ಬಾಂಗ್ಲಾದೇಶ ವಿರುದ್ಧ ಟೆಸ್ಟ್ ಸರಣಿ ಸಮಬಲಗೊಳಿಸಿದ ಆಸ್ಟ್ರೇಲಿಯ : ಮಿಚೆಲ್ ಸ್ಟಾರ್ಕ್ಗೆ 10 ವಿಕೆಟ್ಗಳ ಗೊಂಚಲು

Photo : PTI
ಮಕಾಯ್: ಹಿರಿಯ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ದ್ವಿತೀಯ ಪಂದ್ಯದಲ್ಲಿ ಒಟ್ಟು 10 ವಿಕೆಟ್ಗಳ ಗೊಂಚಲನ್ನು ಪಡೆಯುವ ಮೂಲಕ ಆಸ್ಟ್ರೇಲಿಯ ತಂಡವು ಬಾಂಗ್ಲಾದೇಶವನ್ನು ಇನಿಂಗ್ಸ್ ಹಾಗೂ 51 ರನ್ಗಳಿಂದ ಮಣಿಸುವಲ್ಲಿ ನೆರವಾದರು. ಆತಿಥೇಯ ತಂಡವು ಎರಡು ದಿನಗಳೊಳಗೆ ಎರಡು ಪಂದ್ಯಗಳ ಸರಣಿಯನ್ನು 1-1ರಿಂದ ಸಮಬಲಗೊಳಿಸಿದೆ.
ಸ್ಟಾರ್ಕ್ ಅವರು ಎರಡನೇ ಟೆಸ್ಟ್ ಪಂದ್ಯದಲ್ಲಿ 51 ರನ್ಗೆ 10 ವಿಕೆಟ್ಗಳನ್ನು ಉರುಳಿಸಿದರು. ಮೊದಲ ದಿನದಾಟವಾದ ಶನಿವಾರ 12 ರನ್ಗೆ ಆರು ವಿಕೆಟ್ಗಳನ್ನು ಪಡೆದಿದ್ದ ಸ್ಟಾರ್ಕ್ ರವಿವಾರ ಎರಡನೇ ಇನಿಂಗ್ಸ್ನಲ್ಲಿ 39 ರನ್ಗೆ ಇನ್ನೂ ನಾಲ್ಕು ವಿಕೆಟ್ಗಳನ್ನು ಉರುಳಿಸಿದರು.
ಬಾಂಗ್ಲಾದೇಶ ತಂಡವು ತನ್ನ ಮೊದಲ ಇನಿಂಗ್ಸ್ನಲ್ಲಿ ಕೇವಲ 64 ರನ್ ಗಳಿಸಿ ಆಲೌಟಾಯಿತು. ಆಸ್ಟ್ರೇಲಿಯ ಕೂಡ ಮಕಾಯ್ನ ಕ್ವೀನ್ಸ್ಲ್ಯಾಂಡ್ ಪಿಚ್ನಲ್ಲಿ ಬ್ಯಾಟಿಂಗ್ಗಾಗಿ ಪರದಾಟ ನಡೆಸಿದ್ದು, 8 ವಿಕೆಟ್ಗಳ ನಷ್ಟಕ್ಕೆ 165 ರನ್ನಿಂದ ತನ್ನ ಮೊದಲ ಇನಿಂಗ್ಸ್ ಮುಂದುವರಿಸಿ 210 ರನ್ ಗಳಿಸಿ ಆಲೌಟಾಯಿತು.
ಡಾರ್ವಿನ್ನಲ್ಲಿ ನಡೆದಿದ್ದ ಮೊದಲ ಟೆಸ್ಟ್ ಪಂದ್ಯದಲ್ಲಿ ಆಘಾತಕಾರಿ ಸೋಲನುಭವಿಸಿದ್ದ ಆಸ್ಟ್ರೇಲಿಯಕ್ಕೆ ಎರಡನೇ ಪಂದ್ಯದಲ್ಲಿನ ಗೆಲುವು ಅತ್ಯಂತ ಮಹತ್ವದ್ದಾಗಿದೆ.
ಶ್ರೇಷ್ಠ ಪ್ರದರ್ಶನ ನೀಡಿದ ಸ್ಟಾರ್ಕ್ ಅವರು ಸಾರ್ವಕಾಲಿಕ ಶ್ರೇಷ್ಠ ಟೆಸ್ಟ್ ಬೌಲರ್ಗಳ ಪಟ್ಟಿಯಲ್ಲಿ 10ನೇ ಸ್ಥಾನಕ್ಕೇರಿದರು. ಎಡಗೈ ವೇಗಿ ಇದೀಗ 445 ವಿಕೆಟ್ಗಳನ್ನು ಪಡೆದು, ದಕ್ಷಿಣ ಆಫ್ರಿಕಾದ ಡೇಲ್ ಸ್ಟೇಯ್ನ್ ದಾಖಲೆಯನ್ನು ಮುರಿದರು.
