸದಲ್ಲಿದೆ.
► ಅಂಕಿ ಅಂಶ
► ಆಸ್ಟ್ರೇಲಿಯ ತಂಡವು ತಾಯ್ನಾಡಿನಲ್ಲಿ ಆಡಿರುವ ಹಿಂದಿನ 15 ಆ್ಯಶಸ್ ಪಂದ್ಯಗಳ ಪೈಕಿ 13ರಲ್ಲಿ ಗೆಲುವು, 2ರಲ್ಲಿ ಡ್ರಾ ಸಾಧಿಸಿದೆ. 2011ರ ಜನವರಿಯಲ್ಲಿ ಇಂಗ್ಲೆಂಡ್ ವಿರುದ್ಧ ಕೊನೆಯ ಬಾರಿ ಸೋತಿತ್ತು.
► ಪರ್ತ್ 2017-18ರಲ್ಲಿ ಕೊನೆಯ ಬಾರಿ ಆ್ಯಶಸ್ ಟೆಸ್ಟ್ ಪಂದ್ಯದ ಆತಿಥ್ಯವಹಿಸಿತ್ತು. ಆಗ ಆಸ್ಟ್ರೇಲಿಯವು ಇನಿಂಗ್ಸ್ ಹಾಗೂ 41 ರನ್ಗಳಿಂದ ಜಯ ಸಾಧಿಸಿತ್ತು.
► ಟೆಸ್ಟ್ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ಎಡಗೈ ವೇಗದ ಬೌಲರ್ ಆಗಿ ವಸೀಂ ಅಕ್ರಂ ದಾಖಲೆ ಮುರಿಯಲು ಮಿಚೆಲ್ ಸ್ಟಾರ್ಕ್ಗೆ ಸರಣಿಯಲ್ಲಿ 13 ವಿಕೆಟ್ಗಳನ್ನು ಪಡೆಯಬೇಕಾಗಿದೆ.
►► ಪಂದ್ಯ ಆರಂಭದ ಸಮಯ: ಬೆಳಗ್ಗೆ 7:50
(ಭಾರತೀಯ ಕಾಲಮಾನ)