ಸ್ಟಾರ್ಕ್ ಟೆಸ್ಟ್ ಕ್ರಿಕೆಟ್ನಲ್ಲಿ ನಾಲ್ಕನೇ ಬಾರಿ 10 ವಿಕೆಟ್ಗಳ ಗೊಂಚಲು ಪಡೆದರು. ಪ್ಯಾಟ್ ಕಮಿನ್ಸ್ ಹಾಗೂ ನಾಥನ್ ಲಿಯೊನ್ ತಲಾ ಮೂರು ವಿಕೆಟ್ಗಳನ್ನು ಉರುಳಿಸಿ ಬಾಂಗ್ಲಾದೇಶ ತಂಡವನ್ನು ಎರಡನೇ ಇನಿಂಗ್ಸ್ನಲ್ಲಿ ಕೇವಲ 95 ರನ್ಗಳಿಗೆ ನಿಯಂತ್ರಿಸಿದರು.
ಬಾಂಗ್ಲಾದೇಶದ ಪರ ಎರಡನೇ ಇನಿಂಗ್ಸ್ನಲ್ಲಿ ನಜ್ಮುಲ್ ಹುಸೇನ್(31 ರನ್)ಅಗ್ರ ಸ್ಕೋರರ್ ಎನಿಸಿಕೊಂಡರು. ಮುಶ್ಫಿಕುರ್ರಹೀಂ ಔಟಾಗದೆ 29 ರನ್ ಗಳಿಸಿದರು. ಬಾಂಗ್ಲಾದೇಶದ ನಾಯಕ ನಜ್ಮುಲ್ ಹಾಗೂ ಹಿರಿಯ ವಿಕೆಟ್ಕೀಪರ್ ಬ್ಯಾಟರ್ ರಹೀಂಗೆ ಮತ್ತೊಂದು ಕಡೆಯಿಂದ ಉತ್ತಮ ಬೆಂಬಲ ಸಿಗಲಿಲ್ಲ. ನಜ್ಮುಲ್ ಹಾಗೂ ಮುಶ್ಫಿಕುರ್ರಹಿಂ ಮಾತ್ರ ಎರಡಂಕೆಯ ಸ್ಕೋರ್ ಗಳಿಸಿದರು. ಉಳಿದವರು ಸಂಪೂರ್ಣ ವಿಫಲರಾದರು.
8 ವಿಕೆಟ್ಗಳ ನಷ್ಟಕ್ಕೆ 165 ರನ್ನಿಂದ ತನ್ನ ಮೊದಲ ಇನಿಂಗ್ಸ್ ಮುಂದುವರಿಸಿದ ಆಸ್ಟ್ರೇಲಿಯ ತಂಡವು ತನ್ನ ನಿನ್ನೆಯ ಮೊತ್ತಕ್ಕೆ 45 ರನ್ ಸೇರಿಸುವಷ್ಟರಲ್ಲಿ ಎಲ್ಲ ವಿಕೆಟ್ಗಳನ್ನು ಕಳೆದುಕೊಂಡಿತು. ಕ್ಯಾಮರೂನ್ ಗ್ರೀನ್ ಹಾಗೂ ನಾಥನ್ ಲಿಯೊನ್ 9ನೇ ವಿಕೆಟ್ಗೆ 28 ರನ್ ಜೊತೆಯಾಟ ನಡೆಸಿದರು. ಬಾಂಗ್ಲಾದೇಶದ ಯಶಸ್ವಿ ಬೌಲರ್ ಶರೀಫುಲ್ ಇಸ್ಲಾಮ್ ಅವರು ಗ್ರೀನ್ ಅವರ ಹೋರಾಟಕ್ಕೆ ತೆರೆ ಎಳೆದರು.
ಗ್ರೀನ್ 105 ಎಸೆತಗಳಲ್ಲಿ 10 ಬೌಂಡರಿಗಳ ಸಹಿತ 67 ರನ್ ಗಳಿಸಿ ನಿರ್ಗಮಿಸಿದರು. ತವರು ಮೈದಾನದಲ್ಲಿ ಡಾರ್ವಿನ್ನಲ್ಲಿ ನಡೆದಿದ್ದ ಮೊದಲ ಟೆಸ್ಟ್ ಪಂದ್ಯದಲ್ಲಿ ಗ್ರೀನ್ ಶತಕ ಗಳಿಸಿದ್ದರು.
ಶರೀಫುಲ್ ವಿದೇಶಿ ನೆಲದಲ್ಲಿ ಅತ್ಯುತ್ತಮ ಬೌಲಿಂಗ್(7-48)ಮಾಡಿದ ಬಾಂಗ್ಲಾದೇಶದ ಬೌಲರ್ ಎನಿಸಕೊಂಡರು.
ಲಿಯೊನ್(ಔಟಾಗದೆ 32)ಹಾಗೂ ಜೋಶ್ ಹೇಝಲ್ವುಡ್(6 ರನ್)ಆಸ್ಟ್ರೇಲಿಯದ ಮೊತ್ತವನ್ನು 200ರ ಗಡಿ ದಾಟಿಸಿದರು. ಆಸ್ಟ್ರೇಲಿಯವು ಅಂತಿಮವಾಗಿ 210 ರನ್ ಗಳಿಸಿ ಆಲೌಟಾಗಿದ್ದು, ಮೊದಲ ಇನಿಂಗ್ಸ್ನಲ್ಲಿ ನಿರ್ಣಾಯಕ 146 ರನ್ ಮುನ್ನಡೆ ಸಂಪಾದಿಸಿತು.
ಬಾಂಗ್ಲಾದೇಶದ ಎರಡನೇ ಇನಿಂಗ್ಸ್ ಸ್ಟಾರ್ಕ್ ಅವರ ಮತ್ತೊಂದು ಭರ್ಜರಿ ಶೋಗೆ ವೇದಿಕೆಯಾಯಿತು. ಬಾಂಗ್ಲಾದೇಶದ ಆರಂಭಿಕ ಆಟಗಾರ ಶಾದ್ಮಾನ್ ಇಸ್ಲಾಮ್(1 ರನ್)ಸ್ಟಾರ್ಕ್ಗೆ ಮೊದಲ ಬಲಿಯಾದರು. ಮೂಮಿನುಲ್ ಹಕ್(0)ಸ್ಟಾರ್ಕ್ ಬೌಲಿಂಗ್ನಲ್ಲಿ ಕ್ಲೀನ್ ಬೌಲ್ಡಾದರು.
ಭೋಜನ ವಿರಾಮದ ನಂತರ ಸ್ಟಾರ್ಕ್ ಅವರು ಲಿಟನ್ ದಾಸ್ರನ್ನು ಶೂನ್ಯಕ್ಕೆ ಔಟ್ ಮಾಡಿದರು. ಸರಣಿಯ ಮೂರು ಇನಿಂಗ್ಸ್ನಲ್ಲಿ ವಿಕೆಟ್ಕೀಪರ್-ಬ್ಯಾಟರ್ ದಾಸ್ 27 ಎಸೆತಗಳನ್ನು ಎದುರಿಸಿದ್ದರೂ ಒಂದೂ ರನ್ ಗಳಿಸಿಲ್ಲ.
ಆಸ್ಟ್ರೇಲಿಯ ತಂಡವು ಟೀ ವಿರಾಮಕ್ಕೆ ಮೊದಲೇ ಎದುರಾಳಿಯ 10 ವಿಕೆಟ್ಗಳನ್ನು ಉರುಳಿಸಿ ಗೆಲುವಿನ ನಗೆ ಬೀರಿತು. ಸ್ಟಾರ್ಕ್ ಎರಡನೇ ಇನಿಂಗ್ಸ್ನಲ್ಲಿ 39 ರನ್ಸ್ಗೆ 4 ವಿಕೆಟ್ಗಳನ್ನು ಪಡೆದು ಸ್ವಲ್ಪದರಲ್ಲಿ ಟೆಸ್ಟ್ ಪಂದ್ಯದಲ್ಲಿ ತನ್ನ ಶ್ರೇಷ್ಠ ಪ್ರದರ್ಶನ(11-94) ಉತ್ತಮ ಪಡಿಸುವುದರಿಂದ ವಂಚಿತರಾದರು. 2016ರಲ್ಲಿ ಗಾಲೆಯಲ್ಲಿ ಶ್ರೀಲಂಕಾದ ವಿರುದ್ಧ ಸ್ಟಾರ್ಕ್ 94 ರನ್ಗೆ 11 ವಿಕೆಟ್ಗಳನ್ನು ಪಡೆದಿದ್ದರು.
ಸ್ಪಿನ್ನರ್ ಲಿಯೊನ್(3-25) ಕೊನೆಯ ಎರಡು ವಿಕೆಟ್ಗಳನ್ನು ಉರುಳಿಸಿ ಬಾಂಗ್ಲಾದೇಶ ಇನಿಂಗ್ಸ್ನ್ನು 95ಕ್ಕೆ ನಿಯಂತ್ರಿಸಿದರು. ನಾಯಕ ಪ್ಯಾಟ್ ಕಮಿನ್ಸ್(3-10)ತನ್ನದೇ ಆದ ಕೊಡುಗೆ ನೀಡಿದರು.
ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಒಟ್ಟು 10 ವಿಕೆಟ್ಗಳು ಹಾಗೂ ಸರಣಿಯಲ್ಲಿ 20 ರನ್ ಕಲೆ ಹಾಕಿ, ಒಟ್ಟು 12 ವಿಕೆಟ್ಗಳನ್ನು ಉರುಳಿಸಿದ್ದ ಮಿಚೆಲ್ ಸ್ಟಾರ್ಕ್ ‘ಪಂದ್ಯಶ್ರೇಷ್ಠ‘ ಹಾಗೂ ‘ಸರಣಿಶ್ರೇಷ್ಠ‘ ಗೌರವಕ್ಕೆ ಪಾತ್ರರಾದರು.






